ಬಿಜೆಪಿಗೂ ಕಗ್ಗಂಟಾದ ಅಭ್ಯರ್ಥಿಗಳ ಪಟ್ಟಿ; ABC ಫಾರ್ಮೂಲದೊಂದಿಗೆ ಅಭ್ಯರ್ಥಿಗಳ ಹೆಸರು ಶಿಫಾರಸು
ಬೆಂಗಳೂರು, ಏಪ್ರಿಲ್7: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿಗಳನ್ನ ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಹೈಕಮಾಂಡ್ ಮೊದಲ ಪಟ್ಟಿಯಲ್ಲಿ 124 ಹಾಗೂ ಎರಡನೇ ಪಟ್ಟಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು 58 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡು ತಂತ್ರಗಾರಿಕೆ ಕಾಯ್ದಿರಿಸಿದೆ. ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ 93 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ದಳಪತಿಗಳಿಗೆ ಹಾಸನ ಕ್ಷೇತ್ರ ಒಂದೇ ದೊಡ್ಡ ಕಗ್ಗಂಟಾಗಿದೆ.
ಇತ್ತ ಪ್ರತಿ ಒಂದು ಕ್ಷೇತ್ರದ ಸ್ಥಳೀಯ ಮುಖಂಡರ ಅಭಿಪ್ರಾಯ ಆಲಿಸಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿರುವ ಬಿಜೆಪಿ ಭರ್ಜರಿ ಕಸರತ್ತು ನಡೆಸಿದೆ. ಈಗಾಗಲೇ ಜಿಲ್ಲಾವಾರು ಕೋರ್‌ಕಮಿಟಿ ಸದಸ್ಯರ ಅಭಿಪ್ರಾಯ ಆಧರಿಸಿ ಒಂದೊಂದು ಕ್ಷೇತ್ರ ತಲಾ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, A,B,C ಎಂದು ಮೂರು ಹೆಸರು ಪಟ್ಟಿಯಲ್ಲಿದೆ.

ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಚರ್ಚೆ ನಡೆಸಿ ಅಂತಿಮವಾಗಿ ಬಿಜೆಪಿ ದೆಹಲಿಯ ಹೈಕಮಾಂಡ್ ನಾಯಕರಿಗೆ ಸೂಚನೆ ಮೇರೆಗೆ ಪಟ್ಟಿ ರೆಡಿ ಮಾಡಿದ್ದಾರೆ. ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 224 ಕ್ಷೇತ್ರಗಳ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಜತೆ ಇಂದು( ಶುಕ್ರವಾರ) ಸಂಜೆ ದೆಹಲಿಗೆ ದೌಡಾಯಿಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ದೆಹಲಿಗೆ ಭೇಟಿ ನೀಡಲಿದ್ದು, ಇನ್ನೂ ಎರಡನೇ ದಿನಗಳ ದೆಹಲಿಯಲ್ಲಿ ಠಿಕಾಣಿ ಹೂಡಲಿದ್ದಾರೆ. ಶನಿವಾರ ಹಾಗೂ ಭಾನುವಾರ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ವರಿಷ್ಠರು ಸಮಾಲೋಚನೆ ನಡೆಸಲಿದ್ದಾರೆ. ಎಲ್ಲ ವರದಿ ಆಧಾರಿಸಿ, ಅಳೆದೂ ತೂಗಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಿದ್ದಾರೆ. ಇನ್ನು ಬಿಜೆಪಿ ಎರಡು ಹಂತದಲ್ಲಿ ಪಟ್ಟಿ ಪ್ರಕಟಿಸಲು ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗಿದೆ.

ಹಾಲಿ ಸಚಿವರ ಪೈಕಿ ಎಲ್ಲರಿಗೂ ಟಿಕೆಟ್?
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಹಾಲಿ ಸಚಿವರ ಪೈಕಿ ಎಲ್ಲರಿಗೂ ಟಿಕೆಟ್ ಖಚಿತವಾಗಿದ್ದು, ಇನ್ನೂ ಹೊಸಕೋಟೆ ಕ್ಷೇತ್ರದಿಂದ ಸಚಿವ ಎಂಟಿಬಿ ನಾಗರಾಜ್ ಅವರ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಇನ್ನೂ ಸಚಿವ ಸೋಮಣ್ಣಗೆ ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂಬ ಕುರಿತು ಗೊಂದಲಗಳು ಸೃಷ್ಟಿಯಾಗಿದ್ದು, ಗೋವಿಂದರಾಜನಗರವೋ, ಚಾಮರಾಜನಗರವೋ ಅಥವಾ ವರುಣಾ ಕ್ಷೇತ್ರವೋ ಎಂಬುದನ್ನ ಹೈಕಮಾಂಡ್ ನಾಯಕರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಏ.10ಕ್ಕೆ ಮೊದಲ ಪಟ್ಟಿ, ಏ.13ಕ್ಕೆ 2ನೇ ಪಟ್ಟಿ?
ಇನ್ನೂ ಚುನಾವಣಾ ಹಿನ್ನೆಲೆ ವಿವಿಧ ಕಾರ್ಯಕ್ರಮಗಳಿಗಾಗಿ ರಾಜ್ಯಕ್ಕೆ ದೆಹಲಯ ಬಿಜೆಪಿ ನಾಯಕರು ಆಗಮಿಸುತ್ತಿದ್ದು, ಏಪ್ರಿಲ್ 9 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಕೈಗೊಂಡ ಬಳಿಕ ಏಪ್ರಿಲ್ 10ರಂದು ಬಿಜೆಪಿಯ ಮೊದಲ ಪಟ್ಟಿ ಮತ್ತು ಏಪ್ರಿಲ್ 13ರಂದು ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ. 224 ಕ್ಷೇತ್ರಕ್ಕೂ ಸಂಭಾವ್ಯ ಅಭ್ಯರ್ಥಿಗಳ ಲಿಸ್ಟ್ ರೆಡಿ ಮಾಡಿರುವ ಬಿಜೆಪಿ, ಪ್ರತಿ ಕ್ಷೇತ್ರಕ್ಕೂ ಮೂವರು ಸಂಭಾವ್ಯರ ಹೆಸರನ್ನ ಶಿಫಾರಸು ಮಾಡಿದೆ. ಇನ್ನು ಮೊದಲ ಪಟ್ಟಿಯಲ್ಲಿ 130 ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಲಿ ಎಂದು ಹೇಳಲಾಗಿದೆ.

ಸ್ಥಳೀಯ ನಾಯಕರ ಅಭಿಪ್ರಾಯದ ಮೇರೆಗೆ ಅಭ್ಯರ್ಥಿಗಳ ಆಯ್ಕೆಯನ್ನ ನಡೆಸಿರುವ ಬಿಜೆಪಿ, ಪ್ರತಿ ಕ್ಷೇತ್ರಕ್ಕೂ A,B,C ಎಂದು ಮೂರು ಹೆಸರು ಶಿಫಾರಸು ಮಾಡಿದೆ. ಪ್ರಬಲ ನಾಯಕ ಹಾಗೂ ಹಾಲಿ ಶಾಸಕರ ಹೆಸರು A ಕೆಟಗೆರೆಯಲ್ಲಿದ್ದರೆ, B ಕೆಟಗೆರೆಯಲ್ಲಿ ಎರಡನೇ ಹಂತದ ನಾಯಕರ ಹೆಸರು ಇದೆ. ಇನ್ನು ಇವರಿಬ್ಬರನ್ನು ಬಿಟ್ಟರೆ ಕ್ಷೇತ್ರದ ಸಮರ್ಥ ನಾಯಕರು ಎನ್ನಿಸಿಕೊಂಡಿರುವವರ ಹೆಸರುಗಳು C ಕೆಟಗೆರೆಯಲ್ಲಿವೆ.












Click it and Unblock the Notifications