ಕೊಳವೆ ಬಾವಿಯಲ್ಲಿಯೇ ಮಣ್ಣಾದ ತಿಮ್ಮಣ್ಣ
ಬಾಗಲಕೋಟೆ, ಆ.9 : ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಭಾನುವಾರ ಕೊಳವೆ ಬಾವಿಗೆ ಬಿದ್ದಿರುವ ಬಾಲಕ ತಿಮ್ಮಣ್ಣನನ್ನು ಹೊರತೆಗೆಯಲು ನಡೆಸಲಾಗುತ್ತಿದ್ದ ಕಾರ್ಯಾಚರಣೆಯನ್ನು ತಕ್ಷಣದಿಂದ ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಜಮೀನಿನಲ್ಲಿ ತೊಡಿರುವ ಸುರಂಗವನ್ನು ಮುಚ್ಚಿಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ.
ಶನಿವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ಜಿಲ್ಲಾಧಿಕಾರಿ ಮೇಘಣ್ಣನವರ್, ತಿಮ್ಮಣ್ಣ ಪೋಷಕರು ಮತ್ತು ಗ್ರಾಮಸ್ಥರ ಸಭೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಹಾಗೆಯೇ ಸುರಂಗ ಮುಚ್ಚುವ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ತಿಮ್ಮಣ್ಣ ಕುಟುಂಬದವರು ಮತ್ತು ಗ್ರಾಮಸ್ಥರ ಮನವಿಯಂತೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತಿದೆ. ಈ ಕ್ಷಣದಿಂದಲೇ ಹನುಮಂತ ಹಟ್ಟಿ ಜಮೀನಿನಲ್ಲಿ ತೋಡಿರುವ ಸುರಂಗವನ್ನು ಮುಚ್ಚುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕೊಳವೆ ಬಾವಿ ಮುಚ್ಚದಿರುವ ತಿಮ್ಮಣ್ಣನ ತಂದೆ ಹನುಮಂತ ಹಟ್ಟಿ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಸರ್ಕಾರ ಹಿಂಪಡೆಯಲಿದೆ ಮತ್ತು ಸರ್ಕಾರದಿಂದ ತಿಮ್ಮಣ್ಣ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಎಸ್.ಆರ್.ಪಾಟೀಲ್ ಹೇಳಿದರು. [ಮಣ್ಣು ಕುಸಿಯುವ ಭೀತಿ]
ಸರ್ಕಾರದ ವತಿಯಿಂದ ಹನುಮಂತ ಹಟ್ಟಿಯ ಒಬ್ಬಳು ಹೆಣ್ಣು ಮಗುವಿನ ಶಿಕ್ಷಣಕ್ಕೆ ನೆರವು ನೀಡಲಾಗುತ್ತದೆ ಎಂದು ಎಸ್.ಆರ್.ಪಾಟೀಲ್ ಹೇಳಿದರು. ಕಾರ್ಯಾಚರಣೆಗೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಪಾಟೀಲ್ ಧನ್ಯವಾದ ಸಲ್ಲಿಸಿದರು. ಬೀಳಗಿ ಶಾಸಕ ಜಿ.ಟಿ.ಪಾಟೀಲ್ ಸಹ ತಿಮ್ಮಣ್ಣ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.












Click it and Unblock the Notifications