ಅಮೃತ್ ಭಾರತ್ ಸ್ಟೇಷನ್ ಯೋಜನೆ; ಕಲ್ಯಾಣ ಕರ್ನಾಟಕದ ಅಪ್‌ಡೇಟ್
ಕಲಬುರಗಿ, ಫೆಬ್ರವರಿ 15: ಭಾರತತೀಯ ರೈಲ್ವೆ ಸಚಿವಾಲಯ 'ಅಮೃತ್ ಭಾರತ್ ಸ್ಟೇಷನ್' ಎಂಬ ಹೆಸರಿನಲ್ಲಿ ರೈಲು ನಿಲ್ದಾಣಗಳ ಆಧುನೀಕರಣಕ್ಕಾಗಿ ಹೊಸ ಯೋಜನೆ ಘೋಷಣೆ ಮಾಡಿದೆ. ರೈಲು ನಿಲ್ದಾಣದಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸುವ ಯೋಜನೆ ಇದಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ 6 ರೈಲು ನಿಲ್ದಾಣಗಳ ಆಧುನೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ. ಕಾಮಗಾರಿಗಳು ಆರಂಭವಾಗಿವೆ. ಈಗ ಕುರಿತು ಅಪ್‌ಡೇಟ್ ಸಿಕ್ಕಿದೆ.

ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಕಲಬುರಗಿ ಡಿಸಿ ಕಛೇರಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲುಸ್ತುವಾರಿ 'ದಿಶಾ' ಸಮಿತಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ರೈಲು ನಿಲ್ದಾಣಗಳ ಅಭವೃದ್ಧಿ ಕಾಮಗಾರಿಗಳ ಕುರಿತು ಚರ್ಚೆಗಳು ನಡೆದವು.
ಯಾವ-ಯಾವ ನಿಲ್ದಾಣ: ಕಲ್ಯಾಣ ಕರ್ನಾಟಕ ಭಾಗದಲ್ಲಿ 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ವಾಡಿ, ಕಲಬುರಗಿ, ಶಹಾಬಾದ್, ಬೀದರ್, ಕೊಪ್ಪಳ ಮತ್ತು ಬಳ್ಳಾರಿ ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ.
ಸಂಸದ ಡಾ. ಉಮೇಶ್ ಜಾಧವ್, "ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳ ವೇಗ ಹೆಚ್ಚಿಸಬೇಕು" ಎಂದು ಸೆಂಟ್ರಲ್ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಲಬುರಗಿ ರೈಲು ನಿಲ್ದಾಣದ ಸೋಲಾಪುರ ಕಡೆ ಹಳೇ ಜೇವರ್ಗಿ ರಸ್ತೆಯ ಅರ್.ಯು.ಬಿ. ಬಳಿ ಇರುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಳವನ್ನು ವಶಕ್ಕೆ ಪಡೆದು ಅಲ್ಲಿ ನಿಲ್ದಾಣಕ್ಕೆ 3ನೇ ಪ್ರವೇಶ ಮಾಡಬೇಕಿದ್ದು, ರೈಲ್ವೆ ಅಧಿಕಾರಿಗಳು ಕಲಬುರಗಿ ಜಿಲ್ಲಾಧಿಕಾರಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗಿ ಈ ಕುರಿತು ಚರ್ಚಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ 5 ಮತ್ತು 6ನೇ ಪ್ಲಾಟ್ ಫಾರ್ಮ್ ನಿರ್ಮಿಸಬೇಕೆಂಬ ಬೇಡಿಕೆ ಪರಿಶೀಲಿಸಿದ್ದು, ಅದು ಕಾರ್ಯಸಾಧುವಲ್ಲ ಎಂದು ವರದಿ ಬಂದಿದೆ. ನಿಲ್ದಾಣದಲ್ಲಿ ಸೋಲಾಪುರ ಕಡೆಗೆ ಹೊಸದಾಗಿ ಅರ್.ಓ.ಬಿ ನಿರ್ಮಾಣಕ್ಕೆ, ಕಲಬುರಗಿ-ತಾಜಸುಲ್ತಾನಪುರ ನಡುವಿನ ಆರ್.ಯು.ಬಿ. ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದರು.
ವಾಡಿ ರೈಲ್ವೆ ನಿಲ್ದಾಣದಲ್ಲಿ ಪಟ್ಟಣ ಕಡೆಗಿನ ಪ್ರಯಾಣಿಕರು ಅರ್.ಓ.ಬಿ. ಹತ್ತಿ ಪ್ಲಾಟ್ ಫಾರ್ಮ್ ಪ್ರವೇಶಿಸಬೇಕಿತ್ತು. ನೇರವಾಗಿ ಪ್ಲಾಟ್ ಫಾರ್ಮ್ ಪ್ರವೇಶ ಕಲ್ಪಿಸಲು ಪ್ಲಾಟ್ ಫಾರ್ಮ್ ವಿಸ್ತರಣೆ ಬಹುದಿನಗಳ ಬೇಡಿಕೆಗೆ ರೈಲ್ವೆ ಇಲಾಖೆ ಅನುಮತಿ ನೀಡಿದೆ. ಇದಲ್ಲದೆ ಅಫಲಪೂರ ತಾಲೂಕಿನ ಕುಲಾಲಿ ಬಳಿ ದಶಕದ ಬೇಡಿಕೆ ಅರ್.ಯು.ಬಿ. ನಿರ್ಮಿಸಿದ್ದು, ಇದರಿಂದ ಕಬ್ಬು ಲಾರಿಗಳು ಸಂಚರಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ದಕ್ಷಿಣ ಮಧ್ಯ ರೈಲ್ವೆ ವಿಭಾಗದಲ್ಲಿ ಬರುವ ಜಿಲ್ಲೆಯ ಮಳಖೇಡನಲ್ಲಿ ಹೈಕ್ಲಾಸ್ ಪ್ಲಾಟ್ ಫಾರ್ಮ್ ನಿರ್ಮಿಸಲಾಗುತ್ತಿದೆ. ಸೇಡಂ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ ಸಂಖ್ಯೆ-2ರ ಎತ್ತರ ಹೆಚ್ಚಿಸಬೇಕೆಂಬ ಬೇಡಿಕೆಗೆ ಡಿ.ಆರ್.ಎಂ ಕಚೇರಿ ಒಪ್ಪಿಗೆ ನೀಡಿದೆ. ಚಿತ್ತಾಪುರ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ನಾಲವಾರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 1ರಲ್ಲಿ ಕೋಚ್ ಪೋಸಿಷನ್ ಇಂಡಿಕೇಷನ್ ಅಳವಡಿಸಿದೆ ಎಂದು ಗುಂತಕಲ್ ವಿಭಾಗದ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು. ಸಂಸದ ಡಾ. ಉಮೇಶ್ ಜಾಧವ್ 2ನೇ ಪ್ಲಾಟ್ ಫಾರ್ಮ್‌ನ ಕೋಚ್ ಪೋಸಿಷನ್ ಇಂಡಿಕೇಷನ್ ಹಾಕಬೇಕು ಎಂದು ಹೇಳಿದರು.
ಶಹಾಬಾದ್ ರೈಲ್ವೆ ನಿಲ್ದಾಣದ ಬಳಿ ಚುನ್ನಾ ಬಟ್ಟಿ ಪ್ರದೇಶಕ್ಕೆ ಹೋಗಬೇಕಾದರೆ ಜನ ರೈಲ್ವೆ ಕ್ರಾಸ್ ಮಾಡಿ ಹೋಗುತ್ತಿದ್ದಾರೆ. ಕೂಡಲೇ ಅಲ್ಲಿ ಆರ್.ಯು.ಬಿ. ನಿರ್ಮಿಸಬೇಕು ಎಂದು ಸಂಸದರು ತಿಳಿಸಿದಾಗ, ಈಗಾಗಲೇ ಇದಕ್ಕೆ ಅನುಮೋದನೆ ಸಿಕ್ಕಿದೆ, ಕೆಲಸ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.












Click it and Unblock the Notifications