20 ಸಾವಿರ ಲಂಚಕ್ಕೆ ಕೈಯೊಡ್ಡಿದ ಬಸವಕಲ್ಯಾಣ ನಗರಸಭೆ ಉದ್ಯೋಗಿ
ಬೀದರ್, ಆಗಸ್ಟ್ 23: ಹೋಟೆಲ್ ಗಾಗಿ ತಾತ್ಕಾಲಿಕವಾಗಿ ಷೆಡ್ ನಿರ್ಮಾಣ ಮಾಡುವುದಕ್ಕೆ ಅನುಮತಿ ಕೇಳಿದರೆ ಇಪ್ಪತ್ತೈದು ಸಾವಿರ ರುಪಾಯಿ ಲಂಚ ಕೇಳಿದ ವರ್ಕ್ ಇನ್ ಸ್ಪೆಕ್ಟರ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಏನಿದು ಪ್ರಕರಣ, ಸಿಕ್ಕಿಬಿದ್ದವರ ಹೆಸರೇನು ಅಂತ ಕೇಳ್ತೀರಾ? ಹಾಗಿದ್ದರೆ ಸುದ್ದಿಯ ಮುಂದಿನ ಭಾಗ ಓದಿ.
ಬಸವಕಲ್ಯಾಣ ನಗರಸಭೆಯ ವರ್ಕ್ ಇನ್ ಸ್ಪೆಕ್ಟರ್ ಝರೆಪ್ಪ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದವರು. ಬಸವಕಲ್ಯಾಣ ನಿವಾಸಿಯೊಬ್ಬರು ಹೋಟೆಲ್ ನಡೆಸಲು ಖಾಲಿ ಜಾಗವೊಂದರಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಅನುಮತಿ ಕೋರಿ, ನಗರ ಸಭೆ ಆಯುಕ್ತರ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

ಅರ್ಜಿದಾರರ ಹೋಟೆಲ್ ಗಾಗಿ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲು ಪರವಾನಗಿ ನೀಡಬೇಕು ಅಂದರೆ ಇಪ್ಪತ್ತೈದು ಸಾವಿರ ರುಪಾಯಿ ಲಂಚ ನೀಡಬೇಕು ಎಂದು ವರ್ಕ್ ಇನ್ ಸ್ಪೆಕ್ಟರ್ ಝರೆಪ್ಪ ಒತ್ತಾಯಿಸಿದ್ದಾರೆ. ಆ ನಂತರ ಇಪ್ಪತ್ತು ಸಾವಿರ ರುಪಾಯಿ ಲಂಚದ ಹಣ ನೀಡುವಂತೆ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು. ಮಂಗಳವಾರ ಝರೆಪ್ಪ ಇಪ್ಪತ್ತು ಸಾವಿರ ರುಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ.












Click it and Unblock the Notifications