ನಾವು ಅಂಬೇಡ್ಕರ್ ಹೆಸರನ್ನೇ ಜಪಿಸುತ್ತೇವೆ ನಿಮಗೇನು ಸಮಸ್ಯೆ ಎಂದ ಪ್ರಿಯಾಂಕ್ ಖರ್ಗೆ
ಡಾ. ಬಿ. ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಮಾತುಗಳು ದೇಶಾದ್ಯಂತ ಭಾರಿ ವಿರೋಧಕ್ಕೆ ಕಾರಣವಾಗಿದೆ. ರಾಜ್ಯದಲ್ಲೂ ಅಮಿತ್ ಶಾ ಹೇಳಿಕೆ ಬಗ್ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಎಲ್ಲಾ ಶಾಸಕರ ಸೀಟಿನ ಮುಂದೆ ಅಂಬೇಡ್ಕರ್ ಭಾವಚಿತ್ರವನ್ನು ಇಡುವ ಮೂಲಕ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಕಲಾಪದಲ್ಲಿ ಕೂಡ ಅಮಿತ್ ಶಾ ಹೇಳಿಕೆ ಸದ್ದು ಮಾಡಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿದೆ. ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಘರ್ಷಣೆಯಾಗಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಕೆಟ್ಟ ಪದದಲ್ಲಿ ನಿಂದಿಸಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

ನಾವು ಅಂಬೇಡ್ಕರ್ ಜಪ ಮಾಡುತ್ತೇವೆ
ಅಧಿವೇಶನದಲ್ಲಿ ಅಂಬೇಡ್ಕರ್ ಫೋಟೊ ಇಟ್ಟಿರುವ ಚಿತ್ರವನ್ನು ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕ ವಿಧಾನಸಭೆಯಲ್ಲಿರುವ ಸೀಟುಗಳು ಕೂಡ ಅಂಬೇಡ್ಕರ್, ಅಂಬೇಡ್ಕರ್ ಎಂದು ಜಪಿಸುತ್ತಿವೆ. ನಮ್ಮ ಈ ಫ್ಯಾಷನ್‌ನಿಂದ ನಿಮಗೆ ಏನಾದರೂ ಸಮಸ್ಯೆ ಇದೆಯೇ ಎಂದು ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಅಮಿತ್ ಶಾ ಹೇಳಿದ್ದೇನು?
ರಾಜ್ಯಸಭೆಯಲ್ಲಿ ಚರ್ಚೆ ನಡೆಯುವ ಸಂದರ್ಭದಲ್ಲಿ, "ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಹೇಳುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇದರ ಬದಲು ಹಲವು ಬಾರಿ ದೇವರ ಸ್ಮರಣೆ ಮಾಡಿದರೆ ಸ್ವರ್ಗ ಸಿಗುತ್ತಿತ್ತು" ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ತಮ್ಮ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಸಮರ್ಥನೆ ನೀಡಿರುವ ಅಮಿತ್ ಶಾ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಅಂಬೇಡ್ಕರ್ ಅವರಿಗೆ ನಾನು ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ಹೋರಾಟ ಮುಂದುವರೆಸಿದ್ದು, ಅಮಿತ್ ಶಾ ಕ್ಷಮೆ ಕೇಳಲೇಬೇಕು ಮತ್ತು ರಾಜೀನಾಮೆ ಕೊಡಬೇಕು ಎಂದು ಪಟ್ಟು ಹಿಡಿದಿವೆ.
ಸಿದ್ದರಾಮಯ್ಯ ಟೀಕೆ
ಅಮಿತ್ ಶಾ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಟುವಾಗಿ ಟೀಕಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು "ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೆ, ಸೂರ್ಯ ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರುತ್ತದೆ. ನೀವು ಎಷ್ಟೇ ತುಚ್ಛವಾಗಿ ಕಂಡರೂ ಪುಟಿದು ಮೇಲೆದ್ದು ಬಂದು ನಮ್ಮ ಮುನ್ನಡೆಯ ಹಾದಿಗೆ ಬೆಳಕಾಗುತ್ತಾರೆ. ನಿಮ್ಮ ದುರಹಂಕಾರದ ಮಾತುಗಳಿಗೆ ನಿಮ್ಮ ಚೇಲಾಗಳು ಮೇಜುಕುಟ್ಟಿ ಸಂಭ್ರಮಿಸಿರಬಹುದು. ಆದರೆ ಅಂಬೇಡ್ಕರ್ ಅವರಿಂದ ಘನತೆಯ ಬದುಕು ಪಡೆದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಮಿತ್ ಶಾ ಹೇಳುವ ವ್ಯಸನ ನಮ್ಮ ಪಾಲಿನ ಅಂಬೇಡ್ಕರ್ ಸ್ಮರಣೆ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿ ನಮಗೆ ಸ್ಥಾನಮಾನ, ಗೌರವ ಮತ್ತು ಜನಸೇವೆ ಮಾಡಲು ಅವಕಾಶ ನೀಡಿದೆ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ಕೊಟ್ಟಿರುವ ಸಂವಿಧಾನ ಇಲ್ಲದೆ ಇರುತ್ತಿದ್ದರೆ ಗೃಹಸಚಿವರಾಗಿ ಬದುಕು ಕೊಟ್ಟ ಮಹಾತ್ಮನನ್ನೇ ತುಚ್ಛೀಕರಿಸುವ ಅವಕಾಶ ಅವರಿಗೂ ಸಿಗುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.












Click it and Unblock the Notifications