ಕಲಬುರಗಿ ಟೆಕ್ಸ್ ಟೈಲ್ ಪಾರ್ಕ್, ವಿಜಯಪುರ ಏರ್‌ಪೋರ್ಟ್ ಬಗ್ಗೆ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಬೆಂಗಳೂರು: ಸಮಗ್ರ ಕರ್ನಾಟಕ ಪರಿಕಲ್ಪನೆ ಸಾಕಾರವಾಗಲು ಪ್ರತಿ ಜಿಲ್ಲೆ, ಗ್ರಾಮಗಳ ಅಭಿವೃದ್ಧಿ ಆಗಬೇಕು. ಯಾವಾಗ ಉತ್ತರ ಕರ್ನಾಟಕ ಭಾಗದ ಜನರ ತಲಾ ಆದಾಯ ರಾಜ್ಯದ ತಲಾ ಆದಾಯಕ್ಕೆ ಸರಾಸರಿ ಬರುತ್ತದೆ ಆಗ ಅಭಿವೃದ್ಧಿ ಆದಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು. ಈ ಮೂಲಕ ಬೆಂಗಳೂರಿನ ಬೆಳವಣಿಗೆ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿ ಕೊರತೆ ಬಗ್ಗೆ ಪ್ರಸ್ತಾಪಿಸಿದರು.
ಬೆಂಗಳೂರಿನಲ್ಲಿ ವಿಕೆ ಎಕ್ಸಲೆನ್ಸ್ ಆಂಡ್ ಆನರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣದ ಸಿವಿಲ್ ಕೆಲಸ ಮುಗಿದು ಎರಡೂವರೆ ವರ್ಷ ಆಗಿದೆ. ಇನ್ನೂ ಆರಂಭವಾಗಿಲ್ಲ. ಎರಡನೇ ಹಾಗೂ ಮೂರನೆ ದರ್ಜೆಯ ನಗರಗಳು ಅಭಿವೃದ್ಧಿ ಆಗುತ್ತಿವೆ. ಉದಾಹರಣೆಗೆ ವಿಜಯಪುರ ಸಾಕಷ್ಟು ಅಭಿವೃದ್ಧಿ ಆಗಿದೆ. ಈ ಏರ್‌ಪೋರ್ಟ್ ಬೇಗ ಆರಂಭಗೊಳ್ಳಲಿದೆ. ಇಲ್ಲಿ ಹೆಚ್ಚಾಗಿ ದ್ರಾಕ್ಷಿ ಬೆಳೆಯುತ್ತಾರೆ. ಅದನ್ನು ರಪ್ತು ಮಾಡಲು ಸಾಕಷ್ಟು ಅವಕಾಶ ಇದೆ. ಹುಬ್ಬಳ್ಳಿ ಧಾರವಾಡದಲ್ಲಿ ಏರೊ ಸ್ಪೇಸ್ ಕಂಪನಿಗಳು ಬಂದಿವೆ ಎಂದು ಅಭಿವೃದ್ಧಿ, ಅವಕಾಶಗಳನ್ನು ತಿಳಿಸಿದರು.

ಟೆಕ್ಸ್ ಟೈಲ್ ಪಾರ್ಕ್ ಶೀಘ್ರವೇ ಆರಂಭ
ಕಲಬುರಗಿ ಮಧ್ಯ ಭಾರತಕ್ಕೆ ಹೊಂದಿಕೊಂಡಿದೆ. ಜಿಲ್ಲೆಯು ಮಧ್ಯ ಭಾರತದ ಕೇಂದ್ರವಾಗಿ ಬೆಳೆಯಬಹುದು. ಕಲಬುರಗಿ ಏರ್‌ಪೋರ್ಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಅದರಿಂದ ಆ ಭಾಗದ ಜನರಿಗೆ ಅನಾನುಕೂಲವಾಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕಲಬುರಗಿಗೆ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ 900 ಎಕರೆ ಜಮೀನು ನೀಡಿದ್ದೇವೆ. ಅಲ್ಲಿ ಒಂದು ಲಕ್ಷ ಜನರಿಗೆ ಉದ್ಯೋಗ ಸಿಗುತ್ತದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯದ ಸಚಿವರೊಂದಿಗೆ ಮಾತನಾಡಿದ್ದು, ಅದರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಯಚೂರಿನಲ್ಲಿ ಫಾರ್ಮಾ ಕಂಪನಿ ಬರಲು ಅವಕಾಶ ಮಾಡಿದ್ದೇವೆ. ಅಲ್ಲಿ ಏರ್ ಪೋರ್ಟ್ ಮಾಡಲು ಜಮೀನು ಕೊಟ್ಡಿದ್ದೇವೆ. ಅಲ್ಲಿನ ಜನರು ಶ್ರಮ ಜೀವಿಗಳಿದ್ದಾರೆ. ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಕಲ್ಯಾಣ ಕರ್ನಾಟಕ ಮಂಡಳಿಗೆ ಮಿಸಲಿಟ್ಟ ಹಣ ಸಂಪೂರ್ಣ ಬಳಕೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹಿದರು.
ಪ್ರದೇಶವಾರು ತಲಾ ಆದಾಯದಲ್ಲಿ ವ್ಯತ್ಯಾಸ
ರಾಜಧಾನಿ ಬೆಂಗಳೂರು ಬೆಳವಣಿಗೆ ಮಿತಿ ಮೀರಿದೆ. ಸುತ್ತಲಿನ ಜಿಲ್ಲೆಗಳು ಅಭಿವೃದ್ಧಿ ಆಗಿವೆ. ದೂರದ ಕಲಬುರಗಿ, ಬೀದರ್, ರಾಯಚೂರು ಇನ್ನೂ ಬೆಳೆಯಬೇಕು. ಅಲ್ಲಿ ಬೆಳೆಯಲು ಅವಕಾಶ ಇದೆ ಅದಕ್ಕೆ ಉತ್ತಮ ವಾತಾವರಣ ಸೃಷ್ಟಿಸುವ ಕೆಲಸ ಸರ್ಕಾರ ಮಾಡಬೇಕು. ಕರ್ನಾಟಕದ ತಲಾವಾರು ಆದಾಯ 3.40 ಲಕ್ಷ ಅಂತ ಆಗಿದೆ. ಇದು ನಿಜವಲ್ಲ. ಬೆಂಗಳೂರಿನಲ್ಲಿ ತಲಾ ಆದಾಯ 7.5 ಲಕ್ಷ ರೂ. ಇದೆ. ಆದರೆ ಉತ್ತರ ಕರ್ನಾಟಕದ ಬೀದರ್‌ನದ್ದು 1.25 ಲಕ್ಷ ಇದೆ. ಕಲಬುರಗಿಯದ್ದ 1.40. ಲಕ್ಷ ಇದೆ. ಹುಬ್ಬಳ್ಳಿ 1.80 ಲಕ್ಷ ಇದೆ ಎಂದು ವ್ಯತ್ಯಾಸ ಹಾಗೂ ಆಗಬೇಕಾದ ಅಭಿವೃದ್ಧಿ ಬಗ್ಗೆ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಐಟಿ ಬಿಟಿ ಇರುವುದರಿಂದ ಅವರ ಆದಾಯ ಹೆಚ್ಚಿರುವುದರಿಂದ ಆ ರೀತಿ ಬಿಂಬಿಸಲಾಗುತ್ತಿದೆ. ತಲಾ ಆದಾಯ ಸಿಟಿ, ಗ್ರಾಮೀಣ ಪ್ರದೇಶದಲ್ಲಿ ವ್ಯತ್ಯಾಸ ಇದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಕಡಿಮೆ ಇದೆ. ಇದನ್ನು ಯೋಜನಾ ಆಯೊಗ ಗಮನಿಸಿ ಸರ್ಕಾರದ ಗಮನಕ್ಕೆ ತಂದು ಯೋಜನೆ ರೂಪಿಸಿ ಆ ಭಾಗಗಳನ್ನು ಅಭಿವೃದ್ಧಿಪಡಿಸಬೇಕು ಎಂದರು.












Click it and Unblock the Notifications