RSS ಟೋಪಿಗೆ ಡಿಸಿಎಂ ಅವಮಾನ: ಕಾಂಗ್ರೆಸ್ ಮನಸ್ಥಿತಿ ಪ್ರತಿಬಿಂಬ: ಬೊಮ್ಮಾಯಿ
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಲ್ಲಿ ನಾಗರಿಕರ ಜೊತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಡೆಸಿದ ಕುಂದುಕೊರತೆ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರಿ ಟೋಪಿ ಕುರಿತು ಅವಮಾನ ಮಾಡಿದ್ದಾರೆ. ಇದು ಟೋಪಿ ಬಗ್ಗೆ ಕಾಂಗ್ರೆಸ್‌ಗೆ ಎಂಥಹ ಮನಸ್ಥಿತಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.
ಇಂದು ಭಾನುವಾರ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಹಾಕಿದ್ದ ಆರ್ ಎಸ್ ಎಸ್ ಟೋಪಿಯ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆಡಿರುವ ಮಾತಿಗೆ ಅವರು ಪ್ರತಿಕ್ರಿಯಿಸಿದರು. ಇದು ಅದು ಕಾಂಗ್ರೆಸ್ ನವರ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ಗಾಂಧಿ ಟೋಪಿಯನ್ನು ಕಾಂಗ್ರೆಸ್ ಟೋಪಿಯನ್ನಾಗಿ ಮಾಡಿಕೊಂಡು ಅದಕ್ಕೆ ಅವಮಾನ ಮಾಡಿದ್ದರು. ಈಗ ಆರ್ ಎಸ್ ಎಸ್ ಟೋಪಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿ ಕೋರ್ ಕಮಿಟಿ ಸಭೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಆಗಿರುವ ಹಾನಿಯ ಕುರಿತು ಪಕ್ಷದ ತಂಡ ನಡೆಸಿರುವ ಸಮೀಕ್ಷೆಯ ಕುರಿತು ಚರ್ಚೆ ಆ ನಿಟ್ಟಿನಲ್ಲಿ ಮುಂದಿನ ಕ್ರಮ ಏನು ತೆಗೆದುಕೊಳ್ಳಬೇಕು. ಪಕ್ಷದ ಸಂಘಟನೆ ಹಾಗೂ ಗ್ರೇಟರ್ ಬೆಂಗಳೂರು ಕುರಿತು ಚರ್ಚೆ ಮಾಡಿ ಪಕ್ಷದ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಗಣೇಶನ ವಿಸರ್ಜನೆ ಸಂಪ್ರದಾಯದಂತೆ ನಡೆಯಬೇಕು ಎನ್ನುವುದು ಬಂಕಾಪುರ ಜನತೆಯ ಆಶಯವಾಗಿತ್ತು. ಅದು ಈಡೇರಿಸಿದೆ. ಪೊಲಿಸರು ಹಾಗೂ ಜನರ ಸಹಕಾರದಿಂದ ಸೌಹಾರ್ದಯುತವಾಗಿ ಗಣೇಶನ ವಿಸರ್ಜನೆ ನಡೆದಿದೆ. ಹುಬ್ಬಳ್ಳಿ ಧಾರವಾಡ ಸೇರಿದಂತೆ ಬೇರೆ ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಹಾವೇರಿಯಲ್ಲಿ ಅನಗತ್ಯ ಆದೇಶಗಳನ್ನು ಮಾಡಿದ್ದರಿಂದ ಪೊಲೀಸರಿಗೂ ಕಷ್ಟವಾಗಿತ್ತು. ಈಗ ಅವರೂ ಸಹಕಾರ ಮಾಡಿದ್ದಾರೆ, ನಾವೂ ಸಹಕಾರ ಮಾಡಿದ್ದೇವೆ. ಹೀಗಾಗಿ ಗಣೇಶನ ವಿಸರ್ಜನೆ ಭಕ್ತಿ ಭಾವದಿಂದ ಸೌಹಾರ್ದತೆಯಿಂದ ನಡೆದಿದೆ ಎಂದು ತಿಳಿಸಿದರು.
"ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರದ ಪ್ರಸಿಧ್ಧ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಯ ಭವ್ಯ ಮೆರವಣಿಗೆ ಅತಿ ವಿಜೃಂಭಣೆಯಿಂದ ಜರುಗುತ್ತಿದೆ."
— Basavaraj S Bommai (@BSBommai) October 12, 2025
ಕೇಂದ್ರ ಸಚಿವರಾದ ಶ್ರೀ @JoshiPralhad ಅವರು, ಯುವ ಮುಖಂಡರಾದ ಶ್ರೀ @BommaiBharath ಅವರು ಹಾಗೂ ಇತರ ಪ್ರಮುಖರು ಭಾಗವಹಿಸಿದ್ದರು. pic.twitter.com/e4r897fA19
ಡಿಜೆ ಬಳಸಿದವರ ಮೇಲೆ ಕೇಸ್..!
ಗಣೇಶನ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡಿದವರ ವಿರುದ್ದ ಹಾಕಿರುವ ಪ್ರಕರಣಗಳ ಬಗ್ಗೆ ಮಾತನಾಡಿ, ಡಿಜೆ ಬಳಕೆ ವಿಚಾರದಲ್ಲಿ ಹೈಕೋರ್ಟ್ ನಿರ್ದಿಷ್ಟ ಡೆಸಿಬಲ್ ಮೀರದಂತೆ ನಿರ್ದೇಶನ ನೀಡಿದೆ. ಅದನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸರ್ಕಾರದ ನಿಯಮದ ಪ್ರಕಾರ ರಾತ್ರಿ 10 ಗಂಟೆಯ ಮೇಲೆ ಬೆಳಗಿನ ನಾಲ್ಕು ಗಂಟೆಯ ಮುಂಚೆ ಸ್ಪೀಕರ್ ಹಚ್ಚಬಾರದು ಅಂತ ಇದೆ. ಆದರೆ, ಕೆಲವರು ಸ್ಪೀಕರ್ ಹಚ್ಚುತ್ತಾರೆ. ನಾವು ಅದನ್ನು ಧಾರ್ಮಿಕ ಕಾರ್ಯಕ್ರಮ ಅಂತ ಸುಮ್ಮನಾಗುತ್ತೇವೆ. ಸರ್ಕಾರ ಎಲ್ಲರಿಗೂ ಒಂದೇ ಆಗಿರಬೇಕು. ಕಾನೂನು ಒಂದೆ ಇರಬೇಕು. ಸರ್ಕಾರ ಸರಿಯಾಗಿ ನಡೆದುಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸರ್ಕಾರ ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಮಾಡಿದಾಗ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.












Click it and Unblock the Notifications