ಹಂಗಾಮಿ ಸ್ಪೀಕರಾಗಿ ಬೋಪಯ್ಯ : ಸುಪ್ರೀಂನಲ್ಲಿ ವಿಚಾರಣೆ
ಬೆಂಗಳೂರು, ಮೇ 19 : ವಿಶ್ವಾಸಮತವೆಂಬ ಅಗ್ನಿಪರೀಕ್ಷೆಯನ್ನು ಎದುರಿಸುವ ಮೊದಲೇ ಭಾರತೀಯ ಜನತಾ ಪಕ್ಷ ಮತ್ತೊಂದು ಮಧ್ಯಂತರ ಪರೀಕ್ಷೆಯಲ್ಲಿ ಪಾರಾಗಿ ಬರಬೇಕಾಗಿದೆ.
ಹಂಗಾಮಿ ಸಭಾಧ್ಯಕ್ಷರನ್ನಾಗಿ ಕೆಜಿ ಬೋಪಯ್ಯ ಅವರನ್ನು ರಾಜ್ಯಪಾಲರಾದ ವಜುಭಾಯಿ ವಾಲಾ ಅವರನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅದು ಶನಿವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಬರಲಿದೆ.
ಮೇ 17ರಂದು ಬೆಳಿಗ್ಗೆ 9 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಯಡಿಯೂರಪ್ಪನವರು, ಎರಡೇ ದಿನಗಳಲ್ಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕಾಗಿದೆ. ಅಧಿವೇಶನ 11 ಗಂಟೆಗೆ ಆರಂಭವಾಗಲಿರುವುದರಿಂದ ಸುಪ್ರೀಂ ಕೋರ್ಟ್ ಏನು ತೀರ್ಪು ನೀಡುತ್ತದೋ ಎಂಬ ಕುತೂಹಲ ಎಲ್ಲರಲ್ಲಿದೆ.

ಬೋಪಯ್ಯ ಅವರ ವಿರುದ್ಧ ಕಾಂಗ್ರೆಸ್ ತಿರುಗಿಬಿದ್ದಿರುವುದೇಕೆಂದರೆ, ಹಂಗಾಮಿ ಸ್ಪೀಕರ್ ಅವರು ಕಟ್ಟಾ ಯಡಿಯೂರಪ್ಪ ಬೆಂಬಲಿಗ. 2010ರಲ್ಲಿ ಯಡಿಯೂರಪ್ಪನವರ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಕೇಳಿಬಂದಿದ್ದಾಗ, ಅವರ ವಿರುದ್ಧ ತಿರುಗಿಬಿದ್ದಿದ್ದ 11 ಬಿಜೆಪಿ ಶಾಸಕರು ಮತ್ತು 5 ಪಕ್ಷೇತ್ರ ಅಭ್ಯರ್ಥಿಗಳನ್ನು ಬೋಪಯ್ಯ ಅನರ್ಹಗೊಳಿಸಿದ್ದರು.
ಬಂಡಾಯ ಶಾಸಕರನ್ನು ಅನರ್ಹಗೊಳಿಸಿದ್ದರಿಂದ ಯಡಿಯೂರಪ್ಪನವರು ವಿಶ್ವಾಸಮತದಲ್ಲಿ ಗೆದ್ದಿದ್ದರು. ಬಂಡಾಯವೆದ್ದಿದ್ದ ಶಾಸಕರ ಅನರ್ಹತೆ ಕಾನೂನಿಗೆ ವಿರುದ್ಧವಾಗಿದೆ ಮತ್ತು ಸಭಾಧ್ಯಕ್ಷರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಅವರಿಗೆ ಎಚ್ಚರಿಕೆ ನೀಡಿ, ಶಾಸಕರ ಅನರ್ಹತೆಯನ್ನು ಸರ್ವೋಚ್ಚ ನ್ಯಾಯಾಲಯ 2011ರಲ್ಲಿ ರದ್ದುಗೊಳಿಸಿತ್ತು.
ಅಂಥದೇ ಸಂದರ್ಭ ಈಗ ಕೂಡ ಬರಬಹುದು ಎಂಬುದು ಕಾಂಗ್ರೆಸ್ ನ ಆತಂಕ. ಅಲ್ಲದೆ, 5 ಬಾರಿ ಶಾಸಕರಾಗಿರುವ ಬೋಪಯ್ಯ ಅವರು ಹಿರಿಯ ರಾಜಕಾರಣಿ ಕೂಡ ಅಲ್ಲ. ಎಂಟು ಬಾರಿ ಶಾಸಕರಾಗಿರುವ ಆರ್ ವಿ ದೇಶಪಾಂಡೆಯಂಥ ಹಿರಿಯ ರಾಜಕಾರಣಿಯಿದ್ದರೂ 62 ವರ್ಷದ ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರನ್ನಾಗಿ ನೇಮಕ ಮಾಡಿರುವುದು ಕಾಂಗ್ರೆಸ್ ಕಣ್ಣು ಕೆಂಪಾಗುವಂತೆ ಮಾಡಿದೆ.
ಮೇ 16ರ ಮಧ್ಯರಾತ್ರಿ, ರಾಜ್ಯಪಾಲರು ಯಡಿಯೂರಪ್ಪನವರನ್ನು ಆಹ್ವಾನಿಸಿದ್ದನ್ನು ಪ್ರಶ್ನಿಸಿ ಹೂಡಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಸಿಕ್ರಿ, ನ್ಯಾಯಮೂರ್ತಿ ಬೊಬ್ಡೆ, ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರೇ ಕೆಜಿ ಬೋಪಯ್ಯ ಅವರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನೂ ಮಾಡಲಿದ್ದಾರೆ.












Click it and Unblock the Notifications