Sadahiva Mutya Prediction: ರಾಜಕೀಯ, ಮಳೆ ಬಗ್ಗೆ ಬಬಲಾದಿ ಸದಾಶಿವ ಮುತ್ಯಾ ಸ್ಫೋಟಕ ಭವಿಷ್ಯ
2024ರಲ್ಲಿ ಭಾರಿ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಬಳಿಕ ವ್ಯಾಪಕ ಮಳೆಯಿಂದಾಗಿ ಜೀವ ಬಂದಂತಾಗಿತ್ತು. ಉತ್ತಮವಾಗಿ ಮಳೆಯಾಗಿದ್ದರಿಂದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು ಈ ಬಾರಿ ಬೇಸಿಗೆಯಲ್ಲಿ ನೀರಿನ ಅಭಾವ ಕಾಡುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ. ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಲಕ್ಷಾಂತರ ಭಕ್ತರು ನಂಬಿಕೆಯ ಕಾಲಜ್ಞಾನಿ ಸದಾಶಿವ ಮುತ್ಯಾ 2025ರ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಸದಾಶಿವ ಮುತ್ಯಾ 2025ರ ಕುರಿತು ಕಾಲಜ್ಞಾನವನ್ನು ಹೇಳಿದ್ದಾರೆ. ಅವರ ಹೇಳಿಕೆ ಸದ್ಯ ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ವರ್ಷ ಸದಾಶಿವಪ್ಪ ಚಿಕ್ಕಯ್ಯಮುತ್ಯಾ ಬರೆದಿಟ್ಟಿರುವ ಕಾಲಜ್ಞಾನವನ್ನು ಓದಿ ಹೇಳಿದ್ದು, ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಣ್ಣ ಎಂದು ಹೇಳಿರುವುದಾಗಿ ತಿಳಿಸಿದರು.

ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವುಗಳಾಗಲಿದ್ದು, ಹಣದ ಹಿಂದೆ ಜನರಿಗೆ ಬಂಧುತ್ವದ ಬಗ್ಗೆ ತಿಳಿಯುವ ಸಮಯ ಬಂದಿದೆ. ಈ ವರ್ಷ ವಿದ್ಯುಚ್ಛಕ್ತಿ ಮತ್ತು ನೀರಿನ ಕೊರತೆ ಬಹಳವಾಗಿ ಕಾಡಲಿದೆ ಎಂದು ಹೇಳಿದ್ದಾರೆ. ಅಂದರೆ ಈ ಬಾರಿ ರಾಜ್ಯದಲ್ಲಿ ಮಳೆಯ ಕೊರತೆಯಾಗಬಹುದು ಎಂದು ಹೇಳಿದ್ದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ರಾಜಕೀಯದಲ್ಲಿ ಬದಲಾವಣೆ
ರಾಜ್ಯ ರಾಜಕೀಯದ ಬಗ್ಗೆ ಕೂಡ ಭವಿಷ್ಯ ನುಡಿದಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ. ಭೂಕಂಪ, ಅಗ್ನಿ ದುರಂತ ಹೆಚ್ಚಾಗಲಿದ್ದು, ಧರ್ಮ ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗಲಿದೆ. ಈ ವರ್ಷ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ತಿಳಿಯಿರಣ್ಣ ಎಂದು ಮುತ್ಯಾ ಹೇಳಿದ್ದಾರೆ ಎಂದು ಸದಾಶಿವ ಮುತ್ಯಾ ತಿಳಿಸಿದ್ದಾರೆ.
ಕಾಡ್ಗಿಚ್ಚು ಹೆಚ್ಚಾಗಲಿದ್ದು ಎಲ್ಲಾ ಪ್ರಾಣಿಗಳು ಕಾಡಿನಿಂದ ನಾಡಿನ ಕಡೆಗೆ ಬರುವಂತಾಗುತ್ತದೆ. ನಿರೀಕ್ಷೆಗೂ ಮೀರಿದ ಹೊಸ ಕಾಯಿಲೆಗಳು ಬರುತ್ತವೆ. ದೇಶದ ಆರ್ಥಿಕತೆ, ರಾಜ್ಯದ ಆರ್ಥಿಕತೆಗೆ ಹಾನಿಯಾಗಲಿದೆ. ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುತ್ತಾರೆ ಎಂದು ಕಾಲಜ್ಞಾನದಲ್ಲಿ ಹೇಳಲಾಗಿದೆ.
ದೇಶದಲ್ಲಿ ಕಳ್ಳರ ಕಾಟ ಮತ್ತಷ್ಟು ಹೆಚ್ಚಾಗಲಿದೆ. ಮಳೆ, ಬೆಳೆ ಮಧ್ಯಮ ಪ್ರಮಾಣದಲ್ಲಿರಲಿದೆ. ಜನಸಾಮಾನ್ಯರಿಗೆ ವಿವಿಧ ರೋಗಗಳು ಕಾಡಲಿವೆ. ವ್ಯಾಪಾರಸ್ಥರಿಗೆ ಸಾಧಾರಣ ಲಾಭ ಸಿಗಲಿದೆ. ರಾಷ್ಟ್ರದ ನಾಯಕರಿಗೆ ಅನಿಷ್ಠ ಕಾದಿದ್ದು, ಆಳುವ ಮಹಾನಾಯಕರಿಗೆ ಅಪಾಯವಿದೆ ಎಂದು ಹೇಳಿದ್ದಾರೆ.
ಈ ಬಾರಿ ಜೋರಾದ ಗಾಳಿ ಬೀಸಲಿದೆ, ಆಳುವ ದೊರೆಗಳಿಗೆ ಒಳಗೊಳಗೆ ಕಿತ್ತಾಟ ಹೆಚ್ಚಾಗಲಿದೆ. ಯುದ್ಧ, ವೈರತ್ವ ಹೆಚ್ಚಾಗಿ ದೇಶಕ್ಕೆ ಕೆಡುಕು ಸಂಭವಿಸಲಿದೆ. ಮೇವು, ಕಾಳು ಕಡಿಗಳನ್ನು ಜೋಪಾನವಾಗಿಟ್ಟುಕೊಳ್ಳುವಂತೆ ರೈತರಿಗೆ ಹೇಳಿದ್ದಾರೆ. ಕಾಳು-ಕಡ್ಡಿಗಳ ಬೆಲೆ ಗಗನಕ್ಕೇರಲಿದೆ. ಮಹಾನಗರಗಳಿಗೆ ತೊಂದರೆ ಇದೆ, ಬೆಲೆ ಏರಿಕೆಯಿಂದ ಜನ ತೊಂದರೆ ಅನುಭವಿಸಲಿದ್ದಾರೆ ಎಂದು ಕಾಲಜ್ಞಾನದಲ್ಲಿ ಹೇಳಿರುವುದಾಗಿ ಸದಾಶಿವ ಮುತ್ಯಾ ತಿಳಿಸಿದ್ದಾರೆ.












Click it and Unblock the Notifications