ಸ್ಥಳೀಯ ಸಂಸ್ಥೆ ಅಚ್ಚರಿ ಫಲಿತಾಂಶ: ಅಜ್ಜಿಯನ್ನು ಸೋಲಿಸಿದ ಮೊಮ್ಮಗಳು
ಕರ್ನಾಟಕ, ಡಿಸೆಂಬರ್ 30: ರಾಜ್ಯದಲ್ಲಿ ಡಿಸೆಂಬರ್ 27ರಂದು ನಡೆದಿದ್ದ 19 ಜಿಲ್ಲೆಗಳ ಐದು ನಗರಸಭೆ ಸೇರಿದಂತೆ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಈ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಆಡಳಿತರೂಢ ಬಿಜೆಪಿಗೆ ಈ ಫಲಿತಾಂಶದಿಂದ ಮುಖಭಂಗವಾಗಿದೆ.
ಶಿರಸಿಯಲ್ಲಿ ಅಜ್ಜಿಯನ್ನು ಸೋಲಿಸಿದ ಮೊಮ್ಮಗಳು
ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ಕೆಲವು ಕಡೆ ಅಚ್ಚರಿ ಫಲಿತಾಂಶ ಕಂಡುಬಂದಿದ್ದು, ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಅಂಡಗಿ ಗ್ರಾಮ ಪಂಚಾಯಿತಿಯ ಕಿರವತ್ತಿ ವಾರ್ಡ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಗೀತಾ ಗಣೇಶ ಚೆನ್ನಯ್ಯ ಗೆಲುವು ಸಾಧಿಸಿದ್ದಾರೆ.

ಪ್ರತಿಸ್ಪರ್ಧಿ ಶಿವಕ್ಕ ಚಂದ್ರಪ್ಪ ಚೆನ್ನಯ್ಯ ಅವರನ್ನು 76 ಮತಗಳಿಂದ ಪರಾಭವಗೊಳಿಸಿದ್ದಾರೆ. ಸೋತ ಶಿವಕ್ಕ ಸಂಗೀತಾರಿಗೆ ಸಂಬಂಧದಲ್ಲಿ ಅಜ್ಜಿಯಾಗಬೇಕು.
ಅಂಡಗಿ ಗ್ರಾಮ ಪಂಚಾಯಿತಿಯ ಕಿರವತ್ತಿ ವಾರ್ಡ್‌ನಲ್ಲಿ ಚಾಲಾವಣೆಯಾಗಿದ್ದ 415 ಮತಗಳ ಪೈಕಿ ಸಂಗೀತಾ 241 ಮತಗಳನ್ನು ಪಡೆದರೆ, ಶಿವಕ್ಕ 165 ಪಡೆದಿದ್ದಾರೆ. 9 ಮತಗಳು ತಿರಸ್ಕೃತಗೊಂಡಿವೆ.
ದಾವಣಗೆರೆಯಲ್ಲಿ ಸೊಸೆಯನ್ನು ಸೋಲಿಸಿದ ಅತ್ತೆ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯತ್ 2ನೇ ವಾರ್ಡ್‌ಗೆ ಉಪ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ.

ಕೆರೆಕಟ್ಟೆ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 14 ಸ್ಥಾನಗಳಿದ್ದು, ಅದರಲ್ಲಿ ಎರಡನೇ ವಾರ್ಡ್‌ಗೆ ಉಪ ಚುನಾವಣೆ ನಡೆದಿತ್ತು. ಎರಡನೇ ವಾರ್ಡ್ ಸ್ಥಾನಕ್ಕೆ ಅತ್ತೆ ಪಾರ್ವತಮ್ಮ ಮತ್ತು ಸೊಸೆ ಲಕ್ಷಮ್ಮ ಸ್ಪರ್ಧೆ ಮಾಡಿದ್ದರು. ಸೊಸೆ ವಿರುದ್ಧ ಅತ್ತೆ ಗೆದ್ದು ಬೀಗಿದ್ದಾರೆ.
ಒಂದೇ ಕುಟುಂಬದಿಂದ ಅತ್ತೆ-ಸೊಸೆ ಸ್ಪರ್ಧೆ ಮಾಡಿದ್ದು, ಭಾರೀ ಬಿರುಸಿನ ಪ್ರಚಾರ ನಡಸಿದ್ದರು. ಇಂದು ಮತ ಎಣಿಕೆ ಆಗಿದ್ದು ಅತ್ತೆ ಪಾರ್ವತಮ್ಮ 91 ಮತಗಳಿಂದ ಜಯ ಗಳಿಸಿದ್ದಾರೆ. ಅತ್ತೆ ಪಾರ್ವತಮ್ಮ 502 ಮತ ಪಡೆದರೆ, ಸೊಸೆ ಲಕ್ಷ್ಮಮ್ಮಗೆ 412 ಮತಗಳು ಬಿದ್ದಿವೆ.
ಬಾಗಲಕೋಟೆಯಲ್ಲಿ ಪತಿ, ಪತ್ನಿ ಗೆಲುವು
ಬಾಗಲಕೋಟೆಯಲ್ಲಿ ಪತಿ-ಪತ್ನಿ ಇಬ್ಬರೂ ಗೆದ್ದು ಕಮಾಲ್ ಮಾಡಿದ್ದಾರೆ. ಕಮತಗಿ ಪಟ್ಟಣ ಪಂಚಾಯಿತಿ ಮತ ಎಣಿಕೆಯಲ್ಲಿ ಪತಿ, ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ ಏಳರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪತಿ ದೇವಿ ಪ್ರಸಾದ್ ನಿಂಬಲಗುಂದಿ ಜಯ ಕಂಡಿದ್ದಾರೆ. ಇನ್ನು ವಾರ್ಡ್ ನಂಬರ್ 15ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪತ್ನಿ ನೇತ್ರಾವತಿ ನಿಂಬಲಗುಂದಿ ಕೂಡ ಜಯ ಗಳಿಸಿದ್ದಾರೆ.
ಪೆಟ್ರೋಲ್ ಬಂಕ್ ಕಾರ್ಮಿಕನಿಗೆ ಗೆಲುವು
ಯಾದಗಿರಿಯಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಯುವಕ ಗೆಲವು ಸಾಧಿಸಿ, ಪುರಸಭೆಗೆ ಪ್ರವೇಶ ಮಾಡಿದ್ದಾನೆ. ಕಕ್ಕೇರಾ ಮತದಾರರು ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಪರಶುರಾಮನ ಕೈ ಹಿಡಿದಿದ್ದಾರೆ. ಕಕ್ಕೇರಾ ಪುರಸಭೆಯ ವಾರ್ಡ್ ನಂಬರ್ 6ರಿಂದ ಕಾಂಗ್ರೆಸ್ ಪಕ್ಷದಿಂದ ಪರಶುರಾಮ ಸ್ಪರ್ಧಿಸಿದ್ದ. ಇದೀಗ ಗೆಲುವು ಸಾಧಿಸಿದ್ದು, ಸಂತೋಷಗೊಂಡಿದ್ದಾನೆ.
ಸಹೋದರಿಯರ ವಿಜಯಮಾಲೆ
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಸಹೋದರಿಯರು ವಿಜಯ ಪತಾಕೆ ಹಾರಿಸಿದ್ದಾರೆ. ನಗರಸಭೆಯ 33, 34ನೇ ವಾರ್ಡ್‌ಗಳಲ್ಲಿ ಸಹೋದರಿಯರಿಗೆ ಗೆಲುವು ಸಿಕ್ಕಿದೆ. 33ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಕ್ಕ ಪರಗಂಟಿ ಲಕ್ಷ್ಮಿ, 34ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ಲತಾ ಸಂತೋಷ್ ಗೆಲುವು ಸಾಧಿಸಿದ್ದಾರೆ.












Click it and Unblock the Notifications