ಬಾಗಲಕೋಟೆಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ರೆ ಪಕ್ಷ ಮತ್ತೆ ಗೆಲ್ಲುತ್ತಿತ್ತೇ? ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು
ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು. ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆ ಭಾಗಕ್ಕೆ ಮಾಡಿದ ದ್ರೋಹವನ್ನು ಜನ ಮರೆಯುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಬಾಗಲಕೋಟೆ ಜನರಿಗೆ ಸಿದ್ದರಾಮಯ್ಯ ಅವರು ಅಥವಾ ಕಾಂಗ್ರೆಸ್ ದ್ರೋಹ ಬಗೆದಿದ್ದರೆ, ಕಾಂಗ್ರೆಸ್ ಮತ್ತೆ ಆರಿಸಿ ಬರಲು ಸಾಧ್ಯವೇ? ಎಂದು ಪ್ರಶ್ನಿಸಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇತ್ತೀಚಿನ ಹೇಳಿಕೆಗಳಿಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ದ್ರೋಹದ ರಾಜಕಾರಣದ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದೆ. ಬಾಗಲಕೋಟೆ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದ ಹಿಂದಿನ ಬಿಜೆಪಿ ಸರ್ಕಾರಗಳು ಎಸಗಿರುವ ವಿಫಲತೆಗಳನ್ನು ಪಟ್ಟಿ ಮಾಡಿರುವ ಕಾಂಗ್ರೆಸ್, ಬೊಮ್ಮಾಯಿ ಅವರಿಗೆ ನೇರ ಪ್ರಶ್ನೆಗಳನ್ನು ಹಾಕಿದೆ.

ಪರಿಹಾರ ನೀಡದೆ ವಂಚಿಸಿದ್ದು ನಿಮ್ಮದೇ ಕೇಂದ್ರ ಸರ್ಕಾರ
ಬಾಗಲಕೋಟೆ ಜನರಿಗೆ ಸಿದ್ದರಾಮಯ್ಯ ಅವರು ಅಥವಾ ಕಾಂಗ್ರೆಸ್ ದ್ರೋಹ ಬಗೆದಿದ್ದರೆ, ಇಂದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿತ್ತೇ? ಜನರ ಆಶೀರ್ವಾದವೇ ನಮ್ಮ ಕೆಲಸಕ್ಕೆ ಸಾಕ್ಷಿ" ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. 2023ರ ಭೀಕರ ಬರಗಾಲದ ಸಂದರ್ಭದಲ್ಲಿ ಈ ಭಾಗದ ರೈತರು ಕಂಗಾಲಾಗಿದ್ದಾಗ ಕೇಂದ್ರ ಸರ್ಕಾರ ನೀಡಿದ ಪರಿಹಾರ ಎಷ್ಟು? ಅತಿವೃಷ್ಟಿಯಿಂದ ಜನ ಜೀವನ ಅಸ್ತವ್ಯಸ್ತವಾದಾಗ ಪರಿಹಾರ ನೀಡದೆ ವಂಚಿಸಿದ್ದು ನಿಮ್ಮದೇ ಕೇಂದ್ರ ಸರ್ಕಾರವಲ್ಲವೇ? ಎಂದು ಪ್ರಶ್ನಿಸಿದೆ.
ರಾಜ್ಯಕ್ಕೆ ಬರಬೇಕಾದ ಸುಮಾರು 2 ಲಕ್ಷ ಕೋಟಿ ರೂಪಾಯಿ ಅನುದಾನವನ್ನು ನೀಡದೆ ಕನ್ನಡಿಗರಿಗೆ ದ್ರೋಹ ಬಗೆದಿರುವುದು ಬಿಜೆಪಿ ಸರ್ಕಾರವಲ್ಲವೇ ಎಂಬ ಗಂಭೀರ ಆರೋಪ ಮಾಡಿದೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ನಿಮ್ಮದೇ 'ಡಬಲ್ ಇಂಜಿನ್' ಸರ್ಕಾರ ಇದ್ದರೂ ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಜಾರಿ ಮಾಡದೆ ಉತ್ತರ ಕರ್ನಾಟಕದ ಜನರಿಗೆ ವಂಚಿಸಿದ್ದು ಯಾರು? ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಾಜ್ಯದ ಜನರಿಗೆ ದ್ರೋಹ ಬಗೆದಿದ್ದಕ್ಕೇ ಶಿಗ್ಗಾಂವಿ ಕ್ಷೇತ್ರದ ಜನ ನಿಮಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂಬ ಹಳೆಯ ನೆನಪನ್ನು ಕಾಂಗ್ರೆಸ್ ಕೆದಕಿದೆ. ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟು, ರಾಜ್ಯದ ಹಕ್ಕನ್ನು ಕೇಂದ್ರದ ಮುಂದೆ ಕೇಳಲಾಗದ ನೀವು, ಈಗ ದ್ರೋಹದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಅಬ್ಬಬ್ಬಾ, ದ್ರೋಹದ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ನೋಡಿ!
— Karnataka Congress (@INCKarnataka) April 6, 2026
ಮಾನ್ಯ ಬೊಮ್ಮಯಿ ಅವರೇ, ಬಾಗಲಕೋಟೆ ಜನರಿಗೆ ಸಿದ್ದರಾಮಯ್ಯ ಅವರು ಅಥವಾ ಕಾಂಗ್ರೆಸ್ ದ್ರೋಹ ಬಗೆದಿದ್ದರೆ, ಕಾಂಗ್ರೆಸ್ ಮತ್ತೆ ಆರಿಸಿ ಬರಲು ಸಾಧ್ಯವೇ?
2023ರ ಬರ ಪರಿಸ್ಥಿತಿಯಲ್ಲಿ ಈ ಭಾಗದ ಜನರ ಪರಿಹಾರಕ್ಕೆ ಕೇಂದ್ರ ಸರ್ಕಾರ ಪರಿಹಾರ ಎಷ್ಟು?
ಅತಿವೃಷ್ಟಿಯಿಂದ ಬಾಗಲಕೋಟೆ ಜನ… https://t.co/S6KtOHzvbB
ಬೊಮ್ಮಾಯಿ ಹೇಳಿದ್ದೇನು?
ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ರಾಂಪೂರ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಬಸವರಾಜ ಬೊಮ್ಮಾಯಿ ಮತಯಾಚಿಸಿದರು. ಈ ವೇಳೆ ಬಾದಾಮಿ ಜನರು ಸಂಕಷ್ಟದಲ್ಲಿ ಇದ್ದಾಗ ಸಿಎಂ ಸಿದ್ದರಾಮಯ್ಯ ಅವರ ಕೈ ಹಿಡಿದು ರಾಜಕೀಯ ಬದುಕು ನೀಡಿದರು. ಆದರೆ ಇಂದು ಅಧಿಕಾರಕ್ಕೆ ಬಂದ ನಂತರ ಬಾಗಲಕೋಟೆ-ಬಾದಾಮಿ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಇಂತಹವರನ್ನು ಜನ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಕರೆ ನೀಡಿದ್ದರು.
ನಮ್ಮ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಯುಕೆಪಿ ಸೇರಿದಂತೆ ಪ್ರಮುಖ ಯೋಜನೆಗಳಿಗೆ ಗತಿ ನೀಡಿದ್ದೇವೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾಣಿಸಿಲ್ಲ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಅದರ ಮೊದಲ ಸೂಚನೆಯನ್ನು ಬಾಗಲಕೋಟೆ ಜನರು ನೀಡಬೇಕು. ವೀರಣ್ಣ ಚರಂತಿಮಠ ಅವರಿಗೆ ಮತ ನೀಡಿ ಅಭಿವೃದ್ಧಿ ಪರವಾದ ಆಡಳಿತಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದರು.












Click it and Unblock the Notifications