ರೈತರಿಂದ ಗೋ ಮೂತ್ರ, ಸಗಣಿ ಖರೀದಿಸಲಿದೆ ಸರ್ಕಾರ
ಬೆಂಗಳೂರು, ಜುಲೈ.21: ಛತ್ತೀಸ್‌ಗಢ ಸರ್ಕಾರದ ಮಾದರಿಯಂತೆ ಕರ್ನಾಟಕ ಸರ್ಕಾರದ ಪಶುಸಂಗೋಪನಾ ಇಲಾಖೆಯು ಹೆಚ್ಚುವರಿ ಆದಾಯವನ್ನು ಪಡೆಯಲು ರೈತರಿಂದ ಗೋಮೂತ್ರ ಮತ್ತು ಸಗಣಿಯನ್ನು ಖರೀದಿಸಲು ಚಿಂತನೆ ನಡೆಸಿದೆ.
ಆರಂಭದಲ್ಲಿ ಇಲಾಖೆಯು ಉದ್ದೇಶಿತ ಗೋಶಾಲೆಗಳಿಂದ ಗೋಮೂತ್ರ ಮತ್ತು ಸಗಣಿ ಪಡೆಯುತ್ತದೆ. ಗೋಮೂತ್ರ ಮತ್ತು ಸಗಣಿ ಬಳಸಿ ವಿವಿಧ ಉತ್ಪನ್ನಗಳನ್ನು ತಯಾರಿಸಲು ಅದು ಯೋಜಿಸಿದೆ. ಅಲ್ಲದೇ ಈ ಮೂಲಕ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.
ಪ್ರಸ್ತುತ ಕೆಲವು ಖಾಸಗಿ ಗೋಶಾಲೆಗಳಿಗೆ ಅನುದಾನ ನೀಡುತ್ತಿರುವ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸುಮಾರು 100 ಗೋಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆ. ಅವುಗಳಲ್ಲಿ ಕೆಲವು ಈಗಾಗಲೇ ಪ್ರಾರಂಭವಾಗಿವೆ. ಇಲಾಖೆಯು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳಿಗಾಗಿ ಭೂಮಿಯನ್ನು ಗುರುತಿಸಿದ್ದು, ದನಗಳನನ್ನು ಮೇಯಿಸಲು ಗೋಮಾಳಗಳನ್ನು ಸಹ ಹೊಂದಿದೆ. ಅದನ್ನು ಮುಂದಕ್ಕೆ ಕೊಂಡೊಯ್ದ ಸರ್ಕಾರ ಈಗ ರೈತರಿಗೆ ಲಾಭದಾಯಕವಾಗಿಸಲು ಮುಂದಾಗಿದೆ.
ಛತ್ತೀಸ್‌ಗಢ ಸರ್ಕಾರ ರೈತರಿಂದ ಗೋಮೂತ್ರವನ್ನು ಲೀಟರ್‌ಗೆ 4 ರೂ.ಗೆ ಮತ್ತು ಹಸುವಿನ ಸಗಣಿಯನ್ನು ಕೆಜಿಗೆ 2 ರೂ. ದರದಲ್ಲಿ ಖರೀದಿ ಮಾಡುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಖರೀದಿ ನಡೆಯುತ್ತಿದೆ. ಈ ಬಗ್ಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾತನಾಡಿ, "ಪ್ರಸ್ತುತ ಗೋಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ರಾಷ್ಟ್ರೋತ್ಥಾನ ಪರಿಷತ್ತು ಸೇರಿದಂತೆ ಹಲವು ಖಾಸಗಿ ಮಠಗಳು ಮತ್ತು ಸಂಸ್ಥೆಗಳು ಗೋಮೂತ್ರ ಮತ್ತು ಗೋವಿನ ಸಗಣಿಗಳನ್ನು ಜೈವಿಕ ಅನಿಲ, ಡೈಯಾಸ್, ಶಾಂಪೂಗಳು, ಕೀಟನಾಶಕಗಳು, ಮುಲಾಮುಗಳು ಮತ್ತು ಇನ್ನೂ ಅನೇಕ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುತ್ತಿವೆ" ಎಂದರು.

20 ರಿಂದ 100 ಎಕರೆ ಭೂಮಿ ಲಭ್ಯ
"ನಾವು ನಮ್ಮದೇ ಆದ ಗೋಶಾಲೆಗಳನ್ನು ಹೊಂದಿದ ನಂತರ ಆ ಸ್ಥಳಗಳಲ್ಲಿ ಗೋಮೂತ್ರ ಮತ್ತು ಹಸುವಿನ ಸಗಣಿ ಎರಡನ್ನೂ ಸಂಗ್ರಹಿಸಬಹುದು. ಹಸುವಿನ ಸಗಣಿ ಸಂಗ್ರಹಿಸಲು ಮತ್ತು ಉತ್ಪನ್ನಗಳನ್ನು ತಯಾರಿಸಲು ಘಟಕಗಳಾಗಿ ಪರಿವರ್ತಿಸಲು ನಮಗೆ 20 ರಿಂದ 100 ಎಕರೆ ಭೂಮಿ ಇದೆ" ಎಂದು ಸಚಿವ ಪ್ರಭು ಚೌವ್ಹಾಣ್ ಹೇಳಿದರು.

ಮಹಾರಾಷ್ಟ್ರ ಹಾಗೂ ವಾರಣಾಸಿಗೆ ಸಚಿವ ಭೇಟಿ
"ಕರ್ನಾಟಕದ ತಂಡ ಛತ್ತೀಸ್‌ಗಢ ಮಾದರಿಯನ್ನು ಅಧ್ಯಯನ ಮಾಡಲಿದೆ. ನಾನು ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಅವರು ಜೈವಿಕ ಇಂಧನವನ್ನು ತಯಾರಿಸುತ್ತಾರೆ. ಮಹಾರಾಷ್ಟ್ರದ ಕಿನ್ನೇರಿ ಮಠದಲ್ಲಿ ಅವರು 35 ಉತ್ಪನ್ನಗಳನ್ನು ತಯಾರಿಸುತ್ತಾರೆ. ಅದು ಲಾಭದಾಯಕವಾಗಿ ನಡೆಯುತ್ತಿದೆ. ನಮ್ಮದೇ ಆದ ಘಟಕಗಳಿದ್ದರೆ ರೈತರಿಗೆ ನೆರವಾಗಬಹುದು. ಈಗ ಯೋಜನೆಗಳು ಆರಂಭಿಕ ಹಂತದಲ್ಲಿವೆ" ಎಂದು ಸಚಿವರು ಹೇಳಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೂ ಚರ್ಚೆ ನಡೆಯುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಇದು ವಯಸ್ಸಾದ ಜಾನುವಾರುಗಳನ್ನು ಸಾಕಲು ಹೊರೆಯಾಗುತ್ತಿದೆ ಎಂದು ದೂರುತ್ತಿರುವ ರೈತರಿಗೆ ಸಹಾಯ ಮಾಡುತ್ತದೆ.

ಗೋಧನ್ ನ್ಯಾಯ್ ಯೋಜನೆಯ ಭಾಗ
ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವು ಜೂನ್ 28 ರಂದು ಸ್ಥಳೀಯ ಹಬ್ಬ 'ಹರೇಲಿ'ಯಿಂದ ಪ್ರತಿ ಲೀಟರ್‌ಗೆ ಕನಿಷ್ಠ ರೂ 4 ದರದಲ್ಲಿ ಗೋಮೂತ್ರವನ್ನು ಖರೀದಿಸಲು ಪ್ರಾರಂಭಿಸಿತ್ತು. ಹಸುವಿನ ಸಗಣಿ ಸಂಗ್ರಹಣೆಯನ್ನು ಒಳಗೊಂಡಿರುವ ಪ್ರಮುಖ 'ಗೋಧನ್ ನ್ಯಾಯ್ ಯೋಜನೆ'ಯನ್ನು ಎರಡು ವರ್ಷಗಳ ಹಿಂದೆ ದನಪಾಲಕರು, ಸಾವಯವ ಕೃಷಿಕರಿಗೆ ಆದಾಯವನ್ನು ಒದಗಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿತ್ತು.

ಗೌಧನ್ ನಿರ್ವಹಣಾ ಸಮಿತಿಯಿಂದ ದರ ನಿಗದಿ
ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಎರಡು ಸ್ವತಂತ್ರ ಗೌಧನ್‌ಗಳಲ್ಲಿ (ಜಾನುವಾರು ಆಶ್ರಯ) ಗೋಮೂತ್ರ ಸಂಗ್ರಹಣೆಯನ್ನು ಮಾಡಲಾಗುತ್ತದೆ. ಗೌಧನ್ ನಿರ್ವಹಣಾ ಸಮಿತಿಯು ಸ್ಥಳೀಯ ಮಟ್ಟದಲ್ಲಿ ಗೋಮೂತ್ರದ ದರವನ್ನು ನಿಗದಿಪಡಿಸುತ್ತದೆ. ಕೃಷಿ ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆಯು ರೈತರಿಂದ ಪ್ರತಿ ಲೀಟರ್‌ಗೆ ಕನಿಷ್ಠ 4 ರೂ. ಕೊಟ್ಟು ಗೋಮೂತ್ರ ಖರೀದಿಸುತ್ತದೆ.












Click it and Unblock the Notifications