ಹುಣಸೂರು ಕ್ಷೇತ್ರ : ಮಂಜುಗೆ ಹ್ಯಾಟ್ರಿಕ್ ಗೆಲುವಿಗೆ ತಡೆ ಸಾಧ್ಯವೇ?
ಮೈಸೂರು, ಜನವರಿ 19 : ಹುಣಸೂರು ಅತಿ ಹೆಚ್ಚು ತಂಬಾಕು ಬೆಳೆಯುವ ತಾಲೂಕುಗಳಲ್ಲಿ ಒಂದಾಗಿದೆ. ಹುಣಸೂರಿನ ತೇಗದ ಮರ ಗೃಹೋಪಯೋಗಿ ವಸ್ತುಗಳಿಗಾಗಿ ಅತಿ ಹೆಚ್ಚು ಬೇಡಿಕೆಯಲ್ಲಿದೆ. ಕ್ಷೇತ್ರದ ರಾಜಕಾರಣದ ಬಗ್ಗೆಯೂ ರಾಜ್ಯ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತದೆ.
ಕರ್ನಾಟಕದ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಮೈಸೂರು ಜಿಲ್ಲೆಯ ಹುಣಸೂರು. ನಂತರ ಅವರ ಮಗಳು ಚಂದ್ರಪ್ರಭ ಅರಸು ಅವರು ಎರಡು ಭಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಒಮ್ಮೆ ಸೋಲನ್ನು ಕಂಡಿದ್ದರು.
ಅರಸು ಮತ್ತು ಅವರ ಮಗಳನ್ನು ಹೊರತು ಪಡಿಸಿದರೆ, ಜಿ.ಟಿ.ದೇವೇಗೌಡ, ದಿ. ಚಿಕ್ಕಮಾದು, ಸಿ.ಹೆಚ್.ವಿಜಯಶಂಕರ್ ಈ ಕ್ಷೇತ್ರವವನ್ನು ಪ್ರತಿನಿಧಿಸಿರುವ ಪ್ರಮುಖ ನಾಯಕರು. ಸದ್ಯ, ಮುಖ್ಯಮಂತ್ರಿಗಳ ತವರು ಜಿಲ್ಲೆಯ ಕ್ಷೇತ್ರವಾಗಿರುವುದರಿಂದ ಕುತೂಹಲ ಹೆಚ್ಚಿದೆ.
ಹುಣಸೂರು ಕ್ಷೇತ್ರದಲ್ಲಿ ಕುರುಬ, ನಾಯಕ, ಒಕ್ಕಲಿಗ ಹಾಗೂ ಹಿಂದುಳಿದ ಸಮುದಾಯಗಳ ಮತಗಳು ಹೆಚ್ಚು ಮತ್ತು ನಿರ್ಣಾಯಕ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್. 2008, 2013ರಲ್ಲಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಈ ಬಾರಿಯೂ ಟಿಕೆಟ್ ಖಚಿತ...

ಮಂಜುನಾಥ್ ಪಾಲಿಗೆ ಹ್ಯಾಟ್ರಿಕ್ ಗೆಲುವು?
ಮೈಸೂರು ಭಾಗದ ಪ್ರಭಾವಿ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ಕ್ಷೇತ್ರ ಪ್ರತಿನಿಧಿಸುತ್ತಾರೆ. ಹುಣಸೂರು ಕ್ಷೇತ್ರವನ್ನು ಅವರು ಬಿಟ್ಟ ಮೇಲೆ ಎಚ್.ಪಿ.ಮಂಜುನಾಥ್ 2 ಬಾರಿಗೆ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಸುಮಾರು 40ಸಾವಿರ ಮತಗಳ ಅಂತರದ ಗೆದಿದ್ದಾರೆ. ಈ ಭಾರಿಯೂ ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಮಂಜುನಾಥ್ ಗೆಲುವಿಗೆ ತಡೆ?
ಮಂಜುನಾಥ್ ಅವರಿಗೆ ಅಹಿಂದ ಮತಗಳ ಮೇಲಿನ ನಂಬಿಕೆ ಹೆಚ್ಚು. ಅದು ಚುನಾವಣೆ ಗೆಲ್ಲಿಸುತ್ತದೆ ಎಂದೂ ನಂಬಿದ್ದಾರೆ. ಆದರೆ, ಈ ಬಾರಿ ಗೆಲುವಿನ ಓಟಕ್ಕೆ ತಡೆ ಬೀಳುವ ಸಾಧ್ಯತೆಯೂ ಇದೆ. ಜಿಲ್ಲೆಯ ಪ್ರಭಾವಿ ಕುರುಬ ಜನಾಂಗದ ನಾಯಕ, ಮಾಜಿ ಸಚಿವ, ಸಂಸದ ಅಡಗೂರು ವಿಶ್ವನಾಥ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಅವರು ಈ ಬಾರಿಯ ಚುನಾವಣೆಗೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪ್ರಜ್ವಲ್ ರೇವಣ್ಣ ಹೆಸರಿತ್ತು
ಜಿ.ಟಿ.ದೇವೇಗೌಡ ಪುತ್ರ ಹರೀಶಗೌಡ, ಎಚ್.ಡಿ.ದೇವೇಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ ಹೆಸರು ಸಹ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿತ್ತು. ಹುಣಸೂರಿನಿಂದ ಸ್ಪರ್ಧಿಸಬೇಕು ಎಂದು ಪ್ರಜ್ವಲ್ ರೇವಣ್ಣ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಓಡಾಡುತ್ತಿದ್ದರು. ವಿಶ್ವನಾಥ್ ಪಕ್ಷ ಸೇರ್ಪಡೆ ಬಳಿಕ ಇಬ್ಬರು ಆಕಾಂಕ್ಷಿಗಳು ಸಮ್ಮನಾಗಿದ್ದಾರೆ. ಹರೀಶ್ ಗೌಡ ಅವರು ವಿಶ್ವನಾಥ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ?
ಹುಣಸೂರು ಕ್ಷೇತ್ರ ಇದುವರೆಗಿನ ಚುನಾವಣೆಗಳಲ್ಲಿ ಬಿಜೆಪಿಗೆ ಗಮನ ಕೊಡಬೇಕಾದಂತಹ ಫಲಿತಂಶವನ್ನು ನೀಡಿಲ್ಲ. ಈ ಬಾರಿ ಚಿತ್ರಣ ಬದಲಾಗಿದೆ. ಮೈಸೂರು - ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಹುಣಸೂರು ಹನುಮ ಜಯಂತಿ ವಿವಾದ
ಲೋಕಸಭೆ ಚುನಾವಣೆಗೆ ಮತ್ತೆ ಸ್ಪರ್ಧಿಸಿ ಗೆಲ್ಲುವುದು ಸುಲಭವಲ್ಲದ ಮಾತಾಗಿದೆ. ಆದ್ದರಿಂದ, ವಿಧಾನಸಭೆಯತ್ತ ಚಿತ್ತ ಹರಿಸಿದ್ದಾರೆ ಪ್ರತಾಪ್ ಸಿಂಹ. ತಮ್ಮ ಸಂಸದರ ಅನುದಾನದಲ್ಲಿ ಹೆಚ್ಚಿನದನ್ನು ಹುಣಸೂರು ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎಂಬ ಮಾತಿದೆ.
ಹುಣಸೂರಿನಲ್ಲಿ ಹನುಮ ಜಯಂತಿ ವಿವಾದ ನಡೆದ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿದ್ದು ಪ್ರತಾಪ್ ಸಿಂಹ ಅವರು. 'ಹಿಂದುಗಳಿಗೆ ಹಿಂದೂಹಬ್ಬಗಳಿಗೆ ಕಾಂಗ್ರೆಸ್ ಸರ್ಕಾರ ತೊಂದರೆಯೊಡುತ್ತಿದೆ' ಎಂದು ಹೇಳಿಕೆಯನ್ನು ಪ್ರತಾಪ್ ಸಿಂಹ ಕೊಟ್ಟಿದ್ದರು.

ಸೇಡು ತೀರಿಸಿಕೊಳ್ಳುವ ಅವಕಾಶ
ಹುಣಸೂರಿನಲ್ಲಿ ಪ್ರತಾಪ್ ಸಿಂಹ, ವಿಶ್ವನಾಥ್ ಮುಖಾಮುಖಿಯಾದರೆ. ಚುನಾವಣಾ ಕಣ ಕುತೂಹಲ ಕೆರಳಿಸಲಿದೆ. ಲೋಕಸಭೆಯಲ್ಲಿ ಚುನಾವಣೆಯಲ್ಲಿ ತಾವು ಸೋಲಿಸಿದ ವಿಶ್ವನಾಥ್ ವಿರುದ್ಧ ಮತ್ತೆ ಪ್ರತಾಪ್ ಸಿಂಹ ಸ್ಪರ್ಧೆಮಾಡಬೇಕಾಗುತ್ತದೆ. ವಿಶ್ವನಾಥ್ ಅವರಿಗೆ ಪ್ರತಾಪ್ ಸಿಂಹ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ದೊರೆಯಲಿದೆ.












Click it and Unblock the Notifications