ಸರ್ವಪಕ್ಷಗಳ ಸಭೆ; ಬಿಜೆಪಿಯ ಮೂವರು ಮಾಜಿ ಸಿಎಂಗಳಿಗೆ ಆಹ್ವಾನ!
ಬೆಂಗಳೂರು, ಆಗಸ್ಟ್ 22: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 105 ಅಡಿಗೆ ಕುಸಿದಿದ್ದು, ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಕಾವೇರಿ ವಿಚಾರದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 23ರ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಆದರೆ ರಾಜ್ಯದಲ್ಲಿ ಪ್ರತಿಪಕ್ಷದ ನಾಯಕರೇ ಇಲ್ಲದ ಕಾರಣ ಸರ್ವಪಕ್ಷಗಳ ಸಭೆಗೆ ಯಾರು ಹಾಜರಾಗುತ್ತಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷಗಳ ಸಭೆಗೆ ಬಿಜೆಪಿಯಲ್ಲಿರುವ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ. ಬಸವರಾಜ ಬೊಮ್ಮಾಯಿ ಮತ್ತು ಬಿ. ಎಸ್. ಯಡಿಯೂರಪ್ಪಗೆ ಪತ್ರದ ಮೂಲಕ ಆಹ್ವಾನ ನೀಡಿದ್ದಾರೆ. ದೂರವಾಣಿ ಕರೆ ಮಾಡಿ, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರನ್ನು ಸಭೆಗೆ ಆಹ್ವಾನಿಸಿದ್ದಾರೆ.
ನೀರು ಬಿಡುವ ವಿಚಾರದಲ್ಲಿ ರಾಜಕೀಯ; ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ರಾಜಕೀಯಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಮಳೆ ಕೊರತೆಯ ಕಾರಣ ಡ್ಯಾಂಗಳು ತುಂಬಿಲ್ಲ. ಇಂತಹ ಸಂದರ್ಭದಲ್ಲಿ ನೀರು ಹರಿಸುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಮಂಡ್ಯದಲ್ಲಿ ಸೋಮವಾರ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಸಹ ಮಾಡಿದ್ದರು.
ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಖಾತೆ ಸಚಿವ ಡಿ. ಕೆ. ಶಿವಕುಮಾರ್ ಕಾವೇರಿ ವಿಚಾರದ ಬಗ್ಗೆ ವಿವರಣೆ ನೀಡಿ ಟ್ವೀಟ್ ಮಾಡಿದ್ದಾರೆ. 'ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪ್ರತ್ಯೇಕ ಪೀಠ ರಚಿಸಲು ತೀರ್ಮಾನಿಸಿದೆ. ವಿಪಕ್ಷದವರು ಸಾಕಷ್ಟು ಟೀಕೆ, ಟಿಪ್ಪಣಿ ಮಾಡಿದ್ದಾರೆ. ಅವರ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದಾರೆ ಎಲ್ಲದರ ಮಾಹಿತಿಯಿದೆ' ಎಂದು ತಿರುಗೇಟು ಕೊಟ್ಟಿದ್ದಾರೆ.
'ತ್ರಿಸದಸ್ಯ ಪೀಠ ಆದೇಶ ಮಾಡಿದೆ. ಆದರೆ ನಮ್ಮ ವಾಸ್ತವ ಪರಿಸ್ಥಿತಿ ಏನು ಎಂಬುದನ್ನು ಮುಂದಿಡುತ್ತಿದ್ದೇವೆ. ಕೆಆರ್‌ಎಸ್ 22 ಟಿಎಂಸಿ, ಕಬಿನಿ 7 ಟಿಎಂಸಿ, ಹಾರಂಗಿಯಲ್ಲಿ 6 ಟಿಎಂಸಿ, ಹೇಮಾವತಿಯಲ್ಲಿ 20 ಟಿಎಂಸಿ ನೀರಿದೆ' ಎಂದು ಟ್ವೀಟ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.
'ಬುಧವಾರ ಸಭೆ ಕರೆಯಲಾಗಿದೆ, ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆಯೋ ಅದರಂತೆ ಹೋಗುತ್ತೀವಿ. ಸರ್ವಪಕ್ಷ ನಿಯೋಗ ಹೋಗಲು ಸೂಚಿಸಿದರೆ ಅದಕ್ಕೂ ಸಿದ್ಧ. ಇವತ್ತು ಏನಾಗುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಏನು ಮಾಡಬೇಕೆಂದು ಎಲ್ಲಾ ಲೀಗಲ್ ತಂಡದ ಜತೆ ಚರ್ಚಿಸುತ್ತಿದ್ದೇವೆ. ಸರ್ವಪಕ್ಷ ಸಭೆಯಲ್ಲೂ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ತಮಿಳುನಾಡಿಗೆ ಹೆಚ್ಚಿನ ನೀರನ್ನು ಹರಿಬಿಟ್ಟಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
'ರಾಜ್ಯದ ರೈತರನ್ನು ಕಾಪಾಡಬೇಕು ಅದು ನಮ್ಮ ಉದ್ದೇಶ. ವಿಪಕ್ಷದವರು ಏನು ಬೇಕಾದರು ಮಾತನಾಡಲಿ, ಅವರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಈ ಹಿಂದೆ ಇವರೆಲ್ಲಾ ಎಷ್ಟು ನೀರು ಕೊಟ್ಟಿದ್ದರು, ಎಂಬುದು ತಿಳಿದಿದೆ. ಕಳೆದ 30-40 ವರ್ಷ ಈ ರೀತಿಯ ಸಮಸ್ಯೆಯಾಗಿರಲಿಲ್ಲ. ನಮ್ಮ ಬಳಿ ಈಗ ಇರುವುದೇ ಕೇವಲ 55 ಟಿಎಂಸಿ ನೀರು. ಅವರಿಗೆ 177.8 ಟಿಎಂಸಿ ಬಿಡಬೇಕು ಅದರ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಗುತ್ತಿದೆ' ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಎಚ್‌ಡಿಕೆಗೂ ಆಹ್ವಾನ; ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದಾ ಟೀಕೆ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿಗೆ ಸಹ ಸರ್ವಪಕ್ಷಗಳ ಸಭೆಗೆ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮಾರಸ್ವಾಮಿಗೆ ಸಭೆಗೆ ಬರುವಂತೆ ಆಹ್ವಾನ ಕಳಿಸಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಸಭೆಗೆ ಆಗಮಿಸುತ್ತಾರೆಯೋ? ಅಥವ ಜೆಡಿಎಸ್ ಪಕ್ಷದ ಪರವಾಗಿ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಸಚಿವ ಎಚ್. ಡಿ. ರೇವಣ್ಣ ಆಗಮಿಸುತ್ತಾರೋ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications