ವಿಪಕ್ಷ ನಾಯಕ ಆರ್.ಅಶೋಕ್ ಗೆ ಶುಭ ಕೋರಲ್ಲ ಎಂದ ಯತ್ನಾಳ್ : ಕಾರಣವೇನು?
ಬೆಂಗಳೂರು,ಡಿಸೆಂಬರ್ 05: : 2023 ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಕ ಬರೋಬ್ಬರಿ ಆರು ತಿಂಗಳ ನಂತರ ಬಿಜೆಪಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನ ನೇಮಕ ಮಾಡಿದೆ. ಆದರೆ, ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಹಾಗೂ ಆರ್ ಅಶೋಕ್ ಗೆ ವಿಪಕ್ಷ ನಾಯಕನ ಸ್ಥಾನ ನೀಡಿದಕ್ಕೆ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.
ಹೌದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ಬಿಜೆಪಿ ಹಿರಿಯ ನಾಯಕರ ಬೇಸರಕ್ಕೆ ಕಾರಣವಾಗಿದ್ದು, ಬಹಿರಂಗವಾಗಿ ಮಾಜಿ ಸಚಿವ ವಿ ಸೋಮಣ್ಣ, ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಅಸಮಾಧಾನವನ್ನ ಹೊರ ಹಾಕಿದ್ರು, ಅಲ್ಲದೇ ವಿಪಕ್ಷ ನಾಯಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಬದಲಾಯಿಸುವವರೆಗೂ ಶಾಸಕಾಂಗ ಸಭೆಗೆ ಹೋಗಲ್ಲ ಎಂದು ಯತ್ನಾಳ್ ಗುಡುಗಿದ್ದು, ಇದೀಗ ಬೆಳಗಾವಿಯನ್ನ ನಡೆಯುತ್ತಿರುವ ಅಧಿವೇಶನದಲ್ಲೇ ಬೇಸರ ಹೊರಹಾಕಿದ್ದಾರೆ.

ಸೋಮವಾರ ಬೆಳಗಾವಿಯ ಸುವರ್ಣಸೌಧದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಶುಭ ಕೋರಿಲ್ಲ. ವಿರೋಧ ಪಕ್ಷದ ನಾಯಕನಾಗಿ ಒಕ್ಕಲಿಗ ನಾಯಕ ಹಾಗೂ ಬೆಂಗಳೂರು ಭಾಗದ ಆರ್ ಅಶೋಕ್ ಗೆ ಹೈಕಮಾಂಡ್ ಮಣೆ ಹಾಕಿದ್ದು, ಸದನದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗೆ ಎಲ್ಲಾ ಸದಸ್ಯರು ಶುಭಕೋರಿದ್ರು. ಈ ವೇಳೆ ನಾನು ಶುಭಕೋರಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಬಿಜೆಪಿಯ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಎಲ್ಲಿಯವರೆಗೆ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುವುದಿಲ್ಲವೋ ಅಲ್ಲಿಯತನಕ ನಾನು ಶುಭ ಕೊರುವ ಪ್ರಶ್ನೆಯೇ ಇಲ್ಲ ಎಂದು ಮತ್ತೆ ಅಸಮಾಧಾನವನ್ನ ಹೊರಹಾಕಿದ್ದಾರೆ. ಅಲ್ಲದೇ ಪ್ರತಿ ಬಾರೀಯೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಅಲ್ಲಿಯತನಕ ನಾನು ಶುಭ ಕೋರುವುದಿಲ್ಲ ಎಂದು ಯತ್ನಾಳ್ ಹೇಳಿದರು.

ನನ್ನ ಹೋರಾಟ ಉತ್ತರ ಕರ್ನಾಟಕದ ಪರವಾಗಿ ಎಂದ ಅವರು, ಪಿಸಿಐ ಪರೀಕ್ಷೆ ಮುಂದೂಡಿಕೆ ಮತ್ತು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡಲು ಅಧ್ಯಕ್ಷರು ಅವಕಾಶ ಮಾಡಿಕೊಟ್ಟರು. ನನ್ನ ಹೋರಾಟಕ್ಕೆ ಎಲ್ಲರು ಮಣಿಯುತ್ತಾರೆ. ನಾನು ಎರಡು ಹೋರಾಟವನ್ನ ಗೆದ್ದಿದೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಶಾಸಕಾಂಗ ಪಕ್ಷದ ಸಭೆಗೆ ಹೋಗುವುದಿಲ್ಲ ಎಂದಿದ್ದರು. ರಾಜ್ಯದ ಜನರ ದೃಷ್ಟಿಯಲ್ಲಿ ನಾನು ಎಲ್ಲಾ ರೀತಿಯ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಗಲು ಸಮರ್ಥನಾಗಿದ್ದೇನೆ. ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲೇಬೇಕು. ಅದಕ್ಕೆ ನಾನು ಯಾರ ಮುಲಾಜಿಗೂ ಹೆದರುವುದಿಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗುಡುಗಿದ್ದಾರೆ.
ಮುಖ್ಯಮಂತ್ರಿ ಹಳೆ ಮೈಸೂರು ಭಾಗ, ಉಪಮುಖ್ಯಮಂತ್ರಿಯ ಹಳೆ ಮೈಸೂರು ಭಾಗ, ವಿರೋಧ ಪಕ್ಷದ ನಾಯಕ ಹಳೆ ಮೈಸೂರು ಭಾಗ, ಬಿಜೆಪಿ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷ ಹಳೆ ಮೈಸೂರು ಭಾಗ ಮತ್ತು ಬೆಂಗಳೂರಿನವರು. ಉತ್ತರ ಕರ್ನಾಟಕದವರು ಗಂಟೆ ಹೊಡಿಬೇಕಾ? ನಮಗೆ ನ್ಯಾಯ ಸಿಗುವವರೆಗೂ ಯಾವುದೇ ಹೋರಾಟಕ್ಕೂ ನಾನು ಸಿದ್ಧ. ಯಾವ ಸ್ಥಾನವನ್ನು ತ್ಯಾಗವನ್ನು ಬೇಕಾದರೂ ಮಾಡುತ್ತೇನೆ ಎಂದು ಹೇಳಿದರು.












Click it and Unblock the Notifications