ಬಟಾಣಿ ತಿನ್ಕೊಂಡು ಭಾರತ ನ್ಯೂಝಿಲೆಂಡ್ ಮ್ಯಾಚ್ ನೋಡೋ ಹುಡುಗರೇ ಈ ಸ್ಟೋರಿ ಓದಿ...
ಬೆಂಗಳೂರು ಮಾರ್ಚ್ 9: ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ಭಾರತ ಮತ್ತು ನ್ಯೂಝಿಲೆಂಡ್ ನಡುವೆ ರೋಚಕ ಪಂದ್ಯ ನಡೆಯಲಿದ್ದು ವೇದಿಕೆ ಸಜ್ಜಾಗಿದೆ. ಮ್ಯಾಚ್ ವೀಕ್ಷಿಸಲು ಈಗಾಗಲೆ ಭಾರತೀಯರು ಟಿವಿ ಮುಂದೆ ಕುಳಿತುಕೊಳ್ಳಲು ತಯಾರಿ ನಡೆಸಿದ್ದು, ಚಿಪ್ಸ್, ಕೂಲ್‌ಡ್ರಿಂಗ್, ಬಟಾಣಿ ಇತ್ಯಾದಿ ತಿಂಡಿಗಳನ್ನು ಖರೀದಿಸುತ್ತಿರುವುದು ಬೇಕರಿಗಳ ಮುಂದೆ ಸಾಮಾನ್ಯವಾಗಿ ಕಂಡು ಬರುತ್ತಿದೆ. ನಿಮಗೂ ಮ್ಯಾಚ್ ನೋಡಿಕೊಂಡು ಬಟಾಣಿ ತಿನ್ನುವ ಅಭ್ಯಾಸ ಇದ್ದರೆ ಈ ಸ್ಟೋರಿ ತಪ್ಪದೇ ಓದಿ..
ರಾಜ್ಯದ ಹಲವೆಡೆ ಜನವರಿ ತಿಂಗಳಿನಿಂದಲೂ ಆಹಾರ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸಂಗ್ರಹಿಸಿದ ಬಟಾಣಿ ಮಾದರಿಯಲ್ಲಿ ಕೃತಕ ಕಲಬೆರಕೆ ಅಂಶ ಪತ್ತೆಯಾಗಿದೆ. ಕಣ್ಣಿಗೆ ಆಕರ್ಷಕವಾಗಿ ಕಾಣುವ ಬಣ್ಣ ಬಣ್ಣದ ಬಟಾಣಿ ಆರೋಗ್ಯಕ್ಕೆ ಹಾನಿಕಾರಕ ಎಂದು ದೃಢಪಟ್ಟಿದೆ. ಬಟಾಣಿಯಲ್ಲಿ ಬ್ರಿಲಿಯಂಟ್ ಬ್ಲೈ, ಟೆಟಾರ್ಜಿನ್ ಅಂದ್ರೆ ಹಳದಿ ಬಣ್ಣವಿರುವ ರಾಸಾಯನಿಕ ಇರುವುದು ಪತ್ತೆಯಾಗಿದೆ. ಇದರ ಸೇವನೆಯಿಂದ ಮೂಳೆ ಸವತೆ, ಶಕ್ತಿ ಕುಗ್ಗುವುದು, ಆಯಾಸದಂತಹ ಅನೇಕ ಕಾಯಿಲೆಗಳು ಬರಲಿವೆ ಎಂದು ಆಹಾರ ತಜ್ಞರು ಹೇಳಿದ್ದಾರೆ.

ಅಷ್ಟೇ ಅಲ್ಲ ಬಟಾಣಿಯಲ್ಲಿ ಕ್ಯಾನ್ಸರ್ ತರುವ ಅಂಶವಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಕಲರ್ ಬಳಕೆ ನಿಷೇಧದ ಬಗ್ಗೆ ಶಿಫಾರಸು ಮಾಡಿದ್ದಾರೆ. ಆದರೂ ಕೂಡ ವ್ಯಾಪಾರಿಗಳು ಬಿಂದಾಸ್ ಆಗಿ ಕಲರ್‌ಫುಲ್ ಬಟಾಣಿಯನ್ನು ಮಾರುತ್ತಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್, ಸಣ್ಣ ಪುಟ್ಟ ಅಂಗಡಿಗಳು ಸೇರಿದಂತೆ ದೊಡ್ಡ ಬೇಕರಿಗಳಲ್ಲೂ ಕಲರ್ ಬಟಾಣಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಟೈಪ್ ಪಾಸ್ ಬಟಾಣಿ
ಬಟಾಣಿ ಟೈಪ್ ಪಾಸ್ ಆಹಾರವಾಗಿದೆ. ವಿಶೇಷವಾಗಿ ಹೆಚ್ಚಿನ ಜನ ಇಂಡಿಯಾ ಕ್ರಿಕೆಟ್ ಪಂದ್ಯವಿದ್ದಾಗ ಅಥವಾ ಬಾರ್‌ಗಳಲ್ಲಿ ಎಣ್ಣೆ ಹೊಡೆಯುವಾಗ ಸೇವಿಸುತ್ತಾರೆ. ಆತಂಕಕಾರಿ ವಿಷಯ ಅಂದರೆ ಈ ಕಲರ್‌ಫುಲ್ ಬಟಾಣಿಗಳು ಮಕ್ಕಳನ್ನು ಬೇಗ ಆಕರ್ಷಿಸುತ್ತವೆ. ಹೀಗಾಗಿ ಶಾಲಾ ಕಾಲೇಜುಗಳ ಬಳಿ ಇಂತಹ ಕಲಬೆರಿಕೆ ಬಟಾಣಿಗಳನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಏನೂ ಅರಿಯ ಮಕ್ಕಳು ಶಾಲೆ ಬಳಿ ಅವುಗಳನ್ನು ಕೊಂಡು ತಿನ್ನುತ್ತಾರೆ. ಈ ಬಗ್ಗೆ ಪೋಷಕರು ಮಕ್ಕಳಿಗೆ ಜಾಗೃತಿ ಮೂಡಿಸುವುದು ಅತ್ಯಾವಶ್ಯಕ.
ಜೊತೆಗೆ ಯುವಕರೊಂದಿಗೆ ದೊಡ್ಡವರು ಕೂಡ ಸ್ನೇಹಿತರೊಂದಿಗೆ ಸೇರಿದಾಗ ಮ್ಯಾಚ್ ನೋಡುವಾಗ ಟೈಪ್ ಪಾಸ್‌ಗಾಗಿ ಹೆಚ್ಚಾಗಿ ಸೇವಿಸುತ್ತಾರೆ. ಹೀಗಾಗಿ ಬಟಾಣಿ ಸೇವನೆಗೂ ಮುನ್ನ ಎಚ್ಚರಿಕೆಯಿಂದಿರುವುದು ಮುಖ್ಯ, ಸ್ವಲ್ಪ ಯಾಮಾರಿದರೆ ಈ ಬಟಾಣಿಯಲ್ಲಿರುವ ಕ್ಯಾನ್ಸರ್ ಅಂಶ ನಿಮ್ಮ ದೇಹಕ್ಕೆ ಸೇರಿ ಗಂಭೀರ ಕಾಯಿಲೆಗೆ ನೀವು ಒಳಗಾಗಬಹುದು.

ಕಲರ್ ಕಲ್ಲಂಗಡಿ
ಬಟಾಣಿ ಮಾತ್ರವಲ್ಲದೆ ಕಲ್ಲಂಗಡಿಯಲ್ಲೂ ರಾಸಾಯನಿಕ ಕಲರ್ ಬಳಕೆ ಮಾಡುತ್ತಿರುವುದು ದಾಳಿಯಿಂದ ಗೊತ್ತಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಮಾರುಕಟ್ಟೆಗೆ ಬರುವ ಕಲ್ಲಂಗಡಿ ಆಕರ್ಷಕವಾಗಿ ಕಾಣಲು ಅದಕ್ಕೆ ಕಲರ್ ಇಜೆಕ್ಟ್ ಮಾಡುತ್ತಿರುವ ವಿಚಾರ ತಿಳಿದು ಬಂದಿದೆ. ಹೀಗಾಗಿ ಯಾವುದೇ ಆಹಾರ ಹೆಚ್ಚು ಕಲರ್‌ಫುಲ್ ಆಗಿದೆ ಆಕರ್ಷಕವಾಗಿದೆ ಅಂದರೆ ಕಣ್ಣು ಮುಚ್ಚಿ ಸೇವಿಸಿಬಿಡಬೇಡಿ. ಆ ಪಾದಾರ್ಥ ನಿಜಕ್ಕೂ ಅಷ್ಟೊಂದು ಬಣ್ಣ ಇದಿಯಾ ಇಲ್ವಾ ಅನ್ನೋದನ್ನು ಯೋಚಿಸಿ, ಅನುಮಾನ ಬಂದರೆ ಅದನ್ನು ತಿನ್ನಬೇಡಿ.
ಇಡ್ಲಿ ಪ್ಲಾಸ್ಟಿಕ್ ಪೇಪರ್
ಇನ್ನೂ ಇಡ್ಲಿ ತಯಾರಿಸಲು ಬಳಕೆ ಮಾಡುವ ಪ್ಲಾಸ್ಟಿಕ್‌ನಿಂದಲೂ ಕ್ಯಾನ್ಸರ್ ಅಂಶ ಪತ್ತೆಯಾಗಿದೆ. ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಪೇಪರ್ ಹಾಗೂ ಅದನ್ನು ಪಾರ್ಸಲ್ ಮಾಡಲು ಕೂಡ ಪ್ಲಾಸ್ಟಿಕ್ ಪೇಪರ್ ಅನ್ನು ಬಳಕೆ ಮಾಡಲಾಗಿದೆ. ಈ ಪೇಪರ್ ಸುಟ್ಟು ಇಡ್ಲಿಯಲ್ಲಿ ಕ್ಯಾನ್ಸರ್ ಅಂಶ ಸೇರಿಕೊಳ್ಳುತ್ತದೆ. ಇದರ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications