Anna Bhagya: ಈ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಇಂದು ನಗದು ವರ್ಗಾವಣೆ: ನಿಮ್ಮ ಜಿಲ್ಲೆಗೆ ಯಾವಾಗ ತಿಳಿಯಿರಿ
ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಂತರ ಅಕ್ಕಿ ಸಿಗದ ಕಾರಣ ಹಣವನ್ನೇ ಕೊಡಲು ತೀರ್ಮಾನಿಸಿದ್ದು, 5 ಕೆ.ಜಿ. ಅಕ್ಕಿಯ ಜೊತೆ ಉಳಿದ 5 ಕೆಜಿ ಅಕ್ಕಿಯ ಬದಲು ಹಣ ಕೊಡಲಾಗುತ್ತದೆ.
34 ರೂಪಾಯಿಗಳಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟುಂಬದ ಸದಸ್ಯರಿಗೂ 170 ರೂಪಾಯಿ ಹಣ ಸಿಗಲಿದೆ. ನೇರ ನಗದು ವರ್ಗಾವಣೆ ಮೂಲಕ ಕಾರ್ಡ್‌ದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ.

ಜುಲೈ 10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ ವರ್ಗಾವಣೆ ಮಾಡುವುದಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬಾಗಲಕೋಟೆ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು. 20 ಲಕ್ಷ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 115 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗಿತ್ತು.
ಇಂದು ಈ ಜಿಲ್ಲೆಗಳ ಕಾರ್ಡ್‌ದಾರರ ಖಾತೆಗೆ ಹಣ
ಜುಲೈ 14, ಶುಕ್ರವಾರದಂದು ಎರಡನೇ ಹಂತದಲ್ಲಿ ಹಲವು ಜಿಲ್ಲೆಗಳ ಕಾರ್ಡ್‌ದಾರರಿಗೆ ಹಣ ವರ್ಗಾವಣೆಯಾಗಲಿದೆ. ಯಾದಗಿರಿ, ದಾವಣಗೆರೆ, ಕೊಪ್ಪಳ, ಚಿತ್ರದುರ್ಗ, ಧಾರವಾಡ ಜಿಲ್ಲೆಗಳ 13 ಲಕ್ಷ ಕಾರ್ಡ್‌ಹೊಂದಿರುವ ಕುಟುಂಬಗಳ 49 ಲಕ್ಷ ಫಲಾನುಭವಿಗಳ ಖಾತೆಗೆ 80 ಕೋಟಿ ರೂಪಾಯಿ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ.
ಮುಂದಿನ ನಾಲ್ಕು ದಿನಗಳಲ್ಲಿ ಚಿಕ್ಕಮಗಳೂ, ದಕ್ಷಿಣ ಕನ್ನಡ, ಚಾಮರಾಜನಗರ, ರಾಮನಗರ, ಹಾಸನ, ಗದಗ, ವಿಜಯಪುರ, ಬಳ್ಳಾರಿ, ಬೀದರ್, ಕಲಬುರ್ಗಿ, ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳ ಪಡಿತರ ಚೀಟಿದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಕೊಡಗು, ಉತ್ತರ ಕನ್ನಡ, ಹಾವೇರಿ, ಉಡುಪಿ ಹಾಗೂ ವಿಜಯನಗರ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಹಣ ಜಮೆ ಮಾಡಲು ದತ್ತಾಂಶವನ್ನು ಎನ್‌ಐಸಿಗೆ ಕಳುಹಿಸಲಾಗಿದೆ.
ಬ್ಯಾಂಕ್ ಖಾತೆ ಇಲ್ಲದ ಪಡಿತರ ಚೀಟಿದಾರರಿಗೂ ಹಣ ನೀಡಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ. ಆದಷ್ಟು ಬೇಗನೆ ರಾಷ್ಟ್ರೀಕೃತ ಖಾತೆಗಳಲ್ಲಿ ಖಾತೆ ತೆರೆಯುವಂತೆ ಪಡಿತರ ಚೀಟಿದಾರರಿಗೆ ಮನವಿ ಮಾಡಲಾಗಿದೆ. ಸುಮಾರು 22 ಲಕ್ಷ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಬ್ಯಾಂಕ್ ಖಾತೆ ಹೊಂದಿಲ್ಲ ಎಂದು ಹೇಳಲಾಗಿದ್ದು, ಇವರಿಗೆ ವಿಶೇಷ ಕ್ರಮ ವಹಿಸಿ ಹಣ ತಲುಪಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ದೊರೆಯುವ ತನಕ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುವುದಾಗಿ ಸರ್ಕಾರ ಸ್ಪಷ್ಟಪಡಿಸಿದ್ದು, ಅಕ್ಕಿ ಪೂರೈಕೆಯಾದ ನಂತರ ಹಣದ ಬದಲಾಗಿ ಅಕ್ಕಿಯನ್ನು ಕೊಡುವುದಾಗಿ ಹೇಳಿದೆ.












Click it and Unblock the Notifications