• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಸಹಾಯದೊಂದಿಗೆ ಮತದಾರರ ಮಾಹಿತಿ ಕಳ್ಳತನ ಮಾಡಿದ ಎನ್‌ಜಿಒ: ತನಿಖೆಯಿಂದ ಬಹಿರಂಗ

|
Google Oneindia Kannada News

ಬೆಂಗಳೂರು, ನವೆಂಬರ್ 17: ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ಆ ಮೂಲಕ ಬೆಂಗಳೂರಿನ ಮತದಾರರ ಮಾಹಿತಿಯನ್ನು ಕಳವು ಮಾಡಲಾಗಿದೆ ಎಂಬ ಆರೋಪ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೇಳಿಬಂದಿದೆ.

'ದಿ ನ್ಯೂಸ್ ಮಿನಿಟ್' ಮಾಧ್ಯಮ ಸಂಸ್ಥೆಯ 6 ಪತ್ರಕರ್ತರು ಮಾಡಿದ ತನಿಖಾ ವರದಿಯನ್ನು ಆಧರಿಸಿ ಕಾಂಗ್ರೆಸ್‌ ಈ ಆರೋಪ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಆಗ್ರಹಿಸಿದೆ.

ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್‌ಗೆ ಸುಪ್ರೀಂಕೋರ್ಟ್‌ನಿಂದ ಗುಡ್ ನ್ಯೂಸ್! ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್‌ಗೆ ಸುಪ್ರೀಂಕೋರ್ಟ್‌ನಿಂದ ಗುಡ್ ನ್ಯೂಸ್!

ಮತದಾರರ ಪಟ್ಟಿ ನವೀಕರಣ ಕಾರ್ಯಾಚರಣೆಗೆ ಬಿಬಿಎಂಪಿ ನೀಡಿದ ಆದೇಶವನ್ನು ಎನ್‌ಜಿಒ ದುರುಪಯೋಗಪಡಿಸಿಕೊಂಡಿದೆ. ಮತದಾರರಿಗೆ ಯಾವುದೇ ಸಂಶಯ ಬರಬಾರದು ಎಂದು ತನ್ನ ಫೀಲ್ಡ್‌ ಏಜೆಂಟರನ್ನೇ ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಹಲವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ. ಚುನಾವಣಾ ಆಯೋಗ, ಬಿಬಿಎಂಪಿ ಅಧೀನದಲ್ಲಿಯೇ ಈ ಅಕ್ರಮ ನಡೆದಿರುವುದು ಮಾಧ್ಯಮ ಸಂಸ್ಥೆಯ ತನಿಖಾ ವರದಿಯಲ್ಲಿ ಬಯಲಾಗಿದೆ.

'ದಿ ನ್ಯೂಸ್‌ ಮಿನಿಟ್‌' ತನಿಖೆಯಲ್ಲಿ ಬಹಿರಂಗವಾಗಿದ್ದೇನು?

'ದಿ ನ್ಯೂಸ್‌ ಮಿನಿಟ್‌' ತನಿಖೆಯಲ್ಲಿ ಬಹಿರಂಗವಾಗಿದ್ದೇನು?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಪರಿಷ್ಕರಿಸಲು ಚುನಾವಣಾ ಆಯೋಗ ಮುಂದಾಗಿತ್ತು. ಇದಕ್ಕಾಗಿ ವಿಶೇಷ ಮತದಾರರ ಜಾಗೃತಿ ಅಭಿಯಾನ SVEEP (Systematic Voters Education and Electoral Participation) ನಡೆಸಲು ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿದೆ. ಆದರೆ, ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ. ತನ್ನ ನೂರಾರು ಏಜೆಂಟರಿಗೆ ನಕಲಿ ಐಡಿ ಕಾರ್ಡ್‌ಗಳನ್ನು ನೀಡಿ, ಆ ಐಡಿ ಕಾರ್ಡುಗಳಲ್ಲಿ ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಎಂದು ನಮೂದಿಸಿದೆ. ಆ ಮೂಲಕ ಮಾಹಿತಿಯನ್ನು ಕಲೆಹಾಕಲಾಗಿದೆ.

ಬೂತ್‌ ಮಟ್ಟದ ಅಧಿಕಾರಿ ಓರ್ವ ತಳಮಟ್ಟದ ಅಧಿಕಾರಿಯಾಗಿದ್ದು, ಅವರು ಸರ್ಕಾರಿ, ಅರೆ-ಸರ್ಕಾರಿ ಅಥವಾ ನಿವೃತ್ತ ಸರ್ಕಾರಿ ನೌಕರರಾಗಿರಬೇಕು. ಅದಲ್ಲದೇ ಬಿಎಲ್‌ಒಗಳು ತಮ್ಮನ್ನು ನಿಯೋಜಿಸಲಾದ ಮತಗಟ್ಟೆಯ ನಿವಾಸಿಗಳಾಗಿರಬೇಕು. ಆದರೆ, ಚಿಲುಮೆ ತನ್ನ ಏಜೆಂಟರಿಗೆ ಬಿಎಲ್‌ಒ ಎಂದು ನಕಲಿ ಗುರುತಿನ ಚೀಟಿ ನೀಡಿ ಮಾಹಿತಿ ಸಂಗ್ರಹಿಸಲು ಕ್ಷೇತ್ರಗಳಿಗೆ ಕಳಿಸಿದೆ.

ಚಿಲುಮೆಯ ಏಜೆಂಟರು, ಮತದಾರರಿಂದ ಅವರ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರಗಳನ್ನು ಕಲೆಹಾಕಿದ್ದಾರೆ. ಇದಲ್ಲದೇ ವೈಯಕ್ತಿಕ ಮಾಹಿತಿ, ಆಧಾರ್ ಸಂಖ್ಯೆ, ಮೊಬೈಲ್‌ ಸಂಖ್ಯೆ, ವಿಳಾಸ, ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಕೂಡ ಸಂಗ್ರಹಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಭಾಗವಾಗಿ ನಾಗರಿಕರಿಂದ ಪಡೆದಿರುವ ಈ ಮಾಹಿತಿಯು ಬಹಳ ಮಹತ್ವದ್ದಾಗಿದೆ. ಅದಲ್ಲದೇ ಈ ಡೇಟಾ ಭಾರೀ ಹಣಕಾಸಿನ ಮೌಲ್ಯವನ್ನು ಹೊಂದಿದ್ದು, ಇದನ್ನು ಖರೀದಿಸಲು ಖಾಸಗಿ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ. ಯಾವುದೇ ವಿಧಾನದಿಂದ ಚುನಾವಣೆಯಲ್ಲಿ ಗೆಲ್ಲಲು ಹವಣಿಸುತ್ತಿರುವ ರಾಜಕಾರಣಿಗಳಿಗೆ ಈ ಡೇಟಾಗಳು ಮುಖ್ಯವಾಗಿದೆ.

ಡೇಟಾ ಕಳ್ಳತನ ಪ್ರಕರಣದ ಹಿಂದೆ ಬಿದ್ದ ವರದಿಗಾರರು

ಡೇಟಾ ಕಳ್ಳತನ ಪ್ರಕರಣದ ಹಿಂದೆ ಬಿದ್ದ ವರದಿಗಾರರು

ಈ ಪ್ರಕರಣದ ಹಿಂದೆ 'ದಿ ನ್ಯೂಸ್ ಮಿನಿಟ್' ವರದಿಗಾರರು ಬೆನ್ನು ಹತ್ತುತ್ತಿದ್ದಂತೆ, ಬಿಬಿಎಂಪಿ ತರಾತುರಿಯಲ್ಲಿ ಎನ್‌ಜಿಒಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದೆ. ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಕಾರಣಗಳನ್ನು ಅಧಿಕಾರಿಗಳು ಹೊರಹಾಕಿಲ್ಲ. ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ರದ್ದತಿ ಆದೇಶದ ಹೊರತಾಗಿಯೂ, ಚಿಲುಮೆ ಮತ್ತು ಅದರ ಉಪಗುತ್ತಿಗೆದಾರರಿಂದ ಡೇಟಾವನ್ನು ಹಿಂಪಡೆಯಲಾಗಿಲ್ಲ ಎಂದು ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹಲವಾರು ವಾರಗಳ ನಿರಂತರ ಪರಿಶ್ರಮದ ಬಳಿಕ, ವರದಿಗಾರರ ತಂಡವು ಚಿಲುಮೆ ನೇಮಿಸಿದ ಕ್ಷೇತ್ರ ಏಜೆಂಟ್‌ಗಳೊಂದಿಗೆ ಸಂಪರ್ಕವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಏಜೆಂಟರುಗಳು ತಮಗೆ ನೀಡಲಾದ ನಕಲಿ ಗುರುತಿನ ಚೀಟಿಗಳನ್ನು ವರದಿಗಾರರಿಗೆ ತೋರಿಸಿದ್ದು ಮಾತ್ರವಲ್ಲದೆ, ತಮ್ಮನ್ನು ಕಾನೂನುಬದ್ಧ ಸರ್ಕಾರದ ಕಾರ್ಯಕ್ರಮದ ಭಾಗವೆಂದು ನಂಬಿಸಿ ತಪ್ಪುದಾರಿಗೆಳೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳ ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಿಂದ ಬಂದಿರುವ ಅವರು ಎಷ್ಟು ಡೇಟಾವನ್ನು ಸಂಗ್ರಹಿಸಿದ್ದಾರೆ ಎಂಬುದರ ಆಧಾರದ ಮೇಲೆ 15,000 ರಿಂದ 25,000 ರೂಪಾಯಿಗಳವರೆಗೆ ಸಂಬಳದ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾರೆ. ಅದಾಗ್ಯೂ, ಅವರಲ್ಲಿ ಹಲವರು ವೇತನ ಪಾವತಿಸದ ಕಾರಣ ಕೆಲಸ ತೊರೆದಿದ್ದಾರೆ. ಮಾತ್ರವಲ್ಲ ತಮ್ಮ ಭಯಾನಕ ಕೆಲಸದ ಪರಿಸ್ಥಿತಿಗಳ ಬಗ್ಗೆ ದೂರಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯಿಂದ ಬಹಿರಂಗಗೊಂಡ ಭಯಾನಕ ವಿಚಾರ

ತನಿಖೆಯಿಂದ ಬಹಿರಂಗಗೊಂಡ ಭಯಾನಕ ವಿಚಾರ

ತನಿಖೆಯಿಂದ ಹೊರಬಿದ್ದಿರುವ ಮಾಹಿತಿ ಪ್ರಕಾರ, ಚಿಲುಮೆ ಸಂಸ್ಥೆಯು SVEEP ಗಾಗಿ ಉಚಿತ ಸ್ವಯಂಪ್ರೇರಿತ ಸೇವೆಯನ್ನು ನೀಡುತ್ತದೆ ಎಂದು ಚುನಾವಣಾ ಆಯೋಗ ಮತ್ತು BBMP ಯನ್ನು ಸಂಪರ್ಕಿಸಿದೆ. ಚಿಲುಮೆ ಅವರ ಮನವಿ ಆಧರಿಸಿ, ಈ ವರ್ಷದ ಜನವರಿ 29 ರಂದು, ಮಹದೇವಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ERO) ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಬಿಬಿಎಂಪಿಗೆ ಸಹಾಯ ಮಾಡಲು ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಲುಮೆಗೆ ಅನುಮತಿ ನೀಡಿದ್ದಾರೆ.

ಚುನಾವಣಾ ನೋಂದಣಿ ಅಧಿಕಾರಿ ಆದೇಶದಲ್ಲಿ ಚಿಲುಮೆ ಯಾವುದೇ ರಾಜಕೀಯ ಸಂಘಟನೆಯೊಂದಿಗೆ ಸಂಬಂಧ ಹೊಂದಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಎನ್‌ಜಿಒ ಹಿಂದೆ ಇರುವ ಜನರ ಹಿನ್ನೆಲೆಯನ್ನು ಹುಡುಕಿದಾಗ, ಅವರು ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಚಾರಗಳನ್ನು ನಿರ್ವಹಿಸುವ ಕಂಪನಿಗಳನ್ನು ಸಹ ನಡೆಸುತ್ತಿರುವುದು ತಿಳಿದುಬಂದಿದೆ. ಚಿಲುಮೆ ಎಂಬ ಎನ್‌ಜಿಒ ಅನ್ನು ನೆಲಮಂಗಲ ಮೂಲದ ಕೃಷ್ಣಪ್ಪ ರವಿಕುಮಾರ್ ಸೇರಿದಂತೆ ಐವರು ಜುಲೈ 2013 ರಲ್ಲಿ ನೋಂದಾಯಿಸಿದ್ದಾರೆ. ರವಿಕುಮಾರ್ ಮತ್ತು ಇತರ ಇಬ್ಬರು ಸೇರಿ ಡಿಸೆಂಬರ್ 2017 ರಲ್ಲಿ 'ಡಿಎಪಿ ಹೊಂಬಾಳೆ' ಎಂಬ ಖಾಸಗಿ ಕಂಪನಿಯನ್ನು ಸಹ ಪ್ರಾರಂಭಿಸಿದ್ದರು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಡಿಎಪಿ ಹೊಂಬಾಳೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಕಂಡುಬರದಿದ್ದರೂ, ಜನವರಿ 2018 ರಲ್ಲಿ, ಈ ಮೂವರು ನಿರ್ದೇಶಕರು ಚಿಲುಮೆ ಎಂಟರ್‌ಪ್ರೈಸಸ್ ಪ್ರೈ. ಲಿಮಿಟೆಡ್ ಎಂಬ ಹೊಸ ಸಂಸ್ಥೆಯನ್ನು ಆರಂಭಿಸಿದ್ದಾರೆ ಎಂಬುದು ಕಂಡುಬಂದಿದೆ.

ಮತದಾರರ ಪ್ರತಿ ಮಾಹಿತಿ ಸಂಗ್ರಹ

ಮತದಾರರ ಪ್ರತಿ ಮಾಹಿತಿ ಸಂಗ್ರಹ

ಚಿಲುಮೆಯಿಂದ ನಿಯೋಜಿಸಲಾದ ಏಜೆಂಟ್‌ಗಳು ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಾಗ ಯಾವುದೇ ಸರ್ಕಾರಿ ಅಧಿಕಾರಿಗಳು ಜೊತೆಗಿರಲಿಲ್ಲ. ಇನ್ನೂ ಮಹದೇವಪುರ, ಕೊಡಿಗೇಹಳ್ಳಿ ಮತ್ತು ಗರುಡಾಚಾರ್ ಪಾಳ್ಯದಂತಹ ಪ್ರದೇಶಗಳಲ್ಲಿ ಹಲವಾರು ಏಜೆಂಟರು, ತಾವು ಸಮೀಕ್ಷೆ ನಡೆಸಿದ ಪ್ರದೇಶಗಳ ವಿವರವಾದ ನಕ್ಷೆಗಳನ್ನು ತೋರಿಸಿದ್ದಾರೆ. ಪ್ರತಿಯೊಂದು ಘಟಕವು ವಾಣಿಜ್ಯ ಅಥವಾ ವಸತಿ ಆಸ್ತಿಯೇ ಮತ್ತು ಅದು ಖಾಲಿಯಾಗಿದೆಯೇ ಅಥವಾ ಅದರಲ್ಲಿ ಯಾರಾದರೂ ಇದ್ದಾರೆಯೇ ಎಂಬುದನ್ನು ಆಧರಿಸಿ ಗುರುತಿಸಿದ್ದರು. ಈ ನಕ್ಷೆಗಳನ್ನು ನಂಬಲಸಾಧ್ಯವಾಗುವಷ್ಟರ ಮಟ್ಟಿಗೆ ವಿವರವಾಗಿ ಗುರುತಿಸಿದ್ದಾರೆ ಎನ್ನಲಾಗಿದೆ.

ಆಗಸ್ಟ್ 20 ರಂದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಲು ಚಿಲುಮೆಗೆ ಅನುಮತಿಯನ್ನು ವಿಸ್ತರಿಸಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತರು ಸಹಿ ಮಾಡಿರುವ ಆದೇಶದಲ್ಲಿ, 'ಮತದಾರರ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ, ಮತದಾರರ ನೋಂದಣಿ, ಮತದಾರರನ್ನು ಪಟ್ಟಿಗೆ ಜೋಡಿಸುವ ಕೆಲಸಗಳಿಗೆ ಹಾಗೂ ಮತದಾರರ ಸಹಾಯವಾಣಿ ಆ್ಯಪ್ ಮತ್ತು ಗರುಡ ಆಪ್ ಮೂಲಕ ಆಧಾರ್ ಕಾರ್ಡ್‌ಗೆ ಗುರುತಿನ ಚೀಟಿಗೆ ಲಿಂಕ್‌ ಮಾಡಲು' ಚಿಲುಮೆಗೆ ಅನುಮತಿ ನೀಡಲಾಗಿದೆ.

ಇನ್ನೂ ಚಿಲುಮೆ ಸಂಸ್ಥೆ ವಿರುದ್ದವಾಗಿ ಹಲವಾರು ದೂರು ಬಂದ ನಂತರ, ಖಾಸಗಿ ಏಜೆನ್ಸಿಯು ಮತದಾರರಿಂದ ವೈಯಕ್ತಿಕ ಡೇಟಾವನ್ನು ಹೇಗೆ ಸಂಗ್ರಹಿಸಬಹುದು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಬಿಬಿಎಂಪಿ ಚಿಲುಮೆಗೆ ಅವರ ಅನುಮತಿಯನ್ನು ರದ್ದುಗೊಳಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಯಾವುದೇ ಸಂಸ್ಥೆಗೆ ಸಮೀಕ್ಷೆ ನಡೆಸುವ ಅನುಮತಿ ರದ್ದು

ಯಾವುದೇ ಸಂಸ್ಥೆಗೆ ಸಮೀಕ್ಷೆ ನಡೆಸುವ ಅನುಮತಿ ರದ್ದು

ಕೆಲವು ನ್ಯೂಸ್‌ ಪೋರ್ಟಲ್ ಮತ್ತು ದೃಶ್ಯಮಾಧ್ಯಮಗಳಲ್ಲಿ ಮತದಾರರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ, ಬಿ.ಬಿ.ಎಂ.ಪಿ., ರವರು ಯಾವುದೇ ಸಂಸ್ಥೆಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿರುವುದಿಲ್ಲ. ಸರ್ಕಾರೇತರ ಸಂಸ್ಥೆ ಚುಲುಮೆರವರಿಗೆ ಮತದಾರರ ಜಾಗೃತಿ ಅಭಿಯಾನದ ಬಗ್ಗೆ ಅರಿವು ಮೂಡಿಸಲು ನೀಡಿದ್ದ ಅನುಮತಿಯನ್ನು ದೂರು ಬಂದ ಕೂಡಲೇ ಜಿಲ್ಲಾ ಚುನಾವಣಾಧಿಕಾರಿ, ಬಿ.ಬಿ.ಎಂ.ಪಿ., ರವರು ರದ್ದುಪಡಿಸಿರುತ್ತಾರೆ. ಬೂತ್ ಮಟ್ಟದ ಅಧಿಕಾರಿ ಗುರುತಿನ ಚೀಟಿ ದುರುಪಯೋಗ ಸಂಬಂಧ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿರವರು ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ತನಿಖೆ ನಡೆಸಿ, ಉಲ್ಲಂಘನೆಯ ಪ್ರಕರಣ ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ಜಿಲ್ಲಾ ಚುನಾವಣಾಧಿಕಾರಿ, ಬಿ.ಬಿ.ಎಂ.ಪಿ., ರವರಿಗೆ ಸೂಚನೆ ನೀಡಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

English summary
Chilume NGO has covertly collected personal information from thousands of voters in Bengaluru. All You Need To Know Voter Id Scam In Bengaluru, How NGO Theft Voter Data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X