Manmohan Singh: ಬೆಳಗಾವಿ ಕಾಂಗ್ರೆಸ್ ಕಾರ್ಯಕ್ರಮ ದಿಢೀರ್ ರದ್ದು!
ಕಾಂಗ್ರೆಸ್ ಪಕ್ಷದ ಬೆಳಗಾವಿ ಕಾರ್ಯಕ್ರಮ ದಿಢೀರ್ ರದ್ದಾಗಿದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನರಾದ ಸುದ್ದಿ ಹೊರಬಿದ್ದ ತಕ್ಷಣ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ. ಈ ಸುದ್ದಿ ತಿಳಿದ ತಕ್ಷಣವೇ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು & ರಾಹುಲ್ ಗಾಂಧಿ ವಿಶೇಷ ವಿಮಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದಾರೆ. ಹೀಗೆ ಕಾಂಗ್ರೆಸ್‌ನ ಕೇಂದ್ರ ನಾಯಕರ ಜೊತೆಗೆ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ದೆಹಲಿಗೆ ತೆರಳಲಿದ್ದಾರೆ. ಹೀಗಿದ್ದಾಗ ಕಾಂಗ್ರೆಸ್ ಪಕ್ಷದ ಬೆಳಗಾವಿ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಕರ್ನಾಟಕದ ಗಡಿ ಜಿಲ್ಲೆ & ಕುಂದಾನಗರಿ ಬೆಳಗಾವಿಯ ನೆಲದಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ & ಐತಿಹಾಸಿಕ ಕಾರ್ಯಕ್ರಮ ನಡೆಸಲು ಸಿದ್ಧತೆ ಕೈಗೊಂಡಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿಜಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಲಾಗಿತ್ತು. ಈ ಅಧಿವೇಶನ ನಡೆದು 100 ವರ್ಷ ತುಂಬಿರುವ ಹಿನ್ನೆಲೆ ಶತಮಾನೋತ್ಸವ ಸಂಭ್ರಮ ಆಚರಿಸಲು ಸಿದ್ಧತೆ ನಡೆಸಲಾಗಿತ್ತು. ಕರ್ನಾಟಕದ ಕಾಂಗ್ರೆಸ್ ನಾಯಕರಿಂದಲೇ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಮಾಜಿ ಪ್ರಧಾನಿ ದಿಢೀರ್ ಆಸ್ಪತ್ರೆಗೆ ದಾಖಲು...
ಬೆಳಗಾವಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಮೇತ ಘಾಟಾನುಘಟಿ ನಾಯಕರೇ ಆಗಮಿಸಿದ್ದರು. ಇಂದು ಬೆಳಗ್ಗೆಯಿಂದ ಬೃಹತ್ ಕಾರ್ಯಕ್ರಮವು ಆರಂಭ ಆಗಬೇಕಿತ್ತು. ಆದರೆ ದಿಢೀರ್ ಮನಮೋಹನ್ ಸಿಂಗ್ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು.
ಭಾರತ ಕಂಡ ಶ್ರೇಷ್ಠ ನಾಯಕರ ಸಾಲಿಗೆ ಮನಮೋಹನ್ ಸಿಂಗ್ ಅವರು ಕೂಡ ಸೇರಿದ್ದು, ವಯೋ ಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಹಾಗೇ, ಮನಮೋಹನ್ ಸಿಂಗ್ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೂಡ ನೀಡಲಾಗುತ್ತಿತ್ತು. ಆದರೆ ದಿಢೀರ್ ಇಂತಹ ಬೆಳವಣಿಗೆ ನಡೆದು ಹೋಗಿದೆ. ತಕ್ಷಣವೇ ರಾಹುಲ್ ಗಾಂಧಿ & ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ವಿಮಾನದಲ್ಲಿ ದೆಹಲಿಗೆ ಹೊರಟಿದ್ದಾರೆ.
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ
ಮನಮೋಹನ್ ಸಿಂಗ್ ಅವರು ನಿನ್ನೆ ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಮಯದಲ್ಲಿ ಸಾಕಷ್ಟು ಆತಂಕ ನಿರ್ಮಾಣ ಆಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದು ಈ ಸುದ್ದಿ ಎಲ್ಲೆಡೆ ಹಬ್ಬಿದೆ. ಆ ಕೂಡಲೇ ರಾಜ್ಯ ಸರ್ಕಾರವು ಶೋಕಾಚರಣೆ ಘೋಷಣೆ ಮಾಡಿದ್ದು, ಕಾಂಗ್ರೆಸ್ ಪಕ್ಷದಿಂದ ನಡೆಸಲು ಉದ್ದೇಶಿಸಿದ್ದ ಬೆಳಗಾವಿ ಕಾರ್ಯಕ್ರಮ ಕೂಡ ರದ್ದಾಗಿದೆ. ಮತ್ತೊಂದು ಕಡೆ ಕರ್ನಾಟಕದಲ್ಲಿ ಒಟ್ಟು 7 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದ್ದು, ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.












Click it and Unblock the Notifications