ಟೆಕ್ಕಿ ಪತ್ನಿಯ ಸಾಯಿಸಿ, 13ನೇ ಮಹಡಿಯಿಂದ ಜಿಗಿದು ಸತ್ತ ಟೆಕ್ಕಿ

ಮೃತರು ಮಧುಸೂದನ್ (36) ಮತ್ತು ರೂಪಾ (32). ಇಬ್ಬರೂ ಸಾಫ್ಟ್ ವೇರ್ ಇಂಜಿನಿಯರುಗಳು. ವಾಸ ಜೆಪಿ ನಗರದ 6ನೇ ಹಂತದ ಶೋಭ ಟ್ಯುಲಿಪ್ ಅಪಾರ್ಟ್ ಮೆಂಟ್. 7 ವರ್ಷಗಳ ಇವರ ದಾಂಪತ್ಯಕ್ಕೆ ಸುರಭಿ ಎಂಬ 6 ವರ್ಷದ ಹೆಣ್ಣು ಮಗುವಿದೆ.
ಏನಾಯಿತೆಂದರೆ ನಿನ್ನೆ ರೂಪಾಳ ತಂದೆಯ ಜನ್ಮ ದಿನವಿತ್ತು. ಆ ಸಂಬಂಧ ಮಧುಸೂಧನ್ ಮತ್ತು ರೂಪಾ ಮಧ್ಯೆ ಜಗಳವಾಗಿದೆ. ಮಗಳು ಸುರಭಿಯನ್ನು ಸಮೀಪದಲ್ಲೇ ಇದ್ದ ತಾತನ ಮನೆಯಲ್ಲಿ ಬಿಟ್ಟುಬಂದ ಮಧುಸೂದನ. ಅಲ್ಲಿಂದ ಸೀದಾ ತನ್ನ ಹೆಂಡತಿಯ ಕಚೇರಿಗೆ ತೆರಳಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.
ಸಂಜೆ 7 ಗಂಟೆಗೆ ಮನೆಗೆ ಬಂದವರೆ ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಅದು ರಾತ್ರಿ 10 ಗಂಟೆ ವರೆಗೂ ನಡೆದಿದೆ. ಕೊನೆಗೆ ಪಿತ್ತ ನೆತ್ತಿಗೇರಿಸಿಕೊಂಡ ಮಧುಸೂದನ ತನ್ನ ಪತ್ನಿ ರೂಪಾಳನ್ನು ಮನಬಂದಂತೆ ಇರಿದು ಇರಿದು ಸಾಯಿಸಿದ್ದಾನೆ.
ಪತ್ನಿ ಸಾಯುತ್ತಿದ್ದಂತೆ ಗಾಬರಿಗೆ ಬಿದ್ದ ಮಧುಸೂದನ್ ಫ್ಯಾಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹಗ್ಗ ತುಂಡಾಗಿದೆ. ಮತ್ತಷ್ಟು ಗಾಬರಿಗೆ ಬಿದ್ದ ಮಧುಸೂದನ ಈ ಬಾರಿ ಅಡುಗೆ ಮನೆಗೆ ಓಡಿಹೋಗಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ತಕ್ಷಣಕ್ಕೆ ಬೆಂಕಿ ಕಡ್ಡಿ ಸಿಗಲಿಲ್ಲ.
ಇನ್ನು ತಡಮಾಡುವಂತಿಲ್ಲ ಎಂದೆಣಿಸಿದವನೆ ಅಪಾರ್ಟ್ ಮೆಂಟಿನ ಬಾಲ್ಕನಿಗೆ ತೆರಳಿ 13 ಮಹಡಿಯಿಂದ ಸೀದಾ ಕೆಳಗೆ ಹಾರಿ ಮೃತ್ಯಕೂಪಕ್ಕೆ ಬಿದ್ದಿದ್ದಾನೆ. ಅಲ್ಲಿಗೆ ಒಂದು ಸುಂದರ ಸಂಸಾರದ ಕಥೆ ಮುಗಿದಿದೆ. ಆದರೆ ಇದನ್ನೆಲ್ಲ ಜೀವನ ಪರ್ಯಂತ ಅನುಭವಿಸಬೇಕಿರುವವಳು ದಂಪತಿಯ ಮುದ್ದಾದ ಮಗು ಸುರಭಿ.












Click it and Unblock the Notifications