'ಜನ ವಿಶ್ರಾಂತಿ ಕೊಟ್ಟಿದ್ದಾರೆ': ಸೋಲಿನ ಬಳಿಕ ಡಿ.ಕೆ ಸುರೇಶ್ ಫಸ್ಟ್ ರಿಯ್ಯಾಕ್ಷನ್
ಬೆಂಗಳೂರು, ಜೂನ್ 04: ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದ ಡಿ.ಕೆ ಸುರೇಶ್ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವು ಸಾಧಿಸಿದ್ದು, ಚುನಾವಣೆ ಆಯೋಗದಿಂದ ಅಧೀಕೃತ ಘೋಷಣೆ ಬಾಕಿ ಇದೆ.
ಮತ ಎಣಿಕೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಹಾಲಿ ಸಂಸದ ಡಿ.ಕೆ ಸುರೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದು, 'ನನಗೆ 100% ಗೆಲ್ಲುತ್ತೇನೆ ಎನ್ನುವ ವಿಶ್ವಾಸ ಇತ್ತು. ಅಭಿವೃದ್ಧಿ ಕೆಲಸಗಳಿಗೆ ಮನ್ನಣೆ ಕೊಡುತ್ತಾರೆ ಎಂದುಕೊಂಡಿದ್ದೆ. ಆದರೆ ಜನ ವಿಶ್ರಾಂತಿಯನ್ನು ಕೊಟ್ಟಿದ್ದಾರೆ. ಇನ್ನು ಮುಂದೆ ಒಬ್ಬ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ' ಎಂದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜಕೀಯದಲ್ಲಿ ತಂತ್ರ ಕುತಂತ್ರ ಕೆಲಸ ಮಾಡುತ್ತದೆ. ಈಗ ತಂತ್ರ ಕುತಂತ್ರಗಳು ಕೆಲಸ ಮಾಡಿದೆ. ಅದನ್ನು ಸ್ವಾಗತ ಮಾಡಬೇಕು. ಅದರಿಂದ ಹಿಂದೆ ಸರಿಯುವಂತಹ ಪ್ರಶ್ನೆ ಇಲ್ಲ. ಜನರ ತೀರ್ಮಾನವೇ ಅಂತಿಮ ತೀರ್ಮಾನ. ಜನರ ತೀರ್ಮಾನ ಬಿಟ್ಟು ನಾನೇನು ಮಾತನಾಡಲು ಹೋಗುವುದಿಲ್ಲ' ಎಂದಿದ್ದಾರೆ.
'ಸಂಸದನಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದೀರಿ. ಈಗಿನ ಅಗ್ನಿಪರೀಕ್ಷೆಯಲ್ಲಿ ವಿರಾಮ ಕೊಟ್ಟಿದ್ದೀರಿ. ಕ್ಷೇತ್ರದ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಕಾರ್ಯಕರ್ತರ ಜೊತೆಗೆ ಇದ್ದವನು. ಈಗಲೂ ಅವರ ಜೊತೆ ಇರುತ್ತೇನೆ. ನನ್ನ ಹೋರಾಟ ಮುಂದುವರಿಯಲಿದೆ. ದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಒಳ್ಳೆಯ ಸಂಖ್ಯೆ ಬಂದಿದೆ' ಎಂದರು.
ಮತದಾರ ಪ್ರಭುಗಳು ಕೊಟ್ಟಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ. ನನಗೆ ಅವಕಾಶ ಕೊಟ್ಟ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿಯವರಿಗೆ ಹಾಗೂ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸುತ್ತೇನೆ. ಗೆಲುವು ಸಾಧಿಸಿದ ಡಾ. ಮಂಜುನಾಥ್ ಅವರಿಗೆ ಧನ್ಯವಾದ ಹೇಳುತ್ತೇನೆ. ಹೊಸಬರು ಚೆನ್ನಾಗಿ ಕೆಲಸ ಮಾಡಲಿ. ಕ್ಷೇತ್ರಕ್ಕೆ ಒಳ್ಳೆಯದಾಗಲಿ. ಕಾರ್ಯಕರ್ತರ ಜೊತೆ ನಾನು ಜೊತೆಯಾಗಿರುತ್ತೇನೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ನಾನು ಸೋಲನ್ನು ಸ್ವೀಕರಿಸಿದ್ದೇನೆ' ಎಂದು ಹೇಳಿದರು.












Click it and Unblock the Notifications