ರಾಮನಗರ ಜೆಡಿಎಸ್ ಅಭ್ಯರ್ಥಿ ಹೆಸರನ್ನು ಘೋಷಿಸಿದ ಅನಿತಾ ಕುಮಾರಸ್ವಾಮಿ: ಅಭ್ಯರ್ಥಿ ಯಾರು ಗೊತ್ತೆ?
ಬೆಂಗಳೂರು, ಡಿಸೆಂಬರ್ 17: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪೈಪೋಟಿ ಇದ್ದರೂ, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪ್ರಮುಖ ಪಾತ್ರವಹಿಸಲಿದೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತು.
ಅದೇ ರೀತಿಯಾಗಿ ಕುಮಾರಸ್ವಾಮಿ ಕುಟುಂಬ ಸದಸ್ಯರು ಯಾವ ಕ್ಷೇತ್ರಗಳಿಗೆ ಸ್ಪರ್ಧಿಸುತ್ತಾರೆ ಎನ್ನುವುದು ಜನರ ಕುತೂಹಲಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಅವರ ಜೆಡಿಎಸ್‌ನ ಭದ್ರಕೋಟೆಯಾಗಿರುವ ರಾಮನಗರವು ರಾಜ್ಯದ ಪ್ರತಿಷ್ಠಿತ ಚುನಾವಣಾ ಕಣದಲ್ಲೊಂದು. ಈಗ ರಾಮನಗರಕ್ಕೆ ಕುಮಾರಸ್ವಾಮಿ ಪತ್ನಿ ಅನಿತಾ ಅವರು ಶಾಸಕರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಮನಗರದ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಪ್ರಶ್ನಿಗೆ ಈಗ ಉತ್ತರ ಸಿಕ್ಕಿದೆ.
ಮಗ ನಿಖಿಲ್ ಕುಮಾರಸ್ವಾಮಿಯೇ ರಾಮನಗರದ ಅಭ್ಯರ್ಥಿ
ಪುತ್ರ ನಿಖಿಲ್ ಕುಮಾರಸ್ವಾಮಿಯೇ ರಾಮನಗರದ ಜೆಡಿಎಸ್ ಅಭ್ಯರ್ಥಿ ಎಂದು ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ.
ನಮ್ಮ ಮಾವ ದೇವೇಗೌಡರಿಗೆ, ನನ್ನ ಪತಿ ಕುಮಾರಸ್ವಾಮಿ ಅವರಿಗೆ ಹಾಗೂ ನನಗೆ ಕೊಟ್ಟ ಬೆಂಬಲವನ್ನು ನನ್ನ ಮಗನಿಗೂ ಕೊಡಬೇಕು ಎಂದು ರಾಮನಗರ ಜನತೆಯಲ್ಲಿ ಅನಿತಾ ಮನವಿ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹಾಗೂ ರಾಮನಗರದ ಟಿಕೆಟ್ ವಿಚಾರವಾಗಿ ಕೆಲವರು ಅಪಪ್ರಚಾರ ಮಾಡುತ್ತಿದ್ದರು. ಅದೆಲ್ಲಕ್ಕೆ ತೆರೆ ಎಳೆಯಬೇಕು ಎಂದು ಇವತ್ತು ನಿರ್ಧಾರ ಮಾಡಿದ್ದೆ ಎಂದು ಅನಿತಾ ತಿಳಿಸಿದ್ದಾರೆ.
ಚಿತ್ರ ನಟರೂ ಆಗಿರುವ ನಿಖಿಲ್ ಅವರು ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪಕ್ಷೇತರ ಅಭ್ಯರ್ಥಿ ಆಗಿದ್ದ ಸುಮಲತಾ ಅಂಬರೀಶ್ ಮುಂದೆ ಹೀನಾಯವಾಗಿ ಸೋಲು ಅನುಭವಿಸಿದ್ದರು.
ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು?

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಡಿಕೆ, 'ಅನಿತಾ ಕುಮಾರಸ್ವಾಮಿ ಅವರು ಭಾವುಕರಾಗಿ ನಿಖಿಲ್ ಹೆಸರು ಘೋಷಣೆ ಮಾಡಿದ್ದಾರೆ' ಎಂದು ಹೇಳಿದ್ದಾರೆ.
'ಕಾರ್ಯಕರ್ತರು, ಶಾಸಕರ ಒತ್ತಡಕ್ಕೆ ಮಣಿದು ನಿಖಿಲ್ ಅವರ ಮಂಡ್ಯದಲ್ಲಿ ನಿಂತರು. ಅಲ್ಲಿ ಕುತಂತ್ರ ರಾಜಕಾರಣ ನಡೆಯಿತು. ಮಂಡ್ಯ ಜನತೆ ಅವರನ್ನ ಸೋಲಿಸಿಲ್ಲ. ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಹಾಗೂ ಕೆಲ ಮಾಧ್ಯಮಗಳು ಸೋಲಿಸಿದ್ದಾರೆ' ಎಂದು ತಿಳಿಸಿದ್ದಾರೆ.
'ರಾಮನಗರದಲ್ಲಿ ನಿಖಿಲ್ ಅಭ್ಯರ್ಥಿ ಮಾಡಬೇಕೆಂದು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ನಾನು ನಿಖಿಲ್ ಬಗ್ಗೆ ಚಿಂತೆ ಮಾಡ್ತಿಲ್ಲ, ರಾಜ್ಯದ ಜನತೆ ಬಗ್ಗೆ ಚಿಂತೆ ಮಾಡ್ತಿದ್ದೀನಿ' ಎಂದು ಹೇಳಿದ್ದಾರೆ.
'ಈ ಮಾತನ್ನು ಮೊನ್ನೆ ನಾನೇ ಹೇಳಿದ್ದೆ. ನನಗೆ ರಾಜಕೀಯ ಜನ್ಮ ಕೊಟ್ಟವರು ತೀರ್ಮಾನ ಮಾಡ್ತಾರೆ ಎಂದಿದ್ದೆ' ಎಂದು ತಿಳಿಸಿದ್ದಾರೆ.
'ಇಲ್ಲಿಯೂ ಸಹ ಕುತಂತ್ರ ರಾಜಕಾರಣ ನಡೆಯಬಹುದು. ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವನ ಮುಂದಿನ ರಾಜಕೀಯ ಬದುಕು ನಿಮಗೆ ಬಿಟ್ಟಿದ್ದೇನೆ. ಇಪ್ಪತ್ತು ವರ್ಷದಿಂದ ಯಾವುದೇ ಕೆಡಕುಬಾರದಂತೆ ನೋಡಿದ್ದೀರಿ. ಮುಂದಿನ ಬಾರಿಯೂ ಸಹ ಯಾವುದೇ ರಾಜಕೀಯ ಚಕ್ರವ್ಯೂಹ ಭೇದಿಸಲು ಶಕ್ತಿ ಇರಲಿ' ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.
'ಮಂಡ್ಯದಲ್ಲಿ ನಡೆದ ಎಂಪಿ ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿದ್ರು. ಈ ಕ್ಷೇತ್ರದಲ್ಲಿ ನಮ್ಮನ್ನ ಮಣಿಸಲು ಯಾರಿದಂಲೂ ಸಾಧ್ಯವಿಲ್ಲ. ಅನಿತಾ ಕುಮಾರಸ್ವಾಮಿ ಅವರು ನನ್ನ ಗಮನಕ್ಕೆ ಬಾರದೇ ಘೋಷಣೆ ಮಾಡಿದ್ದಾರೆ' ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
ಟಿಕೆಟ್ ಘೋಷಣೆ ಬಳಿಕ ಮಾತನಾಡಿದ ನಿಖಿಲ್
ಟಿಕೆಟ್ ಘೋಷಣೆ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 'ಅನಿತಾ ಕುಮಾರಸ್ವಾಮಿ ಇದ್ದಕ್ಕಿದ್ದಂಗೆ ಘೋಷಣೆ ಮಾಡಿದ್ದಾರೆ. ಅವರು ಘೋಷಣೆ ಮಾಡ್ತಾರೆ ಅಂತ ನನ್ನ ಮನಸಲ್ಲೂ ಅಂದು ಕೊಂಡಿರಲಿಲ್ಲ' ಎಂದು ಹೇಳಿದ್ದಾರೆ.

ಯುವ ಘಟಕದ ರಾಜ್ಯಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಹಿಂದೆ ದೇವೇಗೌಡರ ಪರವಾಗಿ ನಿಂತ್ರಿ, ನಂತರ ಎರಡು ಬಾರಿ ಕುಮಾರಸ್ವಾಮಿ ಪರ ನಿಂತು ಸಿಎಂ ಮಾಡಿದ್ರಿ. ಕುಮಾರಣ್ಣನ್ನ ರಾಜಕೀಯವಾಗಿ ಬೆಳೆಸಿದ್ದೀರಿ ಎಂದು ಜನರಿಗೆ ತಿಳಿಸಿದ್ದಾರೆ.
'ಅನಿತಾ ಕುಮಾರಸ್ವಾಮಿ ಅವರು ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇವತ್ತಿಗೂ ನನ್ನ ಅಭಿಪ್ರಾಯದಲ್ಲಿ ರಾಮನಗರ ಸೂಕ್ತ ಅಭ್ಯರ್ಥಿ ಅಂದ್ರೆ ಅದು ಕುಮಾರಣ್ಣ. ನಮ್ಮ ತಂದೆ ಹೇಗೆ ಜನತೆ ಪರವಾಗಿ ಧ್ವನಿ ಎತ್ತಿ ಕೆಲಸ ಮಾಡಿದ್ದಾರೆ. ಹಾಗೇಯೇ ನಾನು ಮಾಡುತ್ತೇನೆ. ನಾನು ಅಭ್ಯರ್ಥಿ ಆಗಬೇಕು ಎಂಬ ಕೂಗು ಗಮನದಲ್ಲಿಟ್ಟುಕೊಂಡು ಘೋಷಣೆ ಮಾಡಿದ್ದಾರೆ' ಎಂದೂ ಅವರು ತಿಳಿಸಿದ್ದಾರೆ.
ಪಕ್ಷದ ನಿರ್ಧಾರವೇ ಅಂತಿಮ ಎಂದಿದ್ದ ನಿಖಿಲ್
ನಾನು ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧನಿದ್ದೇನೆ. ವೈಯಕ್ತಿಕವಾಗಿ ನಾನು ಶಾಸಕ ಸ್ಥಾನದ ಆಕ್ಷಾಂಕ್ಷಿಯಲ್ಲ. ಕುಮಾರಸ್ವಾಮಿ ಅವರ ಕೈಯನ್ನು ಬಲಪಡಿಸುವುದೇ ನನ್ನ ಉದ್ದೇಶ ಎಂದು ನಿಖಿಲ್ ಹೇಳಿದ್ದಾರೆ. ಆದರೆ, ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯಲ್ಲಿ ನಿಖಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಜೊತೆಯಾಗಿ ಓಡುತ್ತಿದ್ದಾರೆ. ಆ ಕಾರಣಕ್ಕಾಗಿ, ನಿಖಿಲ್ ಅವರಿಗೆ ಈ ಬಾರಿ ಜೆಡಿಎಸ್‌ನಿಂದ ಟಿಕೆಟ್ ದೊರೆಯಬಹುದು ಎಂದು ಅಂದಾಜಿಸಲಾಗಿತ್ತು.












Click it and Unblock the Notifications