ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಸಂದರ್ಶನ

By: ಸಂದರ್ಶನ: ಬಾಲರಾಜ್ ತಂತ್ರಿ
Subscribe to Oneindia Kannada

ಬೆಂಗಳೂರು ಗಿರಿನಗರದ ಶಾಖಾಮಠದಲ್ಲಿ ಚಾತುರ್ಮಾಸ ವೃತ ಸಂಪನ್ನಗೊಳಿಸಿರುವ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು, ಕಾವೇರಿ ಜಲವಿವಾದ, ಗೋಮಾಂಸ ಭಕ್ಷಣೆ, ಕೊಲ್ಲೂರು ದೇವಾಲಯದಲ್ಲಿನ ಪೂಜಾ ವಿವಾದದ ಬಗ್ಗೆ ಮಾತನ್ನಾಡಿದ್ದಾರೆ.

ಬುಧವಾರ (ಸೆ 14) ಒನ್ ಇಂಡಿಯಾ ಕನ್ನಡದ ಜೊತೆ ನಡೆದ ರಾಘವೇಶ್ವರ ಶ್ರೀಗಳ ಸಂದರ್ಶನದ ಆಯ್ದ ಭಾಗ ಇಂತಿದೆ: (ರಾಘವೇಶ್ವರ ಶ್ರೀಗಳ ಸಂದರ್ಶನದ ವಿಡಿಯೋ)

An exclusive interview of Raghaveshwara Seer of Hosanagara Ramachandrapura Math

ಪ್ರ: ಜೀವನದಿ ಕಾವೇರಿ ವಿಚಾರದಲ್ಲಿ ನಿಮ್ಮ ನಿಲುವು ಮತ್ತು ರೈತರಿಗೆ, ನಾಡಿನ ಜನತೆಗೆ ನಿಮ್ಮ ಸಂದೇಶ?
ರಾ.ಶ್ರೀ: ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿ ನಮ್ಮ ಕಾರ್ಯಕ್ರಮವನ್ನು ರದ್ದು ಮಾಡಿದ್ದೆವು. ರೈತರ ಪರವಾಗಿ ಪತ್ರಿಕಾ ಹೇಳಿಕೆಯನ್ನೂ ನೀಡಿದ್ದೆವು. ರೈತರಿಗೆ ತೊಂದರೆ ಕೊಡಬೇಡಿ. ಎರಡೂ ಭಾಗದಲ್ಲಿ ರೈತರಿದ್ದಾರೆ, ನಾವು ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಹೇಳುತ್ತಿಲ್ಲ, ಅಲ್ಲಿನ ರೈತರಿಗೆ ಎಷ್ಟು ನೀರು ಕೊಡುತ್ತಿದ್ದೀರೋ ಅಷ್ಟೇ ನೀರನ್ನು ನಮ್ಮ ರೈತರಿಗೂ ಕೊಡಿ. ಅವರು ಮೂರು ಬೆಳೆ ಬೆಳೆಯುತ್ತಾರೆ, ನಾವು ಒಂದು ಬೆಳೆ ಬೆಳೆಯುತ್ತೇವೆ ಎನ್ನುವುದು ಸರಿಯಾದ ನಿರ್ಧಾರವಲ್ಲ.

ಪ್ರ: ಗೋಮಾಂಸ ಸೇವನೆ ಕೆಲವರ ಆಹಾರ ಪದ್ದತಿ, ಇನ್ನೊಬ್ಬರ ತಟ್ಟೆಗೆ ಕೈಹಾಕುವ ಕೆಲಸವನ್ನು ಯಾಕೆ ಮಾಡುತ್ತೀರಿ ಎನ್ನುವುದು ಕೆಲವರ ವಾದ, ಈ ಬಗ್ಗೆ?
ರಾ.ಶ್ರೀ: ನಾವು ಅವರ ಹಿತೈಷಿಗಳು. ಗೋಮಾಂಸ ತಿನ್ನುವುದು ಒಳ್ಳೆಯದಲ್ಲ. ಗೋಮಾಂಸ ತಿನ್ನುವುದರಿಂದ ತಿನ್ನುವವರಿಗೆ ಒಳ್ಳೆದಾಗುವುದಾದರೆ ಅದೊಂದು ಲೆಕ್ಕ. ಗೋಮಾಂಸ ಸೇವನೆ ಮಾಡಬೇಡಿ ಅಂದರೆ ಅದಕ್ಕೆ ಏನೋ ಒಂದು ಜಸ್ಟಿಫಿಕೇಶನ್ ಇರುತ್ತದೆ. ಗೋವು ಹುಲಿಗೆ ಆಹಾರ, ಮನುಷ್ಯನಿಗಲ್ಲ. ಗೋವು ತಾನು ತಿಂದಿದ್ದರಲ್ಲಿ ವಿಷದಾಂಶವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತೆ, ಅಮೃತಾಂಶವನ್ನು ಬಿಟ್ಟುಕೊಡುತ್ತದೆ. ಗೋಮಾಂಸದಲ್ಲಿ ವಿಷದಾಂಶ ಹೆಚ್ಚು ಇರುತ್ತದೆ, ಇದು ವಿಶ್ವವಿದ್ಯಾಲಯದ ಅಧ್ಯಯನದಲ್ಲಿ ಕೂಡಾ ರುಜುವಾತಾಗಿದೆ.

ಪ್ರ: ಮಠ ಎದುರಿಸುತ್ತಿರುವ ಕಾನೂನು ಸವಾಲುಗಳಿಂದ, ಮಠಕ್ಕೆ ದಕ್ಷ ಕಾರ್ಯಕರ್ತರು ಸಿಕ್ಕಿದ್ದಾರೆ ಎನ್ನುವ ಮಾತನ್ನು ಹೇಳಿದ್ರಿ. ನಿಮ್ಮ ಮಾತಿನ ಅರ್ಥ? ಹವ್ಯಕ ಸಮುದಾಯದಲ್ಲಿ ಭಿನ್ನಾಭಿಪ್ರಾಯ ಇದೆ ಎಂದಾ?
ರಾ.ಶ್ರೀ: ಆಪಲ್ ಕಂಪೆನಿಯ ಲೋಗೋದಲ್ಲಿ ಸಣ್ಣ ಚೂರು ಆಪಲ್ ಬೇರೆಯಾದ ಹಾಗೇ ನಮ್ಮ ಸಮಾಜದಲ್ಲೂ ಇದೆ. ಮೈಕ್ರೋಸ್ಕೋಪ್ ಹಾಕಿ ಹುಡುಕಿದರೆ ಸಣ್ಣ ಭಿನ್ನಾಭಿಪ್ರಾಯ ಕಾಣಿಸಬಹುದು, ಅದು ಎಲ್ಲಾ ಸಮಾಜದಲ್ಲೂ ಇದ್ದದ್ದೇ. ಮಿಕ್ಕಂತೇ ನಮ್ಮ ಸಮಾಜದಲ್ಲಿ ಎಲ್ಲವೂ ಸರಿಯಾಗಿಯೇ ಇದೆ.

ಪ್ರ: ಸೆಷನ್ ಕೋರ್ಟ್ ನಿಮ್ಮನ್ನು ಖುಲಾಷೆಗೊಳಿಸಿದ ನಂತರ, ಮಠದ ಭಕ್ತರಿಗೆ ನಿಮ್ಮ ಸಂದೇಶ?
ರಾ.ಶ್ರೀ: ಆರೋಪಿ ಅಪರಾಧಿಯಲ್ಲ, ಸುಳ್ಳು ಎಂದಿಗೂ ನಿಲ್ಲುವುದಿಲ್ಲ. ಸುಳ್ಳು ಆರೋಪ ಮಾಡುವವರಿಗೆ ಒಳ್ಳೆ ಬುದ್ದಿ ಕೊಡಲಿ. ಖಳನಾಯಕರಾಗ ಬೇಡಿ, ಒಳ್ಳೆಯ ಕೆಲಸ ಮಾಡಲಾಗದಿದ್ದಲ್ಲಿ, ಸುಮ್ಮನಿರಿ.. ಉಪದ್ರ ಕೊಡಬೇಡಿ. ಯಾರ ಮೇಲಾದರೂ ಆರೋಪ ಬಂದರೆ, ಗಡಿಬಿಡಿ ಮಾಡಿ ನಿರ್ಧಾರಕ್ಕೆ ಬರಬೇಡಿ. ಐದು ಲಕ್ಷ ಯಾರಾದರೂ ಕೊಟ್ಟರೆ, ಏನಾದರೂ ಅಪವಾದವನ್ನು ಮಾಡಲು ಸಿದ್ದರಿರುವವರಿದ್ದಾರೆ, ಅದೇ ದೊಡ್ಡ ದುರಂತ.

An exclusive interview of Raghaveshwara Seer of Hosanagara Ramachandrapura Math

ಪ್ರ: ಈ ಬಾರಿಯ ಚಾತುರ್ಮಾಸಕ್ಕೆ ಗೋಚಾತುರ್ಮಾಸ ಎಂದು ನಾಮಕರಣ ಮಾಡಿ ಜನತೆಗೆ ಗೋವಿನ ಮಹತ್ವದ ಬಗ್ಗೆ ತಿಳಿಸುವಂತಹ ಕೆಲಸವನ್ನು ಮಾಡುತ್ತಿದ್ದೀರಿ, ಮಠದ ಈ ವಿಶೇಷ ಪ್ರಯತ್ನದ ಬಗ್ಗೆ?
ರಾ.ಶ್ರೀ: ಗೋವಿನ ಗೋಳನ್ನು ಯಾರೂ ಕೇಳ್ತಾ ಇಲ್ಲ. ಈ ವಿಚಾರದಲ್ಲಿ ನಮ್ಮ ದೇಶ ಮತ್ತು ರಾಜ್ಯದ ಸಿಸ್ಟ್ಂ ಬಗ್ಗೆ ನಮಗೆ ನಂಬಿಕೆಯಿಲ್ಲ. ಸಾಮಾನ್ಯ ಮನುಷ್ಯರು ಗೋವನ್ನು ಮಾರಿ ಬಿಡುತ್ತಿದ್ದಾರೆ. ಆಧುನಿಕ ಜಗತ್ತು ಹೊಸ ವಿಧಾನಕ್ಕೆ ಮೊರೆ ಹೋಗಿದೆ. ಸಂತರು ಮತ್ತು ಗೋವಿಗೆ ಪುರಾತನ ಸಂಬಂಧವಿದೆ. ಸಮುದ್ರಮಥನದ ಸಮಯದಲ್ಲಿ ಕಾಮಧೇನುವಿನ ಉದ್ಭವವಾಯಿತು. ಆಗ ಕಾಮುಧೇನುವನ್ನು ಆ ಕಾಲದ ಸಂತರಿಗೆ ಕೊಡಲಾಯಿತು. ಆ ಸಂಬಂಧವನ್ನು ಮುಂದುವರಿಸುತ್ತಾ, ಈ ಚಾತುರ್ಮಾಸದಲ್ಲಿ ಗೋವಿನ ಬಗ್ಗೆ ಹೆಚ್ಚಿನ ಮಹತ್ವ ನೀಡುವ ಕೆಲಸಕ್ಕೆ ಮುಂದಾಗಿದ್ದೇವೆ. ಇದುವರೆಗೆ ನಡೆದ ಗೋಚಾತುರ್ಮಾಸ ಕಾರ್ಯಕ್ರಮದ ಬಗ್ಗೆ ನಮಗೆ ತೃಪ್ತಿಯಿದೆ.

ಪ್ರ: ಮಠದ ಮುಂದಿನ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ?
ರಾ.ಶ್ರೀ: ಗೋಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಸಾರಿ ನವರಾತ್ರಿ ಆಚರಣೆಯಿದೆ. ಸಿಗಂಧೂರು ಕ್ಷೇತ್ರದಲ್ಲಿ ವಿಶೇಷ ನವರಾತ್ರಿ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅನ್ನಬ್ರಹ್ಮ, ಸಾವಯವ ಊಟ, ಪಾರಂಪರಿಕ ಅಡುಗೆ ಪದ್ದತಿಯ ಬಗ್ಗೆ ಬೆಳಕು ಚೆಲ್ಲುವಂತಹ 10-12ದಿನದ ಕಾರ್ಯಕ್ರಮವಿದೆ. (ಹವ್ಯಕರ ಸಭೆಯಲ್ಲಿ ಮಾರಾಮಾರಿ)

ಪ್ರ: ದೇವಾಲಯಗಳನ್ನು ಮುಜರಾಯಿ ವ್ಯಾಪ್ತಿಗೆ ತರುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ರಾ.ಶ್ರೀ: ದೇವಸ್ಥಾನದ ವಿಚಾರದಲ್ಲಿ ಸರಕಾರ ಕೈಹಾಕಬಾರದು, ಯಾಕೆಂದರೆ ಅವರಿಗೆ ಮಾಡೋಕೆ ಬೇರೆ ಕೆಲಸವಿದೆ, ಆ ಕೆಲಸ ಚೆನ್ನಾಗಿ ಮಾಡಿದರೆ ಸಾಕು. ಇದು ಧಾರ್ಮಿಕ ಶ್ರದ್ದೆಯ ವಿಚಾರ, ಅವರವರ ಸಮುದಾಯದ ವಿಚಾರ. ದೇವಾಲಯದ ಆಡಳಿತ ವ್ಯವಸ್ಥೆಯಲ್ಲಿ ಏನಾದರೂ ಅವ್ಯವಹಾರವಿದ್ದರೆ ಸರಕಾರ ಹಸ್ತಕ್ಷೇಪ ಮಾಡಲಿ. ದೇವಾಲಯವನ್ನು ಪಾರಂಪರಿಕ ಕಾಳಜಿ ಇದ್ದವರು ನಡೆಸಿಕೊಂಡು ಹೋಗಲಿ.

ಪ್ರ: ಹಿಂದೂ ಸಂಸ್ಕೃತಿ, ಪೂಜಾಪದ್ದತಿ ಯಾಕೆ ಯಾವಾಗಲೂ ಟಾರ್ಗೆಟ್ ಆಗುತ್ತಿದೆ?
ರಾ.ಶ್ರೀ: ಸನಾತನ ಭಾರತೀಯರ ಪೂಜಾ ಪದ್ದತಿ, ಜೀವನಶೈಲಿ ನಮ್ಮಲ್ಲಿ ಇದ್ದಷ್ಟು ಕಾಳಜಿ ಬೇರೆ ಯಾವ ಧರ್ಮದಲ್ಲೂ ಇಲ್ಲ. ಪೂಜೆ ಪದ್ದತಿಯ ಬಗ್ಗೆ ಸಂಶೋಧನೆ ನಡೆಯಲಿ. ಆಗ ನಿಜಾಂಶ ಹೊರಗೆ ಬರುತ್ತದೆ, ಸುಮ್ಮನೇ ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎನ್ನುವುದು ನಮ್ಮ ಅನಿಸಿಕೆ.

ಪ್ರ: ಏನಿದು ಕೊಲ್ಲೂರು ದೇವಾಲಯದಲ್ಲಿ ಮೂಕಾಂಬಿಕೆಯ ಜನ್ಮಾಷ್ಟಮಿಯಂದು ನಡೆಯುವ ಪೂಜಾಪದ್ದತಿಯಲ್ಲಿನ ಗೊಂದಲ?
ರಾ.ಶ್ರೀ: ಇದಕ್ಕೆ ಧಾರ್ಮಿಕ ಕಾರಣಗಳಿಲ್ಲ, ರಾಜಕೀಯ ಕಾರಣವಿರಬಹುದು. ಕೋರ್ಟ್ ಆದೇಶವೇ ಇದೆ, ಸರಕಾರಕ್ಕೆ ಪೂಜೆ ಮಾಡುವುದನ್ನು ತಡೆಹಿಡಿಯುವ ಹಕ್ಕಿಲ್ಲ. ನಾವು ಯಾರ ಹಕ್ಕನ್ನೂ ಕಸಿದುಕೊಂಡಿಲ್ಲ. ಬರೀ ಪೂಜೆ ತಪ್ಪಿಸಿದರೆ ಯಾರಿಗೆ ಏನು ಲಾಭ. ಪೂಜೆಯಾದರೆ ಸಮಾಜಕ್ಕೆ ಶ್ರೇಯಸ್ಸು, ಇದು ಪೂರ್ವಗ್ರಹ ಪೀಡಿತ ಇಲಾಖೆಯ ಕ್ರಮ. (ಶ್ರೀಗಳ ಆಶೀರ್ವಾದದಿಂದ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವಂತಾಗಲಿ)

ಪ್ರ: ಮೌಢ್ಯ ನಿಷೇಧ ಕಾನೂನಿನ ಬಗ್ಗೆ?
ರಾ.ಶ್ರೀ: ಮೌಢ್ಯ ಯಾವುದು ಎನ್ನುವುದು ಮೊದಲು ತೀರ್ಮಾನವಾಗಲಿ. ಅದರ ಬಗ್ಗೆ ಸಂಶೋಧನೆ ನಡೆಯಲಿ, ಚರ್ಚೆಯಾಗಲಿ. ಅದು ಆಗದೆಯೇ ಮೌಢ್ಯ ಎನ್ನುವುದೇ ದೊಡ್ಡ ಮೌಢ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An exclusive interview of Raghaveshwara Seer of Hosanagara Ramachandrapura Math.
Please Wait while comments are loading...