BJP State President: ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ಬಸನಗೌಡ ಪಾಟೀಲ್ ಯತ್ನಾಳ್ ಸ್ಪರ್ಧೆ? ಪ್ರತಿಕ್ರಿಯೆ
ವಿಜಯಪುರ, ಜನವರಿ 19: ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆ ನಡೆಸಲಾಗುವುದು ಎಂದು ಅಧಿಕೃತವಾಗಿ ಕೇಂದ್ರ ಹೈಕಮಾಂಡ್ ನಾಯಕರು ತಿಳಿಸುತ್ತಿದ್ದಂತೆ ಬಿಜೆಪಿ ಪಕ್ಷದೊಳಗೆ ಇನ್ನಿಲ್ಲದ ಬೆಳವಣಿಗೆಗಳು ನಡೆಯುತ್ತಿವೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೊಡೆತಟ್ಟಿರುವ ಬಣದ ಪ್ರಮುಖ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹ ಚುನಾವಣೆ ನಿಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಅವರೇ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಕಲುಷಿತ ವ್ಯಕ್ತಿಗಳನ್ನು ದೂರವಿಡಲು ನಮ್ಮ ಬಣ ತೀರ್ಮಾನಿಸಿದೆ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ವಿಜಯಪುರದಲ್ಲಿ ಅವರು ಉತ್ತರಿಸಿದ್ದಾರೆ. ದೆಹಲಿಯಿಂದ ಈಗಾಗಲೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಈ ಚುನಾವಣೆಗೆ ನಮ್ಮ ಗುಂಪಿನ ಒಬ್ಬರು ನಾಯಕರ ಸ್ಪರ್ಧೆ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಸ್ಪರ್ಧೆ?
ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಗೆ ನಾನು ನಿಲ್ಲುತ್ತೋನೋ ಇಲ್ಲವೋ ಗೊತ್ತಿಲ್ಲ. ನಾನು ಇಲ್ಲವೇ ನಮ್ಮ ಬಣದಿಂದ ಯಾರದರೂ ಚುನಾವಣೆಗೆ ನಿಲ್ಲಾತಾರೋ ಕಾದು ನೋಡೋಣ ಎಂದು ಅವರು ಪರೋಕ್ಷವಾಗಿ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಆದರೆ ಅವರು ವಿಜಯೇಂದ್ರ ಅವರನ್ನು ಆ ಹುದ್ದೆಯಿಂದ ಇಳಿಸಬೇಕು ಎಂಬುದು ಅವರ ಮಾತಿನಿಂದ ಸ್ಪಷ್ಟವಾಗಿ ತಿಳಿಯುತ್ತದೆ.
ಚುನಾವಣೆಗೆ ನಾವು ರೆಡಿ: ಯತ್ನಾಳ್
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಗೌರವಿಸುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಹುದ್ದೆಗೇರುತ್ತಿದ್ದಂತೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದವರಲ್ಲಿ ಮೊದಲಿಗರು. ತಮ್ಮ ನೇರ ನುಡಿಗೆ ಹೆಸರಾದ ಯತ್ನಾಳ್ ಅವರೊಂದಿಗೆ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ನಾಯಕರು ಸೇರಿ ಈಗಾಗಲೇ ಸಭೆ ನಡೆಸಿದ್ದಾರೆ. ಅವರ ಬಣದಿಂದ ರಾಜ್ಯಾಧ್ಯಕ್ಷ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ. ದೆಹಲಿಯಿಂದ ಚುನಾವಣೆ ಬಗ್ಗೆ ಖಚಿತ ಮಾಹಿತಿ ಹೊರ ಬೀಳುತ್ತಿದ್ದಂತೆ ಚುನಾವಣೆ ನಾವು ಸಿದ್ಧ, ನಮ್ಮಲ್ಲಿ ಒಬ್ಬರು ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಮಧ್ಯೆ ತಾವೇ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದ ಬಿ.ವೈ.ವಿಜಯೇಂದ್ರ ಅವರು ಬಹಿರಂಗವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಚ್ಚರಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಯತ್ನಾಳ್ ಅವರು, ಜಾರಕಿಹೊಳಿ ಅವರು 17 ಶಾಸಕರನ್ನು ಕರೆತಂದು ಪಕ್ಷ ಸೇರಿಸದಿದ್ದರೆ, ಯಡಿಯೂರಪ್ಪ ಅವರು ಸಿಎಂ ಆಗುತ್ತಿರಲಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ರಮೇಶ್ ಜಾರಕಿಹೊಳಿ ಕಾರಣ ಎಂದು ನೆನಪಿಸಿದರು.
ಬಿಜೆಪಿಗೆ ಅಧಿಕಾರ ನೀಡಲು ಕಾರಣ ರಮೇಶ್ ಜಾರಕಿಹೊಳಿ ಅವರು ಉತ್ತಮ ಕೆಲಸ ಮಾಡಿದ್ದರು. ಅವರನ್ನು ಸಂಪುಟದಿಂದ ತೆಗೆಯಲಾಯಿತು. ಅದರಲ್ಲಿ ವಿಜಯೇಂದ್ರ ಅವರ ಪಾಲೆಷ್ಟು ಎಂಬುದು ಗೊತ್ತಿದೆ. ಪರಿಶಿಷ್ಟ ಜನಾಂಗ ನಾಯಕರ ಬಗ್ಗೆ ಹಗುರವಾಗಿ ಮಾತನಾಡದಂತೆ ಎಚ್ಚರಿಕೆ ಕೊಟ್ಟರು.












Click it and Unblock the Notifications