42 ಕೋಟಿ ರೂ ಅನ್ನು ಪಂಚರಾಜ್ಯಗಳ ಚುನಾವಣಾ ಫಂಡ್ ಗೆ ಕೂಡಿಟ್ಟಿದ್ದ ಅಕ್ರಮ ಹಣ: ಯತ್ನಾಳ್
ಬೆಂಗಳೂರು, ಅಕ್ಟೋಬರ್ 16: ಬಿಜೆಪಿ ಸರ್ಕಾರದ ವಿರುದ್ಧ 40 % ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯಲ್ಲಿ ಸಿಕ್ಕ 42 ಕೋಟಿ ರೂ ಅನ್ನು ಪಂಚರಾಜ್ಯಗಳ ಚುನಾವಣಾ ಫಂಡ್ ಗೆ ಕೂಡಿಟ್ಟಿದ್ದ ಅಕ್ರಮ ಹಣ ಎಂಬುದು ತಿಳಿದುಬಂದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಟ್ಟಿನ ಬಾಕ್ಸಿನ ಖಜಾನೆಯ ವಿಲೇವಾರಿ ಹೊತ್ತ 'ಬಂಡೆ' ಹಾಗೂ ಅವರ ಕಂಟ್ರಾಕ್ಟರ್ ಲಾಬಿ ಗೆ ನೆನ್ನೆಯ ರೇಡ್ ಗಳು ಭ್ರಮನಿರಸನವಾಗಿದೆ. ಚಿನ್ನಾಭರಣ ವ್ಯಾಪಾರಿಗಳು, ಬಿಲ್ಡರ್ಗಳು, ಗುತ್ತಿಗೆದಾರರ ಮನೆಯ ಮೇಲೆ ಏಕಕಾಲಕ್ಕೆ ನಡೆದ ರೇಡ್ ಗಳು ಅಕ್ರಮ ಹಣಕಾಸಿನ ವ್ಯವಸ್ಥಿತ ಜಾಲ ಎಂಬುದು ಗೊತ್ತಾಗಿದೆ. ನ್ಯಾಯಯುತವಾಗಿ ದುಡಿದ ಹಣವಾಗಿದ್ದರೆ ಅದನ್ನು ಮಂಚದ ಕೆಳಗೆ ರಟ್ಟಿನ ಬಾಕ್ಸಿನಲ್ಲಿ ಏಕೆ ಬಚ್ಚಿಡಬೇಕಾಗಿತ್ತು? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವುದಕ್ಕಾಗಿ, ಸುಳ್ಳು ಆಪಾದನೆ ಮಾಡುವುದಕ್ಕಾಗಿ ನೇಮಕ ಮಾಡಿದ್ದ 'ಪಂಟರ್' ಗಳಲ್ಲಿ ಅಂಬಿಕಾಪತಿಗಳು ಟೀಮ್ ಲೀಡರ್ ಆಗಿದ್ದರು ಎಂಬುದು ಸ್ಪಷ್ಟ. ಅಂಬಿಕಾಪತಿ ಆಂಡ್ ಜಿವೆಲ್ಲರ್ಸ್ ಅಭಿವೃದ್ಧಿ ಪ್ರಾಧಿಕಾರದ ಗೌರವಾಧ್ಯಕ್ಷರು, ಖಜಾಂಚಿಗಳು ವಿಚಲಿತವಾಗಿ ಗಂಟೆಗೊಂದು ಹೇಳಿಕೆ ಕೊಡುತ್ತಿರುವುದೇ ಇದಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ 40 % ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯಲ್ಲಿ ಸಿಕ್ಕ 42 ಕೋಟಿ ರೂ ಅನ್ನು ಪಂಚರಾಜ್ಯಗಳ ಚುನಾವಣಾ ಫಂಡ್ ಗೆ ಕೂಡಿಟ್ಟಿದ್ದ ಅಕ್ರಮ ಹಣ ಎಂಬುದು ತಿಳಿದುಬಂದಿದೆ.
— Basanagouda R Patil (Yatnal) (@BasanagoudaBJP) October 15, 2023
1/1
ಇನ್ನೂ ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದಾಗ ಹೈಕಮಾಂಡ್‌ನ ಸಂತಸಕ್ಕೆ ಪಾರವೇ ಇಲ್ಲ. ಅಸ್ತಿತ್ವ ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದ ಕಾಂಗ್ರೆಸ್‌ಗೆ ಕರ್ನಾಟಕ ಸಿಕ್ಕಿದ್ದು ಮುಳುಗುತ್ತಿದ್ದವರಿಗೆ ಹುಲ್ಲು ಕಡ್ಡಿಯಲ್ಲ, ದೋಣಿಯೇ ಸಿಕ್ಕಂತಾಗಿತ್ತು. ತನ್ನ ಟೂಲ್ ಕಿಟ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ 40% ಎಂಬ ಸುಳ್ಳು ಆರೋಪ ಮಾಡಿದ್ದರ ಹಿಂದೆ ಇದ್ದ ಸತ್ಯಾಂಶ ಈಗ ಸಂಪೂರ್ಣ ಬಯಲಾಗಿದೆ.

ಪಂಚರಾಜ್ಯಗಳಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಗುತ್ತಿಗೆದಾರ ಹಾಗೂ ಸಿದ್ದರಾಮಯ್ಯ ಅವರ ಶಿಷ್ಯ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿರುವ ₹42 ಕೋಟಿಗಳು ಕರ್ನಾಟಕ ಕಾಂಗ್ರೆಸ್ ಪಾಲಿನ ಎಟಿಎಂ ಆಗಿದೆ ಹಾಗೂ 80% ಕಮಿಷನ್ ದಂಧೆ ನಡೆಸುತ್ತಿದೆ ಎಂಬುದಕ್ಕೆ ದೊರೆತ ಪುರಾವೆ. ಒಬ್ಬ ಮಾಜಿ ಕಾರ್ಪೋರೇಟರ್ ಪತಿಯೇ ನಿತ್ಯವೂ ಕೋಟಿಗಟ್ಟಲೆ ದುಡ್ಡಿನ ಮೇಲೆ ಮಲಗುತ್ತಾನೆ ಎಂದರೆ ಇನ್ನು ಈ #ATMSarkara ದಲ್ಲಿ ಮಂತ್ರಿಗಳಾಗಿದ್ದವರು ಅದೆಷ್ಟು ತಿಂದು ತೇಗಿರಬಹುದು ಎಂಬುದನ್ನು ನೀವೇ ಊಹಿಸಿ.
ದೆಹಲಿಯಿಂದ ಒಂದು ರೂಪಾಯಿ ಬಿಡುಗಡೆಯಾದರೆ ಅದರಲ್ಲಿ ಹಳ್ಳಿಗೆ ಸೇರುವುದು 15 ಪೈಸೆ ಮಾತ್ರ ಎಂದು ಮಹಾನ್ ಕಾಂಗ್ರೆಸ್ಸಿಗ ಹಾಗೂ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಸ್ವತಃ ಬಾಯಿ ಬಿಟ್ಟು ಹೇಳಿದ್ದರು. ಅದನ್ನು ಕಾಂಗ್ರೆಸ್ ಶಿರಸಾವಹಿಸಿ ಪಾಲಿಸುತ್ತಿರುವುದು ಮಾತ್ರವಲ್ಲದೆ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ವಿಧಾನ ಸೌಧದಲ್ಲಿ ಕೂತು ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿದರೆ, ಅದರಲ್ಲಿ ₹80 ಲಕ್ಷ ಕ್ವೀನ್ಸ್ ರಸ್ತೆಗೆ ತಲುಪುತ್ತದೆ.
ರಾಜ್ಯದ ಜನರ ಶ್ರಮದ ದುಡಿಮೆಯ ಹಣವನ್ನು ಪಂಚ ರಾಜ್ಯಗಳ ಚುನಾವಣೆ ಖರ್ಚಿಗೆ "ಕೈ" ಸರ್ಕಾರ ನೀಡಲು ಮುಂದಾಗಿರುವುದು ನಾಡದ್ರೋಹದ ಕೆಲಸ. ರಾಜ್ಯದ ಜನತೆಗೆ ತೆರಿಗೆಯ ಹೊರೆ ಹೆಚ್ಚಿಸಿ, ಜನರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿ, ಈಗ ಪಂಚರಾಜ್ಯಗಳಿಗೆ ಫಂಡ್ ಮಾಡುತ್ತಿರುವುದು, ಅತ್ತೆಯ ಆಸ್ತಿಯನ್ನು ಅಳಿಯ ದಾನ ಮಾಡಿದಂತೆ. ಕಲೆಕ್ಷನ್ ದಂಧೆಯಲ್ಲಿ ಕಮಾಯಿ ಮಾಡುತ್ತಾ, ಕರ್ನಾಟಕವನ್ನು ATM ಮಾಡಿಕೊಂಡಿರುವ ಕಾಂಗ್ರೆಸ್‌ಗೆ ಬೀಗ ಜಡಿಯದಿದ್ದರೆ, ಕರ್ನಾಟಕ ರಾಜ್ಯ ಸಂಪೂರ್ಣ ದಿವಾಳಿಯಾಗುವುದು ಖಂಡಿತ ಎಂದು ರಾಜ್ಯ ಬಿಜೆಪಿ ಹೇಳಿದೆ.












Click it and Unblock the Notifications