ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಆರ್.ಪಾಟೀಲ್ ಗೆ ಮಹತ್ವದ ಹುದ್ದೆ
ಬೆಂಗಳೂರು, ಫೆಬ್ರವರಿ 17: ಇತ್ತೀಚಿಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ಇದೀಗ ಹೊಸ ಹುದ್ದೆ ನೀಡಲಾಗಿದೆ. ರಾಜ್ಯ ಸರ್ಕಾರ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಆರ್ ಪಾಟೀಲ್ ಅವರಿಗೆ ಹೊಸ ಜವಾಬ್ದಾರಿ ನೀಡಿದ್ದು, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಶಾಸಕ ಬಿ.ಆರ್ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.

ಈ ಸಂಬಂಧ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆಯಲ್ಲಿ ಬಿ.ಆರ್ ಪಾಟೀಲ್, ಮಾನ್ಯ ಶಾಸಕರು, ಆಳಂದ ವಿಧಾನಸಭಾ ಕ್ಷೇತ್ರ ಇವರನ್ನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ (ಯೋಜನ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ) ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹಾಗೂ ಎಲ್ಲಾ ಸೌಲಭ್ಯಗಳೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರ್.ವಿ ದೇಶಪಾಂಡೆ, ಬಿ.ಆರ್ ಪಾಟೀಲ್ ಹಾಗೂ ಬಸವರಾಜ್ ರಾಯರೆಡ್ಡಿಯಂತಹ ಹಿರಿಯ ಶಾಸಕರಿಗೆ ಸಚಿವ ಸಂಪುಟದ ಸ್ಥಾನಮಾನದ ಹುದ್ದೆ ನೀಡಿದ್ದರು. ಆರ್.ವಿ.ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.
ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಹಾಗೂ ಬಿ.ಆರ್ ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಆದರೆ ಬಿ.ಆರ್ ಪಾಟೀಲ್ ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಆರ್ ಪಾಟೀಲ್ ಅವರ ಅಸಮಾಧಾನ ಶಮನ ಮಾಡಲು ರಾಜ್ಯ ಸರ್ಕಾರ ಮಹತ್ವದ ಹುದ್ದೆ ನೀಡಿದೆ.












Click it and Unblock the Notifications