2025-26ನೇ ಸಾಲಿಗೆ ವಸತಿ ಶಾಲೆಗಳಿಗೆ ಪ್ರವೇಶ: ಅರ್ಜಿ ಸಲ್ಲಿಕೆ ಅರ್ಹತೆ, ವಿವರ
ಬೆಂಗಳೂರು, ಜನವರಿ 13: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಶಾಲೆಗಳಿಗೆ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಶಾಲೆಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆ ಮತ್ತು ದಾಖಲಾತಿಯ ಮಾರ್ಗಸೂಚಿಗಳನ್ನು ಜನರ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ.
ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಅಟಲ್ ಬಿಹಾರಿ ವಾಜಪೇಯಿ/ ಶ್ರೀಮತಿ ಇಂದಿರಾ ಗಾಂಧಿ/ ಡಾ. ಬಿ. ಆರ್. ಅಂಬೇಡ್ಕರ್/ ಮಾಸ್ತಿ ವೆಂಕಟೇಶ ಅಯ್ಯಂಗರ್/ ಸಂಗೊಳ್ಳಿ ರಾಯಣ್ಣ/ ಕವಿರನ್ನ/ ಗಾಂಧಿತತ್ವ/ ಶ್ರೀ ನಾರಾಯಣ ಗುರು/ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಗಳಿಗೆ 2025-26ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ವಿವರಗಳು: ಅರ್ಜಿ ಭರ್ತಿಮಾಡುವಾಗ ಅಭ್ಯರ್ಥಿಯ ವಿವರಗಳಾದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಸ್ವಂತ ಜಿಲ್ಲೆ ಮತ್ತು ತಾಲ್ಲೂಕು ಹಾಗೂ ಇನ್ನಿತರೆ ಮಾಹಿತಿಗಳನ್ನು Student Achievement Tracking System (SATS) ತಂತ್ರಾಂಶದಿಂದ SATS ಸಂಖ್ಯೆ ನಮೂದಿಸಿ ಪಡೆಯಲಾಗುವುದು.
ಅಭ್ಯರ್ಥಿಯ SATS ಸಂಖ್ಯೆಯನ್ನು ನಮೂದಿಸಿದಾಗ ಮೇಲಿನ ಎಲ್ಲಾ ವಿವರಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದು. ಯಾವುದಾದರೂ ಮಾಹಿತಿಯಲ್ಲಿ ದೋಷವಿದ್ದರೇ ಸಂಬಂಧಪಟ್ಟ, ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಮಾಹಿತಿಯನ್ನು ಸರಿಪಡಿಸಿಕೊಂಡು ಅನಂತರ ಅರ್ಜಿ ಸಲ್ಲಿಸುವುದು.
ಸೀಟು ಹಂಚಿಕೆಯು ಅಭ್ಯರ್ಥಿಯ ಲಿಂಗ, ಜಾತಿ ಮತ್ತು ಆದಾಯದ ಆಧಾರದ ಮೇಲೆ ಹಾಗೂ ಇತರ ಮಾಹಿತಿಯ ಮೇಲೆ ಅವಲಂಬಿತವಾಗಿರುವುದರಿಂದ SATS ನಲ್ಲಿರುವ ಅಭ್ಯರ್ಥಿಯ ಎಲ್ಲಾ ಮಾಹಿತಿಗಳನ್ನು ತಪ್ಪದೇ ಪರಿಶೀಲಿಸಿಕೊಳ್ಳತಕ್ಕದ್ದು. ಅಗತ್ಯವಿದ್ದಲ್ಲಿ ಸದರಿ ಶಾಲೆಯಲ್ಲಿ ಮಾಹಿತಿಯನ್ನು ಸರಿಪಡಿಸತಕ್ಕದ್ದು.
ಅಭ್ಯರ್ಥಿಯು ತನ್ನ ಮೀಸಲಾತಿಯಡಿಯಲ್ಲಿ ಸೀಟು ಪಡೆಯಲು ಅರ್ಹತೆಗೊಳ್ಳಲು, ತಾನು ಯಾವ ಮೀಸಲಾತಿ ಅಡಿಯಲ್ಲಿ ಅರ್ಹನಿರುವನೋ ಅಂದರೆ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಪವರ್ಗ-1 ಅಥವಾ ಇತರೆ ಹಿಂದುಳಿದ ವರ್ಗಕ್ಕೆ ಸಂಬಂಧಿಸಿದ RD ಸಂಖ್ಯೆಯನ್ನೊಳಗೊಂಡ ನಿಗದಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಯನ್ನು ಪಡೆದು ಸಲ್ಲಿಸತಕ್ಕದ್ದು.
ಅಭ್ಯರ್ಥಿಯು ವಿಶೇಷ ವರ್ಗಕ್ಕೆ ಸೇರಿದ ಅಭ್ಯರ್ಥಿ ಆಗಿದ್ದಲ್ಲಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರಗಳನ್ನು ಪಡೆದಿರತಕ್ಕದ್ದು. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ತನ್ನ ಪೋಷಕರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು.
ರಾಜ್ಯದ ಎಲ್ಲಾ ತಾಲ್ಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.75, ಅದೇ ಜಿಲ್ಲೆಯ ಇತರೆ ತಾಲ್ಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ.25 ರಷ್ಟು ಸ್ಥಾನಗಳನ್ನು ಹಂಚಿಕೆ ಮಾಡಲಾಗುವುದು. ಅಭ್ಯರ್ಥಿಯು ತನ್ನ ಸ್ವಂತ ತಾಲ್ಲೂಕಿನ ಎಲ್ಲಾ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಮೀಸಲಾತಿಗನುಗುಣವಾಗಿ ಅರ್ಹನಾಗಿರುತ್ತಾನೆ. ಸೀಟು ಹಂಚಿಕೆಯು ಜಿಲ್ಲಾ ಹಂತದಲ್ಲಿ ಆನ್‌ಲೈನ್ ಮುಖಾಂತರ ನಡೆಸುವುದರಿಂದ ವಸತಿ ಶಾಲೆಯಿಂದ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯು ತನ್ನ ಸ್ವಂತ ತಾಲ್ಲೂಕಿನ ಯಾವ ವಸತಿ ಶಾಲೆಗಳಲ್ಲಿ ಪ್ರವೇಶ ಬಯಸುತ್ತಾರೋ ಅಂತಹ ವಸತಿ ಶಾಲೆಗಳಿಗೆ ಆದ್ಯತೆ ಅನುಸಾರ ತನ್ನ ಇಚ್ಛೇ/ ಆಯ್ಕೆಗಳನ್ನು ಕಡ್ಡಾಯವಾಗಿ ನೀಡತಕ್ಕದ್ದು.
ಅಭ್ಯರ್ಥಿಯು ವಸತಿ ಶಾಲೆಯ ಪ್ರವೇಶಕ್ಕಾಗಿ ಶಾಲೆಯ ಆದ್ಯತೆಗಳನ್ನು ನೀಡುವ ಸಲುವಾಗಿ ಅರ್ಜಿ ಸಲ್ಲಿಸುವ ಶಾಲೆಯಿಂದ 'ಶಾಲಾ ಆದ್ಯತೆ ವಿವರವನ್ನು ಸಲ್ಲಿಸುವ ಪ್ರತಿ'ಯನ್ನು ಪಡೆದು ಆದ್ಯತೆಗಳನ್ನು ಬರೆದು ಅಭ್ಯರ್ಥಿಯ ಹಾಗು ಪೋಷಕರ ಸಹಿಯೊಂದಿಗೆ ವಸತಿ ಶಾಲೆಯ ಮುಖ್ಯಸ್ಥರಿಗೆ ನೀಡಬೇಕು.
ಅರ್ಜಿಯನ್ನು ವಸತಿ ಶಾಲೆಯಲ್ಲಿ ಸಲ್ಲಿಸಿದ ನಂತರ ಅದೇ ಶಾಲೆಯಿಂದ ಸ್ವೀಕೃತಿಯನ್ನು ಅಥವಾ ಅರ್ಜಿಯ ಪ್ರತಿಯನ್ನು ಪಡೆದು ಆಯ್ಕೆ ಪ್ರಕ್ರಿಯೆಯ ಎಲ್ಲಾ ಹಂತದವರೆವಿಗೂ ತನ್ನ ಬಳಿ ಇರಿಸಿಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ/ ಸಂಘದ ಅಡಿ ಕಾರ್ಯನಿರ್ವಹಿಸುತ್ತಿರುವ ಹತ್ತಿರದ ವಸತಿ ಶಾಲೆಗಳನ್ನು/ ಕಾಲೇಜುಗಳನ್ನು ಸಂಪರ್ಕಿಸುವುದು.
ಪವೇಶ ಪರೀಕ್ಷೆ ವಿಧಾನ: 2025-26 ಶೈಕ್ಷಣಿಕ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿರ್ವಹಿಸಲಿದ್ದು, ಪರೀಕ್ಷೆಯ ವೇಳಾಪಟ್ಟಿ ದಿನಾಂಕ 15/02/2025ರ ಶನಿವಾರ ಮಧ್ಯಾಹ್ನ 2.30 ರಿಂದ 4.30., ಒಟ್ಟು ಅಂಕಗಳು 100.
ಪರೀಕ್ಷೆಯನ್ನು ರಾಜ್ಯ ಮಟ್ಟದಲ್ಲಿ ಏಕಕಾಲಕ್ಕೆ ನಡೆಸಲಾಗುತ್ತದೆ. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ನಮೂದಿಸಿದ ತಾಲ್ಲೂಕಿನ/ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ. ಸಾಧ್ಯವಾದಷ್ಟು ತಾಲ್ಲೂಕುವಾರು ಪರೀಕ್ಷಾ ಕೇಂದ್ರಗಳನ್ನು ತಾಲ್ಲೂಕುವಾರು ಸ್ವೀಕರಿಸಲಾದ ಅರ್ಜಿಗಳಿಗೆ ಅನುಗುಣವಾಗಿ ಗುರುತಿಸಲಾಗುವುದು.
ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರವನ್ನು ತಾವು ಅರ್ಜಿ ಸಲ್ಲಿಸಿದ ವಸತಿ ಶಾಲೆಯ ಮುಖಾಂತರ ಪಡೆದು, ಪ್ರವೇಶ ಪತ್ರದಲ್ಲಿ ನೀಡಿರುವ ಸೂಚನೆಗಳನ್ನು ಜಾಗರೂಕತೆಯಿಂದ ಓದಿಕೊಂಡು ನಿಗದಿತ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಸಂಬಂಧಿಸಿದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.












Click it and Unblock the Notifications