Kannada Rajyotsava: ಬೆಳಗಾವಿ ಗಡಿ ಪ್ರವೇಶಿಸದಂತೆ ಮಹಾರಾಷ್ಟ್ರದ 3 ಸಚಿವರು, ಓರ್ವ ಎಂಪಿಗೆ ನಿರ್ಬಂಧ
ಬೆಳಗಾವಿ, ಅಕ್ಟೋಬರ್ 31: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರೀ ಕನ್ನಡ ರಾಜ್ಯೋತ್ಸವನ್ನ ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ. ಈ ನಡುವೆ ಬೆಳಗಾವಿಯಲ್ಲಿ ನವೆಂಬರ್ 01 ಕರ್ನಾಟಕ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆಗೆ ನಿರ್ಧರಿಸಿದ್ದ ಎಂಇಎಸ್ಗೆ ಬೆಳಗಾವಿ ಜಿಲ್ಲಾಡಳಿತ ಶಾಕ್ ಕೊಟ್ಟಿದೆ.
ಹೌದು, ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪುಂಡರು ಕರಾಳ ದಿನ ಆಚರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮೂವರು ಸಚಿವರು ಹಾಗೂ ಒಬ್ಬ ಸಂಸದರಿಗೆ ಅಕ್ಟೋಬರ್ .31 ರಿಂದ ನವೆಂಬರ್ 2ರ ಸಂಜೆವರೆಗೆ ಬೆಳಗಾವಿ ನಗರ ಹಾಗೂ ಜಿಲ್ಲೆಯ ಗಡಿಪ್ರವೇಶಿಸದಂತೆ ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಈ ವರ್ಷಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಕನ್ನಡಪರ ಸಂಘಟನೆಗಳು ಅದ್ದೂರಿ ರಾಜ್ಯೋತ್ಸವ ಆಚರಣೆಗೆ ತಯಾರಿ ನಡೆಸಿವೆ. ಆದರೆ, ರಾಜ್ಯೋತ್ಸವ ದಿನದಂದೇ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕರಾಳ ದಿನಾಚರಣೆ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸಚಿವರಾದ ಶಂಭುರಾಜ ದೇಸಾಯಿ, ಚಂದ್ರಕಾಂತ ಪಾಟೀಲ, ದೀಪಕ್ ಕೇಸರಕರ್ ಮತ್ತು ಸಂಸದ ಧೈರ್ಯಶೀಲ ಮಾನೆ ಅವರು ಬೆಳಗಾವಿ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಬೆಳಗಾವಿ ಮತ್ತು 800 ಕ್ಕೂ ಹೆಚ್ಚು ಗಡಿ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸುವ ಸಂಘಟನೆಯಾದ ಎಂಇಎಸ್ ಆಯೋಜಿಸಿದ್ದ 'ಕರಾಳ ದಿನಾಚರಣೆ' ಕಾರ್ಯಕ್ರಮದಲ್ಲಿ ಕೆಲವು ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಬೆಳಗಾವಿ ಜಿಲ್ಲಾಡಳಿತ ಎಂಇಎಸ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದು, ಕಾರ್ಯಕ್ರಮಕ್ಕೆ ಮುಂದಾದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಕಳೆದ ವರ್ಷ, ನವೆಂಬರ್ 1 ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಎಂಇಎಸ್ ಮಹಾರಾಷ್ಟ್ರದ ಹಲವು ನಾಯಕರನ್ನು ಆಹ್ವಾನಿಸಿದ ನಂತರ ಹಲವಾರು ಪ್ರತಿಭಟನೆಗಳು ಸಾಕ್ಷಿಯಾಗಿದ್ದವು. ಏಕನಾಥ್ ಶಿಂಧೆ ಅವರ ಹೇಳಿಕೆಗೆ ಉತ್ತರ ನೀಡದ ರಾಜ್ಯ ನಾಯಕರ ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು ಮತ್ತು ನವೆಂಬರ್ 1 ರಂದು ಬೆಳಗಾವಿಗೆ ಮಹಾರಾಷ್ಟ್ರ ನಾಯಕರನ್ನು ಬಿಡದಂತೆ ಒತ್ತಾಯಿಸಿದ್ದವು.

ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ
ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ತುಕಡಿ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮಂಗಳವಾರ ತಿಳಿಸಿದ್ದಾರೆ. ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ.












Click it and Unblock the Notifications