26 ತಿಂಗಳ ಬಾಕಿ ಬಿಲ್ ಪಾವತಿಗೆ ತನಿಖೆ ನೆಪ: ದಯಾಮರಣ ಕೊಡಿ ಎಂದ ಬಿಬಿಎಂಪಿ ಗುತ್ತಿಗೆದಾರರು

ಬೆಂಗಳೂರು, ಆಗಸ್ಟ್‌ 08: ಬೆಂಗಳೂರಿನಲ್ಲಿ ಈಗ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಸಿಡಿಮಿಡಿ ಗೊಂಡಿದ್ದಾರೆ. ಇನ್ನುಮುಂದೆ ಯಾವುದೇ ಕೆಲಸ ಮಾಡಲ್ಲ ಎಂದು ಎಚ್ಚರಿಕೆ ಕೊಟ್ಟು ಪ್ರಕಟಣೆ ಹೊರಡಿಸಿದ್ದಾರೆ.

ಬೆಂಗಳೂರು ನಗರದ ಅಭಿವೃದ್ಧಿ ಕೆಲಸಗಳಿಗೆ ಸಾಥ್ ನೀಡುತ್ತಿದ್ದ ಗುತ್ತಿಗೆದಾರೆ ರೊಚ್ಚಿಗೆದ್ದಿದ್ದಾರೆ. ಬಾಕಿ ಬಿಲ್ ಪಾವತಿ ಮಾಡಿ ಅಂದರೆ ತನಿಖೆಯ ನೆಪ ಒಡ್ಡಿ ಬಿಲ್ ಬಿಡುಗಡೆ ಮಾಡದೇ ವಿಳಂಬ ನೀತಿ ತೋರುತ್ತಿರುವ ಸರ್ಕಾರ ಎಂದು ಗರಂ ಆಗಿದ್ದಾರೆ. ಜೊತೆಗೆ ಇಂದಿನಿಂದ ಸುತಾರಾಂ ಯಾವುದೇ ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

bbmp-contractors-stopped-work

ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದ ಗುತ್ತಿಗೆದಾರರು ಈಗ ಪಾಲಿಕೆ ಪೆಂಡಿಂಗ್ ಇಟ್ಟು ಕೊಂಡ ಹಣ ರಿಲೀಸ್ ಮಾಡದೇ ಬದುಕು ನಡೆಸಲು ಹೆಣಗಾಡುತ್ತಿದ್ದಾರೆ. ಹಲವು ಬಾರಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಮನವಿ ಮಾಡಿದ್ದ ಗುತ್ತಿಗೆದಾರರು, ಇದೀಗ ನಮಗೆ ಬಾಕಿ ಹಣ ಕೊಡಿಸಿ ಇಲ್ಲ ದಯಾಮರಣ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಸಿಲಿಕಾನ್‌ ಸಿಟಿಯ ರಸ್ತೆ, ಚರಂಡಿ, ಹೀಗೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ನೆರವಾಗಿದ್ದ ಬಿಬಿಎಂಪಿ ಗುತ್ತಿಗೆದಾರರಿಗೆ ಇದೀಗ ಸಂಕಷ್ಟ ಎದುರಾಗಿದೆ. ಕಳೆದ 26 ತಿಂಗಳುಗಳಿಂದ ಗುತ್ತಿಗೆದಾರರಿಗೆ ಬಾಕಿ ಬಿಲ್‌ ನೀಡದ ಪಾಲಿಕೆಯಿಂದ ಗುತ್ತಿಗೆದಾರರು ಹೈರಾಣಗಿದ್ದಾರೆ. ಸದ್ಯ ಬಿಬಿಎಂಪಿ, ಗುತ್ತಿಗೆದಾರರಿಗೆ ಎರಡೂವರೆ ಸಾವಿರ ಕೋಟಿ ಬಿಲ್‌ ಬಾಕಿ ಉಳಿಸಿಕೊಂಡಿದ್ದು ಇದರಿಂದ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

2023-24 ನೇ ಸಾಲಿನ ಪಾಲಿಕೆ ತೆರಿಗೆ ಹಣ ಸುಮಾರು 2,000ರೂ ಕೋಟಿ ಲಭ್ಯವಿದ್ದರೂ, ಸುಮಾರು 26 ತಿಂಗಳುಗಳಿಂದ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿ ಮಾಡದೇ ಇರುವುದಕ್ಕೆ ಗುತ್ತಿಗೆದಾರರ ಸಂಘ ಆಕ್ರೋಶ ಹೊರಹಾಕಿದೆ.

ಇನ್ನು 2019 ರಿಂದ 2023ರವರೆಗೆ ನಡೆದಿರುವ ಕಾಮಗಾರಿಗಳ ವರದಿ ನೀಡಲು ಡಿಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದು, ಇದು ಕೂಡ ಬಿಬಿಎಂಪಿ ಗುತ್ತಿಗೆದಾರರನ್ನ ಹೈರಾಣಾಗಿಸಿದೆ. ಸದ್ಯ ಈ ವಿಚಾರವಾಗಿ ಮುಂದುವರಿದಿರುವ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌, ಇದೀಗ ಕಾಮಗಾರಿಗಳ ತನಿಖೆ ನಡೆಸೋಕೆ ಎಸ್‌ಐಟಿ ತಂಡವನ್ನು ಕೂಡ ರಚನೆ ಮಾಡಿದ್ದಾರೆ.

bbmp-contractors-stopped-work

ತಮಗೆ ಬರಬೇಕಿದ್ದ ಬಿಲ್‌ ಹಣವನ್ನ ಕೊಡಲು ಪಾಲಿಕೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿರುವ ಗುತ್ತಿಗೆದಾರರ ಸಂಘ, ಇದರಿಂದ ನೊಂದು ಹೋಗಿ ಸುಮಾರು 500 ಜನರು ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣ ಕೋರಿದ್ದೇವೆ, ಒಂದು ವೇಳೆ ಬಿಲ್‌ ಕೊಡದಿದ್ದರೆ ನಾವೂ ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಕಾಮಗಾರಿ ಮಾಡಿರುವ ಗುತ್ತಿಗೆದಾರರು ಬಾಕಿ ಬಿಲ್‌ ಸಂಬಂಧ ಈ ಹಿಂದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನ ಕೂಡ ಭೇಟಿ ಮಾಡಿ ಮನವಿ ಸಲ್ಲಿಸಿದ್ದರಂತೆ. ಈ ವೇಳೆ ಸರ್ಕಾರ ಬಾಕಿ ಹಣ ನೀಡಲು ಸೂಚನೆ ನೀಡಿತ್ತು. ಆದರೆ ಪಾಲಿಕೆ ಹಣ ನೀಡುತ್ತಿಲ್ಲ ಎಂದು ಗುತ್ತಿಗೆದಾರರು ಗಂಭೀರ ಆರೋಪ ಮಾಡುತ್ತಿದ್ದಾರೆ.

ಇತ್ತ ಮತ್ತೊಂದೆಡೆ ಗುತ್ತಿಗೆದಾರರ ಸಂಘದಲ್ಲೇ ಬಿಲ್‌ ಬಾಕಿ ಬಗ್ಗೆ ಸಮನ್ವಯತೆ ಕೊರತೆ ಇದೆಯಾ ಎನ್ನುವುದು ಸುದ್ದಿಗೋಷ್ಠಿ ಬಳಿಕ ನಡೆದ ಗಲಾಟೆಯಲ್ಲಿ ಬಯಲಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರನ್ನೇ ತರಾಟೆಗೆ ತೆಗೆದುಕೊಂಡ ಕೆಲ ಗುತ್ತಿಗೆದಾರರು, ಡಿಸಿಎಂ ಡಿ.ಕೆ.ಶಿವಕುಮಾರ್‌ರವರೇ ಎಲ್ಲದಕ್ಕೂ ಸ್ಪಷ್ಟನೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರು, ಪಾಲಿಕೆ ಹಾಗೂ ಸರ್ಕಾರದ ಮಧ್ಯೆ ಶೀತಲಸಮರ ಶುರುವಾಗಿದ್ದು, ಒಂದು ಕಡೆ ಗುತ್ತಿಗೆದಾರರು ಬಾಕಿ ಬಿಲ್‌ಗೆ ಪಟ್ಟುಹಿಡಿದಿದರೆ, ಮತ್ತೊಂದು ಕಡೆ ಸರ್ಕಾರ ಎಸ್‌ಐಟಿ ಟೀಂ ಮೂಲಕ ತನಿಖೆಗೆ ಆದೇಶ ಹೊರಡಿಸುವ ಮೂಲಕ ತಿರುಗುಬಾಣ ಬಿಟ್ಟಿದೆ. ಸದ್ಯ ಈ ಸಂಘರ್ಷದಲ್ಲಿ ಯಾರಿಗೆ ಜಯ ಸಿಗುತ್ತದೆ, ಯಾವ್ಯಾವ ಗುತ್ತಿಗೆದಾರರ ಸ್ಥಿತಿ ಏನಾಗುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+