ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ; ಯೋಜನೆಗಳು, ಸಾಲ ಸೌಲಭ್ಯದ ವಿವರ
ಬೆಂಗಳೂರು, ಸೆಪ್ಟೆಂಬರ್ 04; ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ಆಸಕ್ತರು ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಲು ಕೊನೆಯ ದಿನ 25/9/2023 ಆಗಿದೆ.
ಮತಿಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧರು, ಸಿಖ್ಖರು ಮತ್ತು ಫಾರ್ಸಿ ಸಮುದಾಯದವರಿಗೆ ಸಾಲವನ್ನು ನೀಡಲಾಗುತ್ತದೆ. ಸಾಲ ಪಡೆಯುವವರು ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು. ವಯೋಮಿತಿ 18 ರಿಂದ 55 ವರ್ಷಗಳು.

ನಿಗಮದ ವಿವಿಧ ಯೋಜನೆಗಳ ಅಡಿ ಸಾಲದ ಸೌಲಭ್ಯಗಳು ಲಭ್ಯವಿದೆ. ಒದಗಿಸಲು ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ವೆಬ್ ಸೈಟ್ kmdconline.karnataka.gov.in.
ಯೋಜನೆಯ ವಿವರಗಳು
* ಶ್ರಮಶಕ್ತಿ ಸಾಲ ಯೋಜನೆ: ಯೋಜನೆಯಡಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರಿಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಶೇ. 4ರ ಬಡ್ಡಿ ದರದಲ್ಲಿ ರೂ.50,000ದವರೆಗೆ ಸಾಲಸೌಲಭ್ಯವನ್ನು ಕಲ್ಪಸಲಾಗುತ್ತದೆ.
ಇದರಲ್ಲಿ ಶೇ, 80ರಷ್ಟು ಸಾಲವನ್ನು 36 ತಿಂಗಳನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ 50ರಷ್ಟು ಹಣವನ್ನು ಬ್ಯಾಕ್ ಆ್ಯಂಡ್ ಸಹಾಯಧನವನ್ನಾಗಿ ಪರಿಗಣಿಸಲಾಗುವುದು. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲರಾದಲ್ಲಿ ಶೇ 50ರಷ್ಟು ಬ್ಯಾಕ್ ಆ್ಯಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 4,50,000ಗಳನ್ನು ಮೀರಬಾರದು.
* ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ ಅಲ್ಪಸಂಖ್ಯಾತ ಸಮುದಾಯದ ವಿಧವೆಯರು, ವಿಚ್ಛೇದಿತರು, ಸವಿವಾಹಿತ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ವಿವಿಧ ಚಟುಚಟಕಗಳನ್ನು ಕೈಗೊಳ್ಳಲು 25000 ರೂ. ಸಾಲ ಮತ್ತು 25000 ರೂ. ಸಹಾಯಧನ ನೀಡಲಾಗುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 4,50,000ಗಳನ್ನು ಮೀರಬಾರದು.
* ವೃತ್ತಿ ಪ್ರೋತ್ಸಾಹ ಯೋಜನೆಯಡಿ ಹಣ್ಣು ಮತ್ತು ತರಕಾರಿ, ಮೀನು ಮಾಂಸ ಮಾರಾಟ, ಹೈನುಗಾರಿಕೆ, ಎಳನೀರು, ಕಬ್ಬಿನ ಹಾಲು, ತಂಪು ಪಾನೀಯ, ಬೇಕರಿ, ಲಾಂಡ್ರಿ, ಡ್ರೈಕ್ಲೀನಿಂಗ್, ಎಸಿ ರಿಪೇರಿ, ರೆಫ್ರಿಜರೇಟರ್, ಮೋಟಾರ್ ರಿವೈಂಡಿಂಗ್, ವಾಟರ್ ವಾಶ್ ಸರ್ವಿಸ್, ಪಂಕ್ಚರ್ ಶಾಪ್, ಗ್ಯಾಸ್ ವೆಲ್ಡಿಂಗ್, ಮೆಕ್ಯಾನಿಕ್ ಶಾಪ್, ಕಾರ್ಪೆಂಟರ್ ,ಎಕೆಕ್ಟ್ರಿಕಲ್ , ಎಲೆಕ್ಟ್ರಾನಿಕ್ಸ್ ರಿಪೇರಿ ಇತ್ಯಾದಿ ವೃತ್ತಿಗಳಿಗೆ ಒಟ್ಟು ಸಾಲದ ಮೊತ್ತ ರೂ. 1 ಲಕ್ಷದಲ್ಲಿ ಶೇ 50ರಷ್ಟುಸಾಲ ಶೇ 50ರಷ್ಟು ಸಹಾಯಧನ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 103,000 (ನಗರ ಪ್ರದೇಶ) ರೂ. 81,000 (ಗ್ರಾಮೀಣ ಪ್ರದೇಶ) ಮೀರಬಾರದು.
* ಗಂಗಾಕಲ್ಯಾಣ ಯೋಜನೆ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆ ಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ದೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಾಗಿರದ್ದು, 1 ಎಕರೆ 20 ಗುಂಟೆಯಿಂದ 5 ಎಕರೆ ಖುಷ್ಕಿ ಜಮೀನು ಹೊಂದಿ ವ್ಯವಸಾಯ ವೃತ್ತಿಯನ್ನು ಅವಲಂಬಿಸಿರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 96,000ಗಳನ್ನು ಮೀರಬಾರದು.
* ಸ್ವಾವಲಂಬಿ ಸಾರಥಿ ಯೋಜನೆ ಅನ್ವಯ (ಟ್ಯಾಕ್ಸಿ / ಗೂಡ್ಸ್ ವಾಹನ ಖರೀದಿ). ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ/ ಪಡೆದ ಆಟೋ ರಿಕ್ಷಾ/ ಟ್ಯಾಕ್ಸಿ/ ಸರಕು ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗಳಿಗೆ ವಾಹನದ ಮೌಲ್ಯದ ಶೇ 50ರಷ್ಟು ಅಥವಾ ಗರಿಷ್ಟ ರೂ. 3.00,000ರ ವರೆಗೆ ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡು ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು. ಅರ್ಜಿದಾರರು ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಚಾಲನಾ ಪರವಾನಿಗೆ ಹೊಂದಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 4,50,000ಗಳನ್ನು ಮೀರಬಾರದು.
* ಸಮುದಾಯ ಆಧಾರಿತ ತರಬೇತಿ ಯೋಜನೆ ಅನ್ವಯ ಸಮುದಾಯದ ನಿರುದ್ಯೋಗ ಹೊಂದಿರುವ ಯುವಕ/ ಯುವತಿಯರಿಗೆ ಸ್ವಂತ ಉದ್ಯೋಗ/ ಕಛೇರಿ, ಕಂಪನಿ, ಕಾರ್ಖನೆಗಳಲ್ಲಿ ಉದ್ಯೋಗ ದೊರಕಿಸುವ ಸಲುವಾಗಿ ಮಾನ್ಯತೆ ಪಡೆದ ಕೇಂದ್ರಗಳೊಂದಿಗೆ ಬ್ಯೂಟಿ ಪಾರ್ಲರ್ ತರಬೇತಿ, ಹೆವಿ ಅರ್ಥ್ ಮೂವರ್ ತರಬೇತಿ, ಶಾರ್ಟ್ ಹ್ಯಾಂಡ್ ಟ್ರೈನಿಂಗ್, ಭದ್ರತಾ ಸೇವೆಗಳ ತರಬೇತಿಯನ್ನು ನೀಡಲಾಗುತ್ತದೆ. ಅರ್ಜಿದಾರರ ವಯೋಮಿತಿ 18 ರಿಂದ 35 ವರ್ಷಗಳು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 1.03,000 (ನಗರ ಪ್ರದೇಶ) ರೂ. 81,000 (ಗ್ರಾಮೀಣ ಪ್ರದೇಶ) ಮೀರಬಾರದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ 08539-225008.












Click it and Unblock the Notifications