ಅಫ್ಘಾನ್ ವಿದ್ಯಾರ್ಥಿಗಳ ವೀಸಾ ಪರಿಶೀಲನೆಗೆ ಸಚಿವರ ಸೂಚನೆ
ಬೆಂಗಳೂರು, ಆಗಸ್ಟ್ 17; ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾಗಿದೆ. ದೇಶದ ಪರಿಸ್ಥಿತಿ ಬಗ್ಗೆ ವಿಶ್ವವೇ ಆತಂಕಗೊಂಡಿದೆ. ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳು ತವರು ನೆಲದ ಪರಿಸ್ಥಿತಿ ಬಗ್ಗೆ ಚಿಂತೆ ಮಾಡುತ್ತಿದ್ದಾರೆ.
ಭಾರತದ ವಿವಿಧ ರಾಜ್ಯಗಳಲ್ಲಿ ಅಫ್ಘಾನಿಸ್ತಾನದ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ನಗರದಲ್ಲಿ ಅಫ್ಘಾನ್ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಹಲವಾರು ವಿದ್ಯಾರ್ಥಿಗಳ ವೀಸಾ ಅವಧಿ ಪೂರ್ಣಗೊಂಡಿದ್ದು ಈಗ ವೀಸಾ ನವೀಕರಣ ಹೇಗೆ? ಎಂಬ ಪ್ರಶ್ನೆ ಅಫ್ಘಾನ್ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಹಿಮಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯದಲ್ಲಿ ಈಗಾಗಲೇ ವೀಸಾ ಅವಧಿ ವಿಸ್ತರಣೆ ಮಾಡುವಂತೆ ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅವಧಿ ಪರಿಶೀಲನೆ ಮಾಡಲು ಸೂಚನೆ; "ರಾಜ್ಯದಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಶಿಕ್ಷಣ ಪಡೆಯುವ ಉದ್ದೇಶದಿಂದ ಹಲವಾರು ಅಫ್ಘಾನ್ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದ್ದಾರೆ. ವಿದ್ಯಾರ್ಥಿಗಳ ವೀಸಾ ಏನಾಗಿದೆ ಎಂದು ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದರು.
"ವೀಸಾ ಅವಧಿ ಪೂರ್ಣಗೊಂಡಿದ್ದರೆ ತವರು ದೇಶಕ್ಕೆ ವಾಪಸ್ ಆಗುವಂತೆ ವಿದ್ಯಾರ್ಥಿಗಳನ್ನು ದೇಶದಿಂದ ಹೊರಗೆ ತಳ್ಳಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮಾನವೀಯ ದೃಷ್ಟಿಯಿಂದ ಸಹ ನೋಡಬೇಕಾಗುತ್ತದೆ. ರಾಜ್ಯ ಸರ್ಕಾರ ಈ ಕುರಿತು ಯಾವ ಕ್ರಮ ಕೈಗೊಳ್ಳಬಹುದು ಎಂದು ಚರ್ಚಿಸಲಾಗುತ್ತದೆ" ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳು ಮಂಗಳವಾರ ಕುಲಪತಿ, ಕುಲಸಚಿವರನ್ನು ಭೇಟಿ ಮಾಡಿದ್ದರು. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ವಿವಿ ಧೈರ್ಯ ತುಂಬಿದೆ.
"ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ" ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಹೇಳಿದ್ದಾರೆ.
ನಾವು ಭಾರತದಲ್ಲಿ ಕ್ಷೇಮವಾಗಿದ್ದರೂ ನಮ್ಮ ಚಿತ್ತ ಮಾತ್ರ ಆಫ್ಘಾನಿಸ್ತಾನದ ಮೇಲಿದೆ. ನಾವು ಕುಟುಂಬಸ್ಥರೊಂದಿಗೆ ಮಾತನಾಡಿದ್ದೇವೆ. ಓದನ್ನು ಬಿಡಬೇಡಿ ನಮ್ಮ ಬಗ್ಗೆ ಹೆಚ್ಚು ಚಿಂತಿಸಬೇಡಿ. ಸದ್ಯಕ್ಕೆ ನಾವು ಕ್ಷೇಮವಾಗಿದ್ದೇವೆ ಎಂದು ಅವರು ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಮಂಗಳವಾರ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದರು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಗೆ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ, ಭಾರತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಮುಂದಿನ ದಿನಗಳಲ್ಲಿಯೂ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚಿಸಿದರು.
ಕಾಬೂಲ್‌ನಲ್ಲಿನ ಭಾರತದ ರಾಯಭಾರ ಕಚೇರಿಯ ಸಿಬ್ಬಂದಿ, ಇಂಡೋ ಟಿಬೆಟಿಯನ್ ಭದ್ರತಾ ಪಡೆಯ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿತ್ತು. ಕಾಬೂಲ್‌ನಿಂದ ಮಂಗಳವಾರ ಬೆಳಗ್ಗೆ ಸೇನಾ ವಿಮಾನ ಭಾರತಕ್ಕೆ ಆಗಮಿಸಿತ್ತು.
ಅಫ್ಘಾನಿಸ್ತಾನದ ಭಾರತದ ರಾಯಭಾರಿ ಸೇರಿದಂತೆ 120 ಜನರು ಭಾರತೀಯ ವಾಯುಪಡೆ ವಿಮಾನದ ಮೂಲಕ ಕಾಬೂಲ್‌ನಿಂದ ಹೊರಟು ಮಂಗಳವಾರ ಬೆಳಗ್ಗೆ ಗುಜರಾತ್‌ನ ಜಾಮ್ ನಗರಕ್ಕೆ ಆಗಮಿಸಿದ್ದಾರೆ.
ಕಾಬೂಲ್‌ನಲ್ಲಿ ಇನ್ನುಳಿದ ಭಾರತೀಯರನ್ನು ಬುಧವಾರ ಬೆಳಗ್ಗೆ ಕರೆತರಲಾಗುತ್ತದೆ. ಈ ಕಾರ್ಯಾಚರಣೆಗೆ ಭಾರತೀಯ ಸೇನೆಯ ಸಿ 17 ವಿಮಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.












Click it and Unblock the Notifications