ಬಾದಾಮಿ : ತಿಮ್ಮಣ್ಣ ಬಳಿ ತಲುಪಲು 45 ದಿನಬೇಕು
ಬಾಗಲಕೋಟೆ, ಆ.9 : ಬಾದಾಮಿ ತಾಲೂಕು ಸೂಳಿಕೇರಿಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಮಣ್ಣು ಪರೀಕ್ಷಾ ತಂಡ ಶನಿವಾರ ಬೆಳ್ಳಗ್ಗೆ ಆಗಮಿಸಿದ್ದು ಪ್ರಥಮ ಹಂತದ ಮಣ್ಣು ಪರೀಕ್ಷೆಯನ್ನು ತಜ್ಞರು ಮುಗಿಸಿದ್ದಾರೆ. ಕಾರ್ಯಾಚರಣೆಯನ್ನು ಮುಂದುವರೆಸಿದರೆ, ಮಣ್ಣು ಕುಸಿದು ಬೀಳುವ ಸಾಧ್ಯತೆ ಇದ್ದು, ರಕ್ಷಣಾ ಸಿಬ್ಬಂದಿಗೆ ಅಪಾಯ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಿಂದ ಆಗಮಿಸಿರುವ ತಜ್ಞರ ಜೊತೆ ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್ ಪಾಟೀಲ್ ಹಾಗೂ ಬೀಳಗಿ ಶಾಸಕ ಜಿ.ಟಿ.ಪಾಟೀಲ್ ಭೇಟಿನೀಡಿದ್ದು, ತಜ್ಞರ ಜೊತೆ ಚರ್ಚೆ ನಡೆಸಿದರು. ಈಗ ನಡೆಸುತ್ತಿರುವ ಕಾರ್ಯಾಚರಣೆಯನ್ನು ಮುಂದುವರೆಸಿದರೆ, ಉಳಿದ 90 ಅಡಿ ತಲುಪಲು 45 ದಿನಗಳು ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ತಿಮ್ಮಣ್ಣ ಪೋಷಕರು ಮತ್ತು ಗ್ರಾಮಸ್ಥರ ಸಭೆ ನಡೆಯಲಿದ್ದು, ಸಭೆಯಲ್ಲಿ ಕಾರ್ಯಾಚರಣೆ ಮುಂದುವರೆಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ಹಿಂದಿನ ಸುದ್ದಿ : ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ಭಾನುವಾರ ಕೊಳವೆ ಬಾವಿಗೆ ಬಿದ್ದಿರುವ ಬಾಲಕ ತಿಮ್ಮಣ್ಣನನ್ನು ಹೊರತೆಗೆಯಲು ನಡೆಸಲಾಗುತ್ತಿದ್ದ ಕಾರ್ಯಾಚರಣೆಯನ್ನು ಶುಕ್ರವಾರ ಸಂಜೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶನಿವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಶುಕ್ರವಾರ ತಿಮ್ಮಣ್ಣ ಕೊಳವೆ ಬಾವಿಗೆ ಬಿದ್ದ ಸ್ಥಳದಲ್ಲಿ ತಿಮ್ಮಣ್ಣನ ತಾಯಿ ಸಂಗವ್ವ, ಅಜ್ಜಿ ಮತ್ತು ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಕಾರ್ಯಾಚರಣೆ ನಿಲ್ಲಿಸಲು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೇಘಣ್ಣವರ್ ಹೇಳಿದ್ದಾರೆ.

ಶನಿವಾರ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಕೊಳವೆ ಬಾವಿಯಲ್ಲಿಯೇ ತಿಮ್ಮಣ್ಣನ ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಯಿದೆ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕುಟುಂಬದವರು ಮತ್ತು ಗ್ರಾಮಸ್ಥರ ಜೊತೆ ಸಭೆ ನಡೆಯಲಿದೆ. [ಶುಕ್ರವಾರ ಏನಾಯ್ತು ಇಲ್ಲಿವೆ ವಿವರ]
ಕಳೆದ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನ ರಕ್ಷಣಾ ಕಾರ್ಯ ಅಂದಿನಿಂದಲೂ ನಡೆಯುತ್ತಿದೆ. ಆದರೆ, ಬುಧವಾರದಿಂದ ತಿಮ್ಮಣ್ಣ ಕುಟುಂಬದವರು ಕಾರ್ಯಾಚರಣೆ ನಿಲ್ಲಿಸಿ, ಹೊಲ ಉಳಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.












Click it and Unblock the Notifications