ಬಸವರಾಜ ಹೊರಟ್ಟಿಗೆ ಶಿಕ್ಷಣ ಸಚಿವ ಸ್ಥಾನ? ಜೆಡಿಎಸ್ ಲೆಕ್ಕಾಚಾರ ಏನು?
ಬೆಂಗಳೂರು, ನವೆಂಬರ್ 05: ಶಿಕ್ಷಣ ಸಚಿವರಾಗಿದ್ದ ಮಹೇಶ್ ಅವರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಹುದ್ದೆಯನ್ನು ಬಸವರಾಜ ಹೊರಟ್ಟಿಗೆ ನೀಡುವ ಸಾಧ್ಯತೆ ಇದೆ.
ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟು ಆ ನಂತರ ಹಂಗಾಮಿ ಉಪಸಭಾಪತಿ ಸ್ಥಾನ ಅಲಂಕರಿಸಿದ್ದ ಬಸವರಾಜ ಹೊರಟ್ಟಿ ಅವರಿಗೆ ಶಿಕ್ಷಣ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಜೆಡಿಎಸ್‌ನಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಜೆಡಿಎಸ್ ಬೆಂಬಲದಿಂದ ಬಿಎಸ್‌ಪಿ ಯಿಂದ ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದಿದ್ದ ಮಹೇಶ್ ಅವರು ಶಿಕ್ಷಣ ಸಚಿವ ಹುದ್ದೆ ನಿರ್ವಹಿಸುತ್ತಿದ್ದರು. ಆದರೆ ಕ್ಷೇತ್ರಕ್ಕೆ ಹಾಗೂ ಪಕ್ಷಕ್ಕೆ ಸಮಯ ನೀಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಸವರಾಜ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ದೇವೇಗೌಡ ಅವರೇ ಆಸಕ್ತಿ ವಹಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರೂ ಸಹ ಇದಕ್ಕೆ ಸಹಮತ ಹೊಂದಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನ ಸಿಗದೇ ಅತೃಪ್ತ ಗೊಂಡಿದ್ದ ಹೊರಟ್ಟಿ
ಮೊದಲ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಸವರಾಜ ಹೊರಟ್ಟಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು. ಹಂಗಾಮಿ ಸ್ಪೀಕರ್ ಆಗಿದ್ದ ಅವರು ಸ್ಪೀಕರ್ ಆಗಲಾರೆ ಎಂದು ಹೇಳಿದ್ದರು. ಆದರೆ ವರಿಷ್ಠರ ಮಾತುಕತೆ ನಂತರ ಅತೃಪ್ತಿ ಮರೆತಿದ್ದರು. ಈಗ ಸಚಿವ ಸ್ಥಾನ ತಾನೇ ಹುಡುಕಿಕೊಂಡು ಹೊರಟ್ಟಿ ಅವರ ಬಳಿ ಬರುತ್ತಿದೆ.

ಈಗಾಗಲೇ ಖಾತೆ ನಿರ್ವಹಿಸಿದ್ದಾರೆ ಹೊರಟ್ಟಿ
ಬಸವರಾಜ ಹೊರಟ್ಟಿ ಅವರು ಈಗಾಗಲೇ ಶಿಕ್ಷಣ ಖಾತೆಯನ್ನು ನಿರ್ವಹಿಸಿದ್ದಾರೆ. 2006 ರಲ್ಲಿ ಕುಮಾರಸ್ವಾಮಿ ಸಂಪುಟದಲ್ಲಿ ಶಿಕ್ಷಣ ಖಾತೆ ಸಚಿವರಾಗಿ ಬಸವರಾಜ ಹೊರಟ್ಟಿ ಅವರು ಕಾರ್ಯ ನಿರ್ವಹಿಸಿದ್ದಾರೆ. ದೈಹಿಕ ಶಿಕ್ಷಕರಾಗಿ ಜೀವನ ಪ್ರಾರಂಭಿಸಿದ್ದ ಹೊರಟ್ಟಿ ಆ ನಂತರ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆ ಆಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು ಹಾಗಾಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ಕ್ಷೇತ್ರಕ್ಕೆ ಸೂಕ್ತ ಎಂದು ಜೆಡಿಎಸ್ ತೀರ್ಮಾನಿಸಿದೆ.

ಪರೀಕ್ಷೆಗಳು ಹತ್ತಿರ ಬಂದಿವೆ
ಪ್ರಾಥಮಿಕ ಮತ್ತು ಪ್ರೌಢಶಾಲಾ ಪರೀಕ್ಷೆಗಳು ಸನಿಹದಲ್ಲೇ ಇವೆ. ಹತ್ತನೇ ತರಗತಿ ಮುಖ್ಯ ಪರೀಕ್ಷೆ ಈಗಾಗಲೇ ಘೋಷಣೆ ಆಗಿದೆ. ಇಂತಹಾ ಸಮಯದಲ್ಲಿ ಶಿಕ್ಷಣ ಖಾತೆ ಸಚಿವರೇ ಇಲ್ಲದೆ ಇರುವುದು ಸರಿ ಅಲ್ಲ ಎಂಬ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಅವರು ಈ ಬೇಗನೆ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಉತ್ತರ ಕರ್ನಾಟಕಕ್ಕೆ ಆದ್ಯತೆ
ಜೆಡಿಎಸ್ ಪಕ್ಷವು ಉತ್ತರ ಕರ್ನಾಟಕದಲ್ಲಿ ಹಿಡಿತ ಸಾಧಿಸಲು ಉತ್ತರ ಕರ್ನಾಟಕದ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಹ ಬಸವರಾಜ ಹೊರಟ್ಟಿ ಅವರು ದಾರಿ ಆಗುತ್ತಾರೆ ಎಂಬ ಆಂತರಿಕ ಲೆಕ್ಕಾಚಾರವು ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡುವ ಹಿಂದೆ ಇದೆ.

ಮುಖ್ಯಮಂತ್ರಿಗೆ ಹೊರೆ
ಹಣಕಾಸು ಖಾತೆ, ಇಂಧನ, ವಾರ್ತಾ ಇಲಾಖೆ ಸೇರಿ ಕೆಲವು ಖಾತೆಗಳು ಸಿಎಂ ಕುಮಾರಸ್ವಾಮಿ ಅವರ ಬಳಿಯೇ ಇದೆ. ಇಂತಹಾ ಸಮಯದಲ್ಲಿ ತೆರವಾಗಿರುವ ಶಿಕ್ಷಣ ಖಾತೆಯನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸಿಎಂ ಅವರು ಆದಷ್ಟು ಬೇಗನೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದಾರೆ.












Click it and Unblock the Notifications