'ಕಾರು ಭಾಗ್ಯ' ಸಿದ್ದರಾಮಯ್ಯ ಸರ್ಕಾರದ ಮತ್ತೊಂದು ಸಾಧನೆ!
ಬೆಂಗಳೂರು, ಅಕ್ಟೋಬರ್ 21: ರಾಜ್ಯದಲ್ಲಿ ಈ ಬಾರೀ ವಾಡಿಕೆಯಂತೆ ಮಳೆಯಾಗದೇ ಭೀಕರ ಬರಗಾಲ ಸೃಷ್ಠಿಯಾಗಿದೆ. ಬರಗಾಲದಲ್ಲೂ ರಾಜ್ಯ ಸರ್ಕಾರ ಸಂಪುಟದ 33 ಸಚಿವರಿಗಾಗಿ ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಇನೋವಾ ಹೈಬ್ರೀಡ್ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದ್ದು, ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಈ ಕುರಿತು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಕಿಡಿಕಾರಿದ್ದು, ರೈತರಿಗೆ ನಿರಂತರ ವಿದ್ಯುತ್ ನೀಡುವ ಬದಲಿಗೆ 'ಆರ್ಥಿಕ ಸುಧಾರಣೆಗಳ ಹರಿಕಾರರಾದ' ಸಿದ್ದರಾಮಯ್ಯ ನವರು ತೀವ್ರ ಬರವನ್ನೂ ಲೆಕ್ಕಿಸದೆ 34 ಸಚಿವರಿಗೆ ಹೊಸ 'ಕಾರು ಭಾಗ್ಯ' ನೀಡಿರುವುದು ಈ ಸರ್ಕಾರದ ಮತ್ತೊಂದು ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ರಾಜ್ಯದಲ್ಲಿ ಉತ್ತಮ ಮಳೆಯಾಗದೇ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಮಳೆ,ಬೆಳೆಯಿಲ್ಲದೇ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಲ್ಲದೇ ಅಭಿವೃದ್ದಿ ಕೆಲಸಗಳೆಲ್ಲಾ ಮಂದಗತಿಯಲ್ಲಿ ಸಾಕುತ್ತಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ದಸರಾ ಹಬ್ಬಕ್ಕೆ ಸಂಪುಟದ ಸಚಿವರಿಗೆ ಭರ್ಜರಿ ಹೊಸ ಇನೋವಾ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದು, 33 ಸಚಿವರಿಗಾಗಿ ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಇನೋವಾ ಹೈಬ್ರೀಡ್ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದೆ.

ಅಗಸ್ಟ್ ತಿಂಗಳ 17 ರಂದೇ 33 ಕಾರು ಇನ್ನೋವಾ ಕಾರು ಖರೀದಿಗಾಗಿ ಸಿದ್ದರಾಮಯ್ಯ ಸರ್ಕಾರ ತನ್ನ ಖಜಾನೆಯಿಂದ ಹಣ ಬಿಡುಗಡೆ ಮಾಡಿತ್ತು. ಇದರಿಂದಾಗಿ ಬರಗಾಲ ಇದ್ದರೂ, ಸಚಿವರ ಕಾರುಬಾರಿಗೇನು ಕೊರತೆಯಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಸುತ್ತಿದ್ದಾರೆ.
ಬರಗಾಲದಲ್ಲಿ ಹೊಸ ಕಾರು ಬೇಕಾ?: ವಿಜಯೇಂದ್ರ
ಮಂತ್ರಿಗಳಿಗೆ ಹೊಸ ಕಾರ್ ಖರೀದಿ ವಿಚಾರವಾಗಿ ಶಾಸಕ ಬಿ.ಎಸ್. ವಿಜಯೇಂದ್ರ ಮಾತನಾಡಿ, ಬರಗಾಲದಿಂದ ರಾಜ್ಯದ ಜನರು ನರಳಾಟ ನಡೆಸಿದ್ದಾರೆ. ಇಂತಹ ವೇಳೆಯಲ್ಲಿ ಮಂತ್ರಿಗಳಿಗೆ ಹೊಸ ಕಾರ್ ಖರೀದಿ ಬೇಕಾ? ಎಂದು ಪ್ರಶ್ನಿಸಿದರು.
ಇನ್ನೂ ಮಾಜಿ ಶಾಸಕಿ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಶಕ್ತಿ ಮೇಲೆ ನಿಂತಿರುವ ಪಾರ್ಟಿ. ಯಾರೋ ಒಬ್ಬರು , ಇಬ್ಬರು ಮಾಜಿ ಶಾಸಕರು ಹೋದ್ರೆ ಪಕ್ಷಕ್ಕೆ ಹಿನ್ನಡೆ ಆಗಲ್ಲ, ನಿಜ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಗಿದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿ, ಒಂದಾಗಿ ಹೆಚ್ಚು ಲೋಕಸಭಾ ಕ್ಷೇತ್ರಗಳು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದ ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ವೈಮನಸ್ಸು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ಬಂದು ಐದು ತಿಂಗಳು ಆಗಿಲ್ಲ, ಆಗಲೇ ಸಿಎಂ ಮತ್ತು ಡಿಸಿಎಂ ಮತ್ತು ಮಂತ್ರಿಗಳ ನಡುವೆ ವೈಮನಸ್ಸು ಶುರುವಾಗಿದೆ. ಸಚಿವರಲ್ಲಿಯೂ ಸಹ ಅಸಮಾಧಾನ, ಶಾಸಕರಲ್ಲಿಯೂ ಸಹ ಅಸಮಾಧಾನ, ಸರ್ಕಾರವೂ ಶಾಸಕರಿಗೆ ಒಂದು ರೂ.ಅನುದಾನ ಕೊಡಲು ಸಾಧ್ಯವಾಗಿಲ್ಲ. ಅಲ್ಲದಕ್ಕೂ ಗ್ಯಾರಂಟಿ ಕಡೆ ತೋರಿಸುತ್ತಿದ್ದಾರೆ.
ಇವತ್ತು ವಿದ್ಯುತ್ ಸಮಸ್ಯೆಯಿಂದ ರೈತರು ಪರದಾಟ ನಡೆಸಿದ್ದಾರೆ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ, ವಿದ್ಯುತ್ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ರಾಜ್ಯ ಸರ್ಕಾರ ಎಚ್ಚತ್ತುಕೊಂಡ ಹೊರರಾಜ್ಯದಿಂದ ವಿದ್ಯುತ್ ಖರೀದಿ ಮಾಡಿ, ರೈತರ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಈ ಸರ್ಕಾರಕ್ಕೆ ಗೊತ್ತು ಆಗುತ್ತಿಲ್ಲ. ಎಲ್ಲಿಯೂ ಒಂದು ಕಡೆ ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರವಾಗಿದೆ ಎಂದು ಕಿಡಿಕಾರಿದರು.












Click it and Unblock the Notifications