ಹಿಂದೂಗಳ ಹಿತ ಕಾಯಲು ಚುನಾವಣಾ ಕಣಕ್ಕೆ ಮುತಾಲಿಕ್
ಚಿಕ್ಕಮಗಳೂರು, ಸೆಪ್ಟೆಂಬರ್ 04: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಘೋಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪ್ರವಾಸದಲ್ಲಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಅವರು, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುಳಿವು ನೀಡಿಲ್ಲ.
ಈ ಕುರಿತಂತೆ ಅನೇಕ ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯಕರ್ತರು ಸಮೀಕ್ಷೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಮುತಾಲಿಕ್ ಅವರು ಹೊರ ಹಾಕಿದರು.

ಚಿಕ್ಕಮಗಳೂರು ಹಾಗೂ ಶೃಂಗೇರಿಯಲ್ಲೂ ಕೂಡ ನಮ್ಮ ಕಾರ್ಯಕರ್ತರು ಸರ್ವೆ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ನಮ್ಮ ಕಾರ್ಯಕರ್ತರು ಒತ್ತಾಯ ಮಾಡಿದ್ದು, ಸರ್ವೆಯ ರಿಪೋರ್ಟ್ ಬಂದ ಮೇಲೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ದತ್ತ ಪೀಠದ ಬಗ್ಗೆ: ದತ್ತಪೀಠ ವಿವಾದ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು ತಿರ್ಮಾನ ಕೈಗೊಳ್ಳಬಹುದಿತ್ತು. ಆದ್ರೂ ಕೂಡ ಯಾವ ಸರ್ಕಾರಗಳು ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿವೆ. ಕೂಡಲೇ ರಾಜ್ಯ ಸರ್ಕಾರ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಬೆಳಗಾವಿ, ಬಿಜಾಪುರ, ಗುಲ್ಬರ್ಗಾ, ಧಾರವಾಡ, ಚಿಕ್ಕಮಗಳೂರು, ಕಾರವಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶ್ರೀರಾಮ ಸೇನೆ ಸಂಘಟನೆ ಸಕ್ರಿಯವಾಗಿದ್ದು, ರಾಜ್ಯದ 60ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆ ಸಂಘಟನೆ ಬಲಿಷ್ಠವಾಗಿದೆ.
ಉಡುಪಿ ಕೃಷ್ಣ ಮಠದ ಪೇಜಾವರಶ್ರೀ ಮತ್ತು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಮಧ್ಯಸ್ಥಿಕೆಯಲ್ಲಿ ಬಿಜೆಪಿ ತೆಕ್ಕೆಗೆ ಮುತಾಲಿಕ್ ರನ್ನು ಸೇರಿಸುವ ಪ್ರಯತ್ನ ವಿಫಲವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಹಿಂದೂತ್ವ ಅಜೆಂಡಾದೊಂದಿಗೆ ಮುತಾಲಿಕ್ ಕಣಕ್ಕಿಳಿಯಲು ಸಜ್ಜಾಗಿದ್ದು, ಬಿಜೆಪಿಯ ಮತಗಳನ್ನು ಸೆಳೆಯುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.












Click it and Unblock the Notifications