ಉಪ ಚುನಾವಣೆ: ಮೈತ್ರಿ ಧರ್ಮ ಪಾಲನೆ, ಸಂಕಷ್ಟದಲ್ಲಿ ಜೆಡಿಎಸ್-ಬಿಜೆಪಿ!
ಬೆಂಗಳೂರು, ಜೂನ್ 07; ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಹ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕಾಂಗ್ರೆಸ್ ಕಟ್ಟಿಹಾಕಿದೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿದೆ.
ಲೋಕಸಭೆ ಚುನಾವಣೆಗೆ ಮೂವರು ಶಾಸಕರು ಸ್ಪರ್ಧೆ ಮಾಡಿದ್ದರು. ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ (ಹಾವೇರಿ-ಗದಗ), ಚನ್ನಪಟ್ಟಣ ಶಾಸಕ ಎಚ್. ಡಿ. ಕುಮಾರಸ್ವಾಮಿ (ಮಂಡ್ಯ), ಸಂಡೂರು ಶಾಸಕ ಇ. ತುಕಾರಾಮ್ (ಬಳ್ಳಾರಿ) ಕಣಕ್ಕಿಳಿದಿದ್ದರು. ಎಲ್ಲರೂ ಜಯಗಳಿಸಿದ್ದಾರೆ.

ಈಗ ಈ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾಗಲಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಧರ್ಮವನ್ನು ಪಾಲಿಸಬೇಕಿದೆ. ಇದು ಉಭಯ ಪಕ್ಷಗಳಿಗೆ ಸಂಕಟವನ್ನು ತಂದಿದೆ. ಯಾವ ಕ್ಷೇತ್ರ, ಯಾರ ಪಾಲು? ಎಂಬುದು ಸದ್ಯದ ಚರ್ಚೆ.
ನಿಖಿಲ್ ಕುಮಾರಸ್ವಾಮಿ ಮಾತು: ಶುಕ್ರವಾರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ಚನ್ನಪಟ್ಟಣ, ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಉಪ ಚುನಾವಣೆಯಲ್ಲಿ ನಾವು ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕಿದೆ" ಎಂದು ಹೇಳಿದರು.
"ಚನ್ನಪಟ್ಟಣ ಕ್ಷೇತ್ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರಕ್ಕೆ ಸೇರುತ್ತದೆ. ಅಲ್ಲಿ ನಾವು ಮೈತ್ರಿ ಧರ್ಮ ಪಾಲಿಸಬೇಕಾಗುತ್ತದೆ. ಯಾವ ಕ್ಷೇತ್ರಕ್ಕೆ ಯಾರಿಗೆ, ಯಾರು ಯಾವ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕು? ಎಂದು ಸೂಕ್ತ ಸಮಯದಲ್ಲಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ತಿಳಿಸಿದರು.
2023ರ ಲೋಕಸಭೆ ಚುನಾವಣೆಯ ಬಳಿಕ ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿತು. ವಿಧಾನ ಪರಿಷತ್ ಚುನಾವಣೆ, ಲೋಕಸಭೆ ಚುನಾವಣೆ, ಲೋಕಸಭೆ ಚುನಾವಣೆ ಬಳಿಕ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯಿತು.
ಈಗ ಉಪ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆದರೆ ಚನ್ನಪಟ್ಟಣ ಕ್ಷೇತ್ರ ಯಾರಿಗೆ?. ಹಾಲಿ ಶಾಸಕರಾದ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಅವರು ರಾಜೀನಾಮೆ ನೀಡಿದ ಬಳಿಕ ಉಪ ಚುನಾವಣೆ ನಡೆಯಲಿದೆ. ಆಗ ಚನ್ನಪಟ್ಟಣದಲ್ಲಿ ಬಿಜೆಪಿ ಅಥವ ಜೆಡಿಎಸ್ ಯಾರು ಅಭ್ಯರ್ಥಿಯಾಗಲಿದ್ದಾರೆ? ಎಂಬುದು ಕುತೂಹಲ.
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇದಕ್ಕೆ ಎಚ್. ಡಿ. ಕುಮಾರಸ್ವಾಮಿ ಒಪ್ಪಿಗೆ ನೀಡಬೇಕು, ಬಿಜೆಪಿಯು ಚನ್ನಪಟ್ಟಣವನ್ನು ಬಿಟ್ಟುಕೊಡಲು ಹಸಿರು ನಿಶಾನೆ ತೋರಿಸಬೇಕು.
ಆದರೆ ಮೈತ್ರಿಧರ್ಮ ಪಾಲನೆ ಮಾಡಿದರೆ ಜೆಡಿಎಸ್ ಬಿಜೆಪಿಗೆ ಸೀಟು ಬಿಟ್ಟುಕೊಟ್ಟರೆ ಚನ್ನಪಟ್ಟಣದ ಮಾಜಿ ಶಾಸಕ ಸಿ. ಪಿ. ಯೋಗೇಶ್ವರ ಅವರು ಅಭ್ಯರ್ಥಿಯಾಗಬಹುದು ಎಂಬುದು ಲೆಕ್ಕಾಚಾರ. ಚನ್ನಪಟ್ಟಣ ಯೋಗೇಶ್ವರಗೆ ನೀಡುವ ಲೆಕ್ಕಾಚಾರದ ಭಾಗವಾಗಿಯೇ ಮಂಡ್ಯದಲ್ಲಿ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಮತ್ತೊಂದು ಕಡೆ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿಯಲ್ಲಿ ಜೆಡಿಎಸ್ ಪ್ರಬಲವಾಗಿಲ್ಲ. ಉಪ ಚುನಾವಣೆಯಲ್ಲಿ ಸೀಟನ್ನು ಬಿಜೆಪಿಗೆ ಬಿಟ್ಟುಕೊಡಬೇಕು. ಅಲ್ಲಿಗೆ ಮೈತ್ರಿ ಧರ್ಮ ಪಾಲನೆ ಮಾಡಿದರೆ ಉಪ ಚುನಾವಣೆಯಲ್ಲಿ ಎರಡು ಸೀಟುಗಳು ಬಿಜೆಪಿ ಪಾಲಾಗಲಿವೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷ ಪ್ರಭಾವ ಹೊಂದಿದೆ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗುವ ಕ್ಷೇತ್ರ ಬಿಜೆಪಿಗೆ ಹೋಗಲಿದೆಯೇ? ಎಂಬ ಪ್ರಶ್ನೆ ಈಗ ಎದುರಾಗಿದೆ.












Click it and Unblock the Notifications