ಮರಳು ಮಾಫಿಯಾದಿಂದ ಡಿವೈಎಸ್ಪಿ ಹತ್ಯೆ ಯತ್ನ
ಮಂಡ್ಯ, ಸೆ.1 : ಅಕ್ರಮ ಮರಳು ಸಾಗಾಣಿಕೆ ಘಟಕದ ಮೇಲೆ ದಾಳಿ ಮಾಡಿದ್ದ ಡಿವೈಎಸ್ಪಿ ಅವರನ್ನು ಲಾರಿ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದ ಮಧು (24) ಹಾಗೂ ಕೀಳಘಟ್ಟದ ಲೋಕೇಶ್ (22) ಎಂದು ಗುರುತಿಸಲಾಗಿದೆ. ಅಕ್ರಮ ಮರಳು ಸಾಗಾಣಿಕೆ ಘಟಕದ ಮೇಲೆ ದಾಳಿ ನಡೆಸಿದ ಡಿವೈಎಸ್ಪಿ ಸವಿತಾ ಹೂಗಾರ್ ಮೇಲೆ ಲಾರಿ ಹತ್ತಿಸಿ ಕೊಲೆಗೆ ಆರೋಪಿಗಳು ಯತ್ನಿಸಿದ್ದರು.

ಘಟನೆಯ ವಿವರ : ಶುಕ್ರವಾರ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಅರಕೆರೆ ಗ್ರಾಮದ ದೇವಾಲಯದ ಸಮೀಪವಿರುವ ಸರ್ಕಾರಿ ತೊರೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆ ಮೇಲೆ ನಾಗಮಂಗಲ ಡಿವೈಎಸ್ಪಿ ಸವಿತಾ ಹೂಗಾರ್ ದಾಳಿ ನಡೆಸಿದ್ದರು. [ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು]
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ತಡೆಯಲು ಯತ್ನಿಸಿದಾಗ ಡಿವೈಎಸ್ಪಿ ಅವರ ಜೀಪಿಗೆ ಲಾರಿಯನ್ನು ಗುದ್ದಿ ಅವರನ್ನು ಕೊಲೆ ಮಾಡಲು ಆರೋಪಿಗಳು ಯತ್ನಿಸಿದ್ದರು. ಆದರೆ, ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಡಿವೈಎಸ್ಪಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಲಾರಿಯನ್ನು ಜೀಪಿಗೆ ಗುದ್ದಿದ ನಂತರ ಚಾಲಕ ಮತ್ತು ಲಾರಿಯಲ್ಲಿದ್ದ ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರು ಭಾನುವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸೋಮವಾರ ಅವರನ್ನು ನ್ಯಾಯಾಲಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.












Click it and Unblock the Notifications