ಗೋವಾ : ಬೈನಾ ಬೀಚ್ ಕನ್ನಡಿಗರಿಗೆ ಮತ್ತೆ ಆತಂಕ
ವಾಸ್ಕೋ, ಏ. 11 : ಗೋವಾದ ಬೈನಾ ಕಡಲ ತೀರದಲ್ಲಿರುವ ಕನ್ನಡಿಗರು ಮತ್ತೊಮ್ಮೆ ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. 245 ಕನ್ನಡಿಗರ ಕುಟುಂಬಗಳಿಗೆ ಮನೆ ತೆರವು ಮಾಡಲು 48 ಗಂಟೆಗಳ ಗಡುವನ್ನು ಜಿಲ್ಲಾಡಳಿತ ನೀಡಿದೆ.
ವಾಸ್ಕೋ ಕಲೆಕ್ಟರ್ ಶುಕ್ರವಾರ ಈ ಕುರಿತು ಕನ್ನಡಿಗರ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬೈನಾ ಕಡಲ ತೀರದಲ್ಲಿರುವ 245 ಕುಟುಂಬಗಳು ಮನೆಗಳನ್ನು 48 ಗಂಟೆಗಳಲ್ಲಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. [ಗೋವಾ ಕನ್ನಡಿಗರ ನೆರವಿಗೆ ಧಾವಿಸಿದ ಪೊಲೀಸರು]

ಕಡಲ ತೀರ ಅಸುರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದು, ತೀರದ ಅಂಚಿನಲ್ಲಿರುವ ಎಲ್ಲ ಮನೆಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದರ ಭಾಗವಾಗಿಯೇ ತೆರವುಗೊಳಿಸುವ ನೋಟಿಸ್ ಕಳಿಸಲಾಗಿದೆ. [ಗೋವಾ : ಬೈನಾ ನಿರಾಶ್ರಿತರಿಗೆ ಶಾಶ್ವತ ಪರಿಹಾರ]
ಮುಖ್ಯಮಂತ್ರಿಗಳಿಗೆ ಪತ್ರ : ಗೋವಾ ಸರ್ಕಾರ ಕನ್ನಡಿಗರ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸುತ್ತಿದೆ. ಕನ್ನಡಿಗರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
2014ರಲ್ಲಿಯೂ ಕನ್ನಡಿಗರ ಮನೆಗಳನ್ನು ಕಡಲ ತೀರದಿಂದ ತೆರವುಗೊಳಿಸಲಾಗಿತ್ತು. ಆಗ ನೆಲೆ ಕಳೆದು ಕೊಂಡ ಕೆಲವು ಕುಟುಂಬಗಳಿಗೆ ಇದುವರೆಗೂ ಮನೆ ಸಿಕ್ಕಿಲ್ಲ. ಇಂತಹ ಹೊತ್ತಿನಲ್ಲೇ ಮತ್ತೆ ಮನೆಗಳನ್ನು ತೆರವುಗೊಳಿಸಲು ಗೋವಾ ಸರ್ಕಾರ ಸಜ್ಜಾಗುತ್ತಿದೆ.
ಕಳೆದ ವರ್ಷ ಬೈನಾದ ಕಡಲ ತೀರದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ 65 ಮನೆಗಳನ್ನು ಏಕಾಏಕಿ ಸಂಪೂರ್ಣವಾಗಿ ನೆಲಸಮಗೊಳಿಸಲಾತ್ತು. 10 ಮನೆಗಳನ್ನು ಭಾಗಶಃ ಕೆಡವಲಾಗಿತ್ತು.












Click it and Unblock the Notifications