ನಾನು ತಪ್ಪು ಮಾಡಿಲ್ಲ, ಸಂಧಾನಕ್ಕೆ ನಾನು ಒಪ್ಪಲ್ಲ: ಅರ್ಜುನ್ ಸರ್ಜಾ
ಬೆಂಗಳೂರು, ಅಕ್ಟೋಬರ್ 25: ನಾನು ತಪ್ಪು ಮಾಡಿಲ್ಲ ಹಾಗಾಗಿ ಸಂಧಾನಕ್ಕೆ ನಾನು ಒಪ್ಪುವುದಿಲ್ಲ. ಸಂಧಾನಕ್ಕೆ ಒಪ್ಪಿದರೆ ನಾನು ತಪ್ಪು ಮಾಡಿದಂತಾಗುತ್ತದೆ ಎಂದು ಹಿರಿಯ ನಟ ಅರ್ಜುನ್ ಸರ್ಜಾ ಹೇಳಿದರು.
ನಟಿ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ವಿವಾದ ಎದ್ದಿರುವ ಕಾರಣ ಇಂದು ಕನ್ನಡ ಫಿಲ್ಮ್ ಚೇಂಬರ್‌ನಲ್ಲಿ ಇಬ್ಬರಿಗೂ ಅಂಬರೀಶ್ ಹಾಗೂ ಇತರ ಸಿನಿ ಮುಖ್ಯಸ್ಥರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ಏರ್ಪಡಿಸಲಾಗಿತ್ತು.
ಅಂಬರೀಶ್ , ಚಿನ್ನೇಗೌಡ, ಮುನಿರತ್ನ ಮುಂತಾದವರು ಕರೆದಿದ್ದ ಕಾರಣಕ್ಕೆ ನಾನು ಬಂದಿದ್ದೇನೆ ಅಷ್ಟೆ ಹೊರತು ಸಂಧಾನದ ಉದ್ದೇಶ ನನಗಿಲ್ಲ. ನ್ಯಾಯಾಲಯದಲ್ಲೇ ನನಗೆ ನ್ಯಾಯ ದೊರೆಯಲಿದೆ ಎಂದು ಅರ್ಜುನ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಪ್ರಕರಣದಿಂದ ನನಗೆ ಮಾತ್ರವಲ್ಲ, ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ, ಹಿತೈಶಿಗಳಿಗೆ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರದಲ್ಲಿನ ನನ್ನ ಅಭಿಮಾನಿಗಳ ಮನಸ್ಸಿಗೆ ನೋವಾಗಿದೆ ಹಾಗಾಗಿ ನಾನು ಕಾನೂನು ಹೋರಾಟ ಮಾಡಿಯೇ ತೀರುತ್ತೇನೆ ಎಂದು ಸರ್ಜಾ ಹೇಳಿದರು.
ಈ ಪ್ರಕರಣ ಕನ್ನಡ ಸಿನಿರಂಗದಲ್ಲಿ ಉದಾಹರಣೆಯಾಗಿ ನಿಲ್ಲಬೇಕು. ಹೀಗೆ ಸುಖಾ ಸುಮ್ಮನೆ ಸುಳ್ಳು ಆರೋಪ ಮಾಡುವವರಿಗೆ ಸೋಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಹಾಗಾಗಿ ನಾನು ಕಾನೂನು ಹೋರಾಟ ಮಾಡಿಯೇ ಸಿದ್ಧ ಎಂದು ಅವರು ಪುನರ್‌ಉಚ್ಚರಿಸಿದರು.
ಮಿಟೂ ಅಭಿಯಾನ ಉತ್ತಮವಾದುದೆ ಆದರೆ ಅದರ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ. ಮಿಟೂ ಅಭಿಯಾನಕ್ಕೆ ಬೆಂಬಲ ಬೇಕು ಎಂದಿದ್ದರೆ ನಾನೂ ಕೊಡುತ್ತಿದ್ದೆ ಆದರೆ ನನ್ನನ್ನೇ ಸಂತ್ರಸ್ಥನನ್ನಾಗಿಸಲು ಯತ್ನಿಸಿರುವುದು ನನಗೆ ಆತಂಕ ಉಂಟುಮಾಡಿದೆ ಎಂದು ಅರ್ಜುನ್ ಸರ್ಜಾ ಹೇಳಿದರು.












Click it and Unblock the Notifications