Vijayendra vs Yatnal: ವಿಜಯೇಂದ್ರ vs ಯತ್ನಾಳ್: ಬಿಜೆಪಿ ಒಂದು ಮೂರು ಬಾಗಿಲು!
ಬೆಂಗಳೂರು ನವೆಂಬರ್ 16: ಬಿಜೆಪಿ ಶಿಸ್ತಿನ ಪಕ್ಷ ಎಂದು ವರಿಷ್ಠರು ಹೇಳಿದರೂ ಕಳೆದ ಮೂರು ತಿಂಗಳಿನಿಂದ ಕಮಲ ಪಾಳೆಯದಲ್ಲಿ ಒಡಕಿನ ದೃಶ್ಯ ಕಾಣಿಸುತ್ತಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಲಿಂಬಾವಳಿ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಪ್ರತ್ಯೇಕ ತಂಡ ನಿರ್ಮಿಸಿದಂತೆ ಕಾಣಿಸುತ್ತಿದೆ. ಈ ಬಂಡಾಯವೆದ್ದ ರೆಬೆಲ್ಸ್ ಪ್ರತ್ಯೇಕ ಹೋರಾಟ, ಪ್ರತ್ಯೇಕ ಕಹಳೆ, ಪ್ರತ್ಯೇಕ ಸಭೆ ಹಾಗೂ ಜನಾಂದೋಲನದ ಮೂಲಕ ತಮ್ಮ ಒಗ್ಗಟ್ಟಿನ ಬಾವುಟ ಹಾರಿಸುತ್ತಿದ್ದಾರೆ.
ಹೌದು.. ಮನೆಯೊಂದು ಮೂರು ಬಾಗಿಲು ಆಗಿದೆ ಬಿಜೆಪಿ. ಪ್ರತ್ಯೇಕ ಕಹಳೆಯನ್ನು ಮೊಳಗಿಸಿದೆ ಕೇಸರಿ ರೆಬೆಲ್ಸ್. ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಬಾಂಬ್ ಅನ್ನು ಇಟ್ಟಿದ್ಯಾಕೆ ಬಿಜೆಪಿ ರೆಬೆಲ್ಸ್? ಪ್ರತ್ಯೇಕ ಹೋರಾಟ ನಡೆಸುತ್ತಿರುವುದೇಕೆ? ಹಾಗಾದರೆ ವಕ್ಫ್ ವಿರುದ್ಧದ ಹೋರಾಟದ ಮೂಲಕ ಅದೇ ಹೆಸರಲ್ಲಿ ಈಗ ಪ್ರತ್ಯೇಕವಾದ ತಂಡವನ್ನು ಕಟ್ಟಿಕೊಂಡು ರೆಬೆಲ್ಸ್ ಮಾಡುತ್ತಿರುವ ಜನಾಂದೋಲನದ ಉದ್ದೇಶ ಏನು? ಒಡೆದ ಮನೆಯಾಯಿತಾ ರಾಜ್ಯ ಬಿಜೆಪಿ? ವಕ್ಫ್ ನೆಪದಲ್ಲಿ ಒಂದಾದ್ರಾ ಬಿಜೆಪಿ ರೆಬೆಲ್ಸ್?

ಬಿಜೆಪಿ ಒಂದು ಮೂರು ಬಾಗಿಲು
ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರರನ್ನು ಟಾರ್ಗೇಟ್ ಮಾಡಿ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿದೆ ಬಿಜೆಪಿ ರೆಬೆಲ್ಸ್ ಟೀಮ್‌ನ ಹೋರಾಟ. ಸದ್ಯ ಇದು ಒಂದು ತಾರ್ಕಿಕ ಹಂತಕ್ಕೆ ಬಂದು ನಿಂತಿದೆ. ಇದರಿಂದಾಗಿ ಬಿಜೆಪಿ ಒಡೆದ ಮನೆಯಾಗಿದಿಯಾ ಎನ್ನುವ ಅನುಮಾನ ಶುರುವಾಗಿದೆ. ಕೆಎಸ್ ಈಶ್ವರಪ್ಪ ಅವರಿಂದ ಶುರುವಾದ ಬಂಡಾಯಕ್ಕೆ ಈಗ ಯತ್ನಾಳ್ ಅವರ ಗಟ್ಟಿ ನಾಯಕತ್ವ ಸಿಕ್ಕಂತಾಗಿದೆ. ಯತ್ನಾಳ್ ಅವರ ಬೆನ್ನ ಹಿಂದೆ ನಿಂತು ಎಲ್ಲವನ್ನೂ ಲೀಡ್ ಮಾಡ್ತಾಯಿರೋ ಅರವಿಂದ್ ಲಿಂಬಾವಳಿ ಹಾಗೂ ರಮೇಶ್ ಜಾರಕಿಹೊಳಿ, ಈ ಹೊಸ ಟೀಮ್‌ಗೆ ಬೂಸ್ಟ್ ಕೊಡುತ್ತಿದ್ದಾರೆ. ನಿಜಕ್ಕೂ ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ?
ದಕ್ಷಿಣ ಭಾರತದಲ್ಲಿ ಮೊದಲ ಭಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತೋ ಅಂದಿನಿಂದ ಪಕ್ಷದ ನಾಯಕರು ಒಗ್ಗಟ್ಟಾಗಿಲ್ಲ. ಬಿಜೆಪಿ ವರಿಷ್ಠರು ತಮ್ಮ ಪಕ್ಷ ಶಿಸ್ತಿನ ಪಕ್ಷ ಅಂತ ಎಷ್ಟೇ ಹೇಳಿಕೊಂಡರೂ ರಾಜ್ಯದ ಮಟ್ಟಿಗೆ ಅದು ಅಶಿಸ್ತಿನಿಂದಲೇ ಕೂಡಿದೆ. ಒಳಗಿಂದೊಳಗೆ ಬೇಯುತ್ತಿದೆ. ಯಾವಾಗ ಈ ಭಿನ್ನ ಮತ ಸ್ಪೋಟಗೊಳ್ಳುತ್ತೋ ಗೊತ್ತಿಲ್ಲ.

ಹೌದು.. ಕರ್ನಾಟಕದ ಬಿಜೆಪಿಗೆ ಈಗಂತೂ ಸುಗ್ಗಿ ಕಾಲ. ಆಡಳಿತರೂಢ ಕಾಂಗ್ರೆಸ್ ವಿರುದ್ಧ ದಿನಕ್ಕೊಂದು ಅಸ್ತ್ರಗಳು ಕಮಲ ಪಡೆಗೆ ಸಿಗುತ್ತಿವೆ. ಮೊದಲು ವಾಲ್ಮೀಕಿ ನಿಗಮದ ಹಗರಣ ಇದಾದ ಮೇಲೆ ಮೂಡಾ ನಿವೇಶನ ಅಕ್ರಮ ಹಂಚಿಕೆ ಹಗರಣ, ಸಿಎಂ ವಿರುದ್ಧ ಎಫ್‌ಐಆರ್, ಆ ಬಳಿಕ ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ವಿವಾದ ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಹಲವು ಸಂಗತಿಗಳು ನಡೆಯುತ್ತಿವೆ. ಇದು ಪಕ್ಷಕ್ಕೆ ಆಡಳಿತಾರೂಢ ಸರ್ಕಾರದ ವಿರುದ್ಧ ಹೋರಾಡಲು ಸಿಕ್ಕ ಭರಪೂರ ಸಂಗತಿಗಳಾಗಿವೆ.
ಆದರೆ ಹೋರಾಟದ ಹಿನ್ನೆಲೆಯಿಂದ ಬಂದ ಬಿಜೆಪಿ, ಕಾಂಗ್ರೆಸ್ ವಿರುದ್ಧ ಅಂತಹ ಖಡಕ್ ಹೋರಾಟವನ್ನು ನಡೆಸ್ತಾಯಿದಿಯಾ? ಬಿಜೆಪಿಯಲ್ಲಿ ಭಿನ್ನಮತ ಶುರುವಾಗಿದಿಯಾ? ಎರೆಡೆರೆಡು ಬಣಗಳಿಂದ ಹೋರಾಟಗಳು ನಡೆಯುತ್ತಿವೆಯಾ? ವಿಪಕ್ಷದ ಹೋರಾಟವನ್ನು ಮಂಕಾಗಿಸುತ್ತಿದಿಯಾ? ಅಷ್ಟಕ್ಕೂ ರಾಜ್ಯ ಬಿಜೆಪಿಯಲ್ಲಿ ಈಗ ಏನಾಗುತ್ತಿದೆ?
ಕಮಲ ಪಡೆಗೆ ರೆಬೆಲ್ಸ್ ಆತಂಕ! ಮಗ್ಗಲ ಮುಳ್ಳಾದ ಯತ್ನಾಳ್ & ಟೀಂ!
ರಾಜ್ಯ ಬಿಜೆಪಿಯಲ್ಲಿ ರೆಬಲ್ಸ್‌ಗಳ ಬಂಡಾಯ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸಿದ್ದರಾಮಯ್ಯ ವಿರುದ್ಧದ ಪಾದಯಾತ್ರೆ ಬಿಜೆಪಿಯಲ್ಲಿ ಒಗ್ಗಟ್ಟನ್ನು ಮೂಡಿಸುವ ಬದಲಾಗಿ ಒಡಕನ್ನು ಮೂಡಿಸುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಬೆಂಗಳೂರು ಟು ಮೈಸೂರು ಪಾದಯಾತ್ರೆಗೆ ಕೌಂಟರ್ ಎಂಬಂತೆ ಬಳ್ಳಾರಿ ಪಾದಯಾತ್ರೆ ಹಮ್ಮಿಕೊಳ್ಳಲು ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಬಣ ನಿರ್ಧಾರ ಮಾಡಿದೆ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ಸಿಕ್ಕಿಲ್ಲ. ಇದರಿಂದ ಬೇಸರಗೊಂಡ ಅತೃಪ್ತರು ಬೆಳಗಾವಿಯಲ್ಲಿ ಈಗಾಗಲೇ ಸಭೆಯನ್ನು ನಡೆಸಿದ್ದಾರೆ. ಜೊತೆಗೆ ಬೆಂಗಳೂರಿನಲ್ಲೂ ಪ್ರತ್ಯೇಕ ಸಭೆಯನ್ನು ಹಮ್ಮಿಕೊಂಡಿದ್ದಾರೆ.
ಭಿನ್ನರ ನಿಗೂಢ ನಡೆಯೇನು?
ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬಿಜೆಪಿ ಭಿನ್ನಪತಿಯರ ಗುಂಪು ಸುದ್ದಿಗೋಷ್ಠಿ ಕರೆದು ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದೆ. ಅವರೀಗ ಮೊದಲ ಹಂತದ ಪ್ರತ್ಯೇಕ ಹೋರಾಟ ಘೋಷಣೆ ಮಾಡಿದ್ದು, ವಕ್ಫ್ ಆಸ್ತಿ ವಿವಾದವನ್ನೇ ಮೊದಲ ಹೋರಾಟವಾಗಿ ತೆಗೆದುಕೊಂಡು ರಾಜ್ಯಾದ್ಯಂತ ಪ್ರವಾಸದ ಬಗ್ಗೆ ನಿರ್ಧಾರ ಮಾಡಿದ್ದಾರೆ. ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಅವರ ಸದಾಶಿವ ನಗರದಲ್ಲಿ ಇರುವ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅತೃಪ್ತ ನಾಯಕರಾದ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಲಿಂಬಾವಳಿ ಸೇರಿದಂತೆ ಹಲವರು ಇಂತಹದೊಂದು ಹೋರಾಟ ಘೋಷಣೆ ಮಾಡಿದ್ದಾರೆ.
ಸರ್ಕಾರದ ವಿರುದ್ಧ ರೆಬೆಲ್ಸ್ ಹೋರಾಟ
ಸರ್ಕಾರದ ವಿರುದ್ಧ ಬಿಜೆಪಿ ಒಗ್ಗಟ್ಟಾಗಿ ಹೋರಾಟ ನಡೆಸಿಬೇಕಿತ್ತು. ಆದರೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಜೆಡಿಎಸ್ ಪಾದಯಾತ್ರೆಯಿಂದ ಒಡಕು ಉಂಟಾಯಿತು. ಆ ಪಾದಯಾತ್ರೆಯಲ್ಲಿ ಬಿಜೆಪಿಯ ರೆಬೆಲ್ಸ್ ನಾಯಕರು ಭಾಗವಹಿಸಲೇ ಇಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಆರಂಭದಿಂದಲೇ ಒಡಕಿನ ಮಾತಾಡಿದ ಯತ್ನಾಳ್ ಹಾಗೂ ಟೀಂ ಈಗ ರೊಚ್ಚಿಗೆದ್ದಿದೆ. ಬಿಜೆಪಿ ಪಾದಯಾತ್ರೆಯಲ್ಲಿ ಭಾಗವಹಿಸಿದ ಯತ್ನಾಳ್ ಟೀ ಈಗ ಇನ್ನೊಂದು ಪಾದಯಾತ್ರೆಯನ್ನು ನಡೆಸಲು ಉದ್ದೇಶಿಸಿದೆ.
ವಕ್ಫ್ ವಿಚಾರಕ್ಕೆ ಯತ್ನಾಳ್ ಟೀಂ ಮೆಗಾ ಹೋರಾಟ ನಡೆಸುತ್ತಿದೆ. ಈ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಸಿದ್ದೇಶ್ವರ್, ಹರೀಶ್, ಕುಮಾರ್ ಬಂಗಾರಪ್ಪ, ಭಾಗವಹಿಸಿದ್ದರು. ಈ ಟೀಂ ಬಿವೈ ವಿಜಯೇಂದ್ರ ವಿರುದ್ಧ ಒಂದಾಲ್ಲಾ ಒಂದು ರೀತಿಯಲ್ಲಿ ಅಸಮಾಧಾನ ಹೊರ ಹಾಕುತ್ತಲೇ ಬಂದಿದ್ದಾರೆ. ಬಹಿರಂಗವಾಗಿ ಅವರ ವಿರುದ್ಧ ಸಾಕಷ್ಟು ಬಾರಿ ಮಾತನಾಡಿದೆ. ಇದರಿಂದಾಗಿ ಸಂಧಾನ ಸಭೆ ಕೂಡ ನಡೆಸಲಾಗಿತ್ತು. ಆದರೆ ಸಂಧಾನ ಸಭೆ ವಿಫಲವಾಗಿದೆ. ಇದಾದ ಬಳಿಕ ಎರಡು ಬಣದ ತಿಕ್ಕಾಟಕ್ಕೆ ಬ್ರೇಕ್ ಬಿದ್ದಿಲ್ಲ.
ಹೀಗಾಗಿ ಬಿಜೆಪಿ ನಡೆಸುವ ಕೆಲ ಕಾರ್ಯಕ್ರಮಗಳಿಂದಲೂ ಯತ್ನಾಳ್ ಟೀಂ ನಾಯಕರು ದೂರವಿದ್ದಾರೆ. ಅಲ್ಲದೆ ಬಿಜೆಪಿ ನಡೆಸುವ ಹೋರಾಟಗಳಿಗೆ ಪ್ರತಿಯಾಗಿ ಮತ್ತೊಂದು ಹೋರಾಟವನ್ನು ನಡೆಸುತ್ತಿದ್ದಾರೆ. ಯತ್ನಾಳ್ ಟೀಂ ರಾಜಾಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ಆರೋಪ ಕೂಡ ಮಾಡುತ್ತಿದೆ. ಇಷ್ಟಾದರೂ ಬಿಜೆಪಿ ರಾಜಾಧ್ಯಕ್ಷರ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿರುವ ಯತ್ನಾಳ್ ವಿರುದ್ಧ ವರಿಷ್ಠರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಇತ್ತ ಯತ್ನಾಳ್ ವಕ್ಫ್ ಹೋರಾಟ ನಮ್ಮದು ಅಂದರೆ ಅತ್ತ ವಿಜಯೇಂದ್ರ ವಕ್ಫ್ ಹೋರಾಟ ನಮ್ಮದು ಎನ್ನುತ್ತಿದ್ದಾರೆ. ರಾಜ್ಯದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸದೆ ರೆಬೆಲ್ಸ್ ವಕ್ಫ್ ಹೋರಾಟಕ್ಕೆ ಮುಂದಾಗಿದೆ. ಹೀಗಾಗಿ ಅತೃಪ್ತರ ಬೆಂಬಲಕ್ಕೆ ನಿಲ್ಲುವ ಅನಿವಾರ್ಯತೆಯಲ್ಲಿ ಬಿಜೆಪಿ ಸಿಲುಕಿದೆ. ನುಂಗಲು ಉಗುಳಲು ಆಗದ ಸ್ಥಿತಿಯಲ್ಲಿ ಬಿಜೆಪಿ ಇದಿಯಾ ಎನ್ನುವ ಅನುಮಾನ ಶುರುವಾಗಿದೆ.
ಒಟ್ಟಿನಲ್ಲಿ ಯತ್ನಾಳ್ ಆಂಡ್ ಟೀಂ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಒಂದಾಗಿ ಹೋರಾಟ ಮಾಡುತ್ತಿರುವುದು ಮಾತ್ರ ಕಮಲ ಪಕ್ಷದ ಆಂತರಿಕ ವಲಯದಲ್ಲಿ ಆತಂಕ ಸೃಷ್ಟಿ ಮಾಡಿದೆ. ಇದು ಯಾವ ಹಂತಕ್ಕೆ ಹೋಗುತ್ತೋ ಕಾದು ನೋಡಬೇಕಿದೆ. ಬಿಜೆಪಿ ವರಿಷ್ಠರು ಯತ್ನಾಳ್ ಟೀಂ ನೊಂದಿಗೆ ಸಂದಾನ ಮಾಡಿಕೊಳ್ತಾರಾ ಅಥವಾ ತಾವೊಂದು ಅವರೊಂದು ತೀರ ಅಅಂತ ಕೈಚಲ್ಲಿ ಕುಳಿದುಕೊಳ್ತಾರಾ ಅನ್ನೋ ಕುತೂಹಲ ಮೂಡಿದೆ.












Click it and Unblock the Notifications