ಅಮಿತ್ ಶಾ ರಾಜ್ಯಕ್ಕೆ: ರಾಜ್ಯ ರಾಜಕೀಯ ಗೊಂದಲಕ್ಕೆ ಕೊನೆ ಮೊಳೆ?
ಬೆಂಗಳೂರು, ಸೆಪ್ಟೆಂಬರ್ 09: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಮುಗಿದ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಸೆಪ್ಟೆಂಬರ್ 25ಕ್ಕೆ ಅವರ ರಾಜ್ಯ ಭೇಟಿ ನಿಗದಿಯಾಗಿದೆ.
ಲೋಕಸಭೆ ಚುನಾವಣೆ ಟಿಕೆಟ್, ಪ್ರಚಾರ ತಂತ್ರ, ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ತುರುಸಿನ ಬದಲಾವಣೆಗಳ ಬಗ್ಗೆ ಅಮಿತ್ ಶಾ ಅವರು ರಾಜ್ಯ ಬಿಜೆಪಿ ನಾಯಕರೊಂದಿಗೆ ಆಮೂಲಾಗ್ರ ಚರ್ಚೆ ನಡೆಸಲಿದ್ದಾರೆ.
ರಾಜ್ಯದ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಸಮಯದಲ್ಲಿ ಅಮಿತ್ ಶಾ ಆಗಮಿಸುತ್ತಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ರಾಜ್ಯ ರಾಜಕೀಯದಲ್ಲಿ ಈಗ ಎದ್ದಿರುವ ಗೊಂದಲಗಳಿಗೆ ಅಮಿತ್ ಶಾ ಅಂದು ಅಂತಿಮ ರೂಪ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 25ಕ್ಕೆ ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಅಮಿತ್ ಶಾ ಅವರು ದಿನಪೂರ್ತಿ ಸಭೆ ನಡೆಸಲಿದ್ದಾರೆ. ರಾಜ್ಯದ ಪ್ರಮುಖ ನಾಯಕರ ಜೊತೆ, ರಾಜ್ಯ ಬಿಜೆಪಿ ಮಂಡಳಿ ಹಾಗೂ ವಿವಿಧ ಜಿಲ್ಲಾ ಮುಖಂಡರ ಜೊತೆಯೂ ಅಮಿತ್ ಶಾ ಸಭೆ ನಡೆಸಲಿದ್ದಾರೆ.

ರಾಜ್ಯ ರಾಜಕಾರಣ ಚರ್ಚೆ
ಲೋಕಸಭೆ ಚುನಾವಣೆಗೆ ಪ್ರಚಾರ ತಂತ್ರದ ಜೊತೆಗೆ, ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು, ಹೊಸಬರಿಗೆ ಮಣೆ ಹಾಕಬೇಕಾ ಅಥವಾ ಹಳಬರನ್ನೇ ಮುಂದುವರೆಸಬೇಕಾ? ಈ ಬಾರಿ ಚುನಾವಣೆಯಲ್ಲಿ ಯಾವ ವಿಷಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು ಇನ್ನೂ ಹಲವು ವಿಷಯಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ.

ಉತ್ತರ ಭಾರತದಲ್ಲಿ ಕಡಿಮೆ ಸೀಟು
ಉತ್ತರ ಭಾರತದಲ್ಲಿ ಕಳೆದ ಬಾರಿ ಸಿಕ್ಕಷ್ಟು ಅಭೂತಪೂರ್ವ ಗೆಲುವು ಈ ಬಾರಿ ಬಿಜೆಪಿಗೆ ದೊರೆಯದ ಸಾಧ್ಯತೆ ಇರುವ ಕಾರಣ ಅಮಿತ್ ಶಾ ಈ ಬಾರಿ ದಕ್ಷಿಣದತ್ತ ಹೆಚ್ಚಿನ ದೃಷ್ಠಿ ನೆಟ್ಟಿದ್ದಾರೆ ಎನ್ನಲಾಗಿದೆ. ಅಲ್ಲಿ ಕಡಿಮೆಯಾಗುವ ಸೀಟುಗಳನ್ನು ದಕ್ಷಿಣದಿಂದ ಸಮದೂಗಿಸುವ ಯತ್ನವನ್ನು ಅಮಿತ್ ಶಾ ಮಾಡುತ್ತಿದ್ದಾರೆ.

ದಕ್ಷಿಣದ ಹಲವು ಪ್ರಮುಖರ ಬೆಂಬಲ ಗಿಟ್ಟಿಸಿದೆ ಬಿಜೆಪಿ
ಈಗಾಗಲೇ ಕೇರಳದ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರನ್ನು ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿ. ತೆಲಂಗಾಣದ ಕೆಸಿಆರ್, ಆಂಧ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ರಜನೀಕಾಂತ್ ಅವರುಗಳ ಬೆಂಬಲ ಪಡೆಯಲು ಮಾತುಕತೆ ಅಂತಿಮ ಹಂತಕ್ಕೆ ತಂದಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಮೀರಿ ಗೆಲ್ಲುವ ತಂತ್ರ
ಹಾಗಾಗಿ ದಕ್ಷಿಣದಲ್ಲಿ ಬಿಜೆಪಿ ಹೆಚ್ಚು ಶಕ್ತವಾಗಿರುವ ಕರ್ನಾಟಕದ ಫಲಿತಾಂಶ ಸಹ ಬಿಜೆಪಿಗೆ ಅತ್ಯಂತ ಪ್ರಮುಖವಾಗಿದ್ದು, ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆಯನ್ನು ಮೀರಿ ಹೆಚ್ಚು ಸ್ಥಾನ ಗೆಲ್ಲುವುದು ಹೇಗೆ ಎಂಬುದನ್ನು ಬಿಜೆಪಿ ಲೆಕ್ಕಾಚಾರ ಮಾಡುತ್ತಿದೆ.












Click it and Unblock the Notifications