ಬಜರಂಗದಳ ನಿಷೇಧಿಸಲು ಕೇಂದ್ರ ಸರ್ಕಾರಕ್ಕಷ್ಟೇ ಅಧಿಕಾರವಿದೆ: ಸೈದ್ದಾಂತಿಕ ಇಕ್ಕಟ್ಟಿನಲ್ಲಿ ಸಿಲುಕಿರುವ ಜಗದೀಶ್ ಶೆಟ್ಟರ್ ಹೇಳಿಕೆ
ಹುಬ್ಬಳ್ಳಿ, ಮೇ 05: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಅವರು ಬಜರಂಗದಳದ ಮೇಲೆ ನಿಷೇಧವನ್ನು ಪ್ರಸ್ತಾಪಿಸುವ ಪಕ್ಷದ ಪ್ರಣಾಳಿಕೆಯ ಬಗ್ಗೆ ಮೌನ ಮುರಿದಿದ್ದಾರೆ. ಅದನ್ನು ಮಾಡಲು ಕೇಂದ್ರಕ್ಕೆ ಮಾತ್ರ ಅಧಿಕಾರವಿದೆ ಮತ್ತು ರಾಜ್ಯ ಸರ್ಕಾರಕ್ಕಲ್ಲ ಎಂದು ಅವರು ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು, ಬಜರಂಗದಳವನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ವೀರಪ್ಪ ಮೊಯ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

ಶುಕ್ರವಾರ, ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರು ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆಯ ಪ್ರಸ್ತಾಪದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಶೆಟ್ಟರ್ ಅವರನ್ನು ಕೇಳಿದ್ದರು.
ಅಕಸ್ಮಾತ್ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬಜರಂಗದಳವನ್ನು ನಿಷೇಧಿಸಿದರೆ ಜಗದೀಶ್ ಶೆಟ್ಟರ್ ಏನು ಮಾಡುತ್ತಾರೆ? ಅವರು ಕಾಂಗ್ರೆಸ್ ಪ್ರಣಾಳಿಕೆ ಮತ್ತು ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪವನ್ನು ಖಂಡಿಸಬೇಕು ಎಂದು ಈಶ್ವರಪ್ಪ ಹೇಳಿದ್ದರು.
ಈ ಮಧ್ಯೆ, ಬಜರಂಗದಳವನ್ನು ನಿಷೇಧಿಸುವ ಧೈರ್ಯ ಯಾರಿಗೂ ಇಲ್ಲ ಎಂದು ಬಿಎಸ್ ಯಡಿಯೂರಪ್ಪ ಗುರುವಾರ ಹೇಳಿದ್ದಾರೆ.

ಗುರುವಾರ ಸಂಜೆ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ 'ಹನುಮಾನ್ ಚಾಲೀಸಾ' ಪಠಣ ಮಾಡಿದರು.
ಏತನ್ಮಧ್ಯೆ, ಕರ್ನಾಟಕದಲ್ಲಿ ಬಜರಂಗದಳವನ್ನು ನಿಷೇಧಿಸುವ ತನ್ನ ಪ್ರಣಾಳಿಕೆಯ ಭರವಸೆಯಿಂದ ಯಾವುದೇ ಸಂಭಾವ್ಯ ಹಾನಿಯನ್ನು ತಗ್ಗಿಸಲು ಕಾಂಗ್ರೆಸ್ ಪಕ್ಷವು ಮುಂದಾಗಿದೆ. ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಟೆಂಪಲ್ ರನ್ ಮಾಡುವುದರೊಂದಿಗೆ ಮತ್ತು ಹನುಮಂತನ ದೇವಸ್ಥಾನದ ನಿರ್ಮಾಣದ ಭರವಸೆ ನೀಡಿದರು. ರಾಜ್ಯದಾದ್ಯಂತ ಇರುವ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿವುದಾಗಿ ಹೇಳಿದರು.
'ರಾಮನ ಬೆಂಗಾವಲು ಆಂಜನೇಯನ (ಹನುಮಾನ್) ದೇವಾಲಯಗಳು ಎಲ್ಲೆಡೆ ಇವೆ. ನಾವೂ ಆಂಜನೇಯನ ದೇವಸ್ಥಾನಗಳನ್ನು ಕಟ್ಟಿದ್ದೇವೆ. ನಾವೂ ಅವರ ಭಕ್ತರು, ಅದರಲ್ಲೂ ಕನ್ನಡಿಗರು. ಆಂಜನೇಯ ಹುಟ್ಟಿದ್ದು ಇಲ್ಲೇ ಎಂಬುದಕ್ಕೆ ಸಾಕ್ಷಿ ಇದೆ' ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಪಕ್ಷದ ಮುಂದೆ ಯಾವುದೇ ಪ್ರಸ್ತಾವಣೆ ಇಲ್ಲ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮೊಯ್ಲಿ, ಇಂತಹ ಸಂಘಟನೆಗಳನ್ನು ನಿಷೇಧಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಹೇಳಿದ್ದಾರೆ.












Click it and Unblock the Notifications