ಬಿಯರ್ ಬಾಟಲ್ ಓಪನ್ ಆದಂತೆ ಸರ್ಕಾರದ ಬೊಕ್ಕಸವೂ ಫುಲ್; ₹22 ಸಾವಿರ ಕೋಟಿ ಆದಾಯ!
ಬೆಂಗಳೂರು: ಕರ್ನಾಟಕದಲ್ಲಿ ಬಿಯರ್ ಮಾರಾಟಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. 2026ರ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಿಯರ್ ಮಾರಾಟ 49.69% ಏರಿಕೆಯಾಗಿದೆ. ಕಡಿಮೆ ಅಬಕಾರಿ ಸುಂಕ ಹಾಗೂ ದೀರ್ಘಕಾಲ ಮುಂದುವರಿದ ಬಿಸಿಲಿನ ವಾತಾವರಣದಿಂದ ಬಿಯರ್ ಬೇಡಿಕೆ ಹೆಚ್ಚಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
2026ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕರ್ನಾಟಕದಲ್ಲಿ 126.68 ಲಕ್ಷ ಕೇಸ್ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 84.63 ಲಕ್ಷ ಕೇಸ್ ಬಾಕ್ಸ್ ಮಾರಾಟವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 42 ಲಕ್ಷ ಕೇಸ್ ಬಾಕ್ಸ್ ಹೆಚ್ಚುವರಿಯಾಗಿ ಮಾರಾಟವಾಗಿದೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಮೊದಲ ಆರು ತಿಂಗಳ ಅವಧಿಯಲ್ಲೂ ಬಿಯರ್ ಮಾರಾಟದಲ್ಲಿ ಭರ್ಜರಿ ಬೆಳವಣಿಗೆ ಕಂಡುಬಂದಿದೆ. 2026ರ ಮೊದಲಾರ್ಧದಲ್ಲಿ ಒಟ್ಟು 275.96 ಲಕ್ಷ ಕೇಸ್ ಬಾಕ್ಸ್ ಬಿಯರ್ ಮಾರಾಟವಾಗಿದ್ದು, 2025ರ ಇದೇ ಅವಧಿಯ 195.27 ಲಕ್ಷ ಕೇಸ್ ಬಾಕ್ಸ್‌ಗೆ ಹೋಲಿಸಿದರೆ 41.32% ಬೆಳವಣಿಗೆ ದಾಖಲಾಗಿದೆ.
ಬಿಯರ್‌ನಿಂದಲೇ ₹3,377 ಕೋಟಿ ಆದಾಯ
ಬಿಯರ್ ಮಾರಾಟದ ಪ್ರಮಾಣ ಮಾತ್ರವಲ್ಲದೆ, ಅದರಿಂದ ಸರ್ಕಾರಕ್ಕೆ ಬಂದ ಆದಾಯವೂ ಹೆಚ್ಚಾಗಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಬಿಯರ್‌ನಿಂದ ₹3,377.88 ಕೋಟಿ ಆದಾಯ ಸಂಗ್ರಹವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹2,836.64 ಕೋಟಿ ಆದಾಯ ಬಂದಿತ್ತು. ಅಂದರೆ ಬಿಯರ್ ಆದಾಯದಲ್ಲಿ 19.08% ಏರಿಕೆ ದಾಖಲಾಗಿದೆ.
ಬಿಯರ್ ಮಾರಾಟದಲ್ಲಿನ ಈ ಹೆಚ್ಚಳ ಕರ್ನಾಟಕದ ಒಟ್ಟಾರೆ ಅಬಕಾರಿ ಆದಾಯದ ಮೇಲೂ ಪರಿಣಾಮ ಬೀರಿದೆ. 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದ ಒಟ್ಟು ಅಬಕಾರಿ ಆದಾಯ ₹22,191.63 ಕೋಟಿ ತಲುಪಿದೆ. 2025ರ ಇದೇ ಅವಧಿಯಲ್ಲಿ ₹19,570.23 ಕೋಟಿ ಸಂಗ್ರಹವಾಗಿತ್ತು. ಈ ಮೂಲಕ ಅಬಕಾರಿ ಆದಾಯದಲ್ಲಿ 13.39% ಬೆಳವಣಿಗೆ ಕಂಡುಬಂದಿದೆ.
ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಎರಡೂ ತ್ರೈಮಾಸಿಕಗಳಲ್ಲೂ ಬಿಯರ್ ವಿಭಾಗವೇ ಗಮನಾರ್ಹವಾಗಿ ಉತ್ತಮ ಪ್ರದರ್ಶನ ನೀಡಿದ್ದು, ಬೇಡಿಕೆಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿದೆ.
IML ಮಾರಾಟದಲ್ಲಿ ಅಲ್ಪ ಏರಿಕೆ
ಬಿಯರ್‌ಗೆ ಹೋಲಿಸಿದರೆ ಭಾರತೀಯ ನಿರ್ಮಿತ ಮದ್ಯ (IML) ಮಾರಾಟದಲ್ಲಿ ಮಾತ್ರ ಸಾಧಾರಣ ಬೆಳವಣಿಗೆ ಕಂಡುಬಂದಿದೆ. 2026ರ ಎರಡನೇ ತ್ರೈಮಾಸಿಕದಲ್ಲಿ IML ಮಾರಾಟವು 171.69 ಲಕ್ಷ ಕೇಸ್ ಬಾಕ್ಸ್ ತಲುಪಿದೆ. ಹಿಂದಿನ ವರ್ಷದ 169.12 ಲಕ್ಷ ಕೇಸ್ ಬಾಕ್ಸ್‌ಗೆ ಹೋಲಿಸಿದರೆ ಶೇ.1.52ರಷ್ಟು ಏರಿಕೆಯಾಗಿದೆ.
ಮೊದಲ ತ್ರೈಮಾಸಿಕದಲ್ಲಿ IML ಮಾರಾಟ 173.81 ಲಕ್ಷ ಕೇಸ್ ಬಾಕ್ಸ್‌ನಿಂದ 175.14 ಲಕ್ಷ ಕೇಸ್ ಬಾಕ್ಸ್‌ಗೆ ಏರಿಕೆಯಾಗಿದ್ದು, 0.77% ಬೆಳವಣಿಗೆ ದಾಖಲಾಗಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು IML ಮಾರಾಟ 346.83 ಲಕ್ಷ ಕೇಸ್ ಬಾಕ್ಸ್ ಆಗಿದ್ದು, 2025ರ 342.93 ಲಕ್ಷ ಕೇಸ್ ಬಾಕ್ಸ್‌ಗೆ ಹೋಲಿಸಿದರೆ ಶೇ.1.14ರಷ್ಟು ಹೆಚ್ಚಾಗಿದೆ.
Alcohol Sales: ಹೊಸ ಅಬಕಾರಿ ನೀತಿಯ ಪರಿಣಾಮ
ಬಿಯರ್ ಬೇಡಿಕೆ ಹೆಚ್ಚಳ ಹಾಗೂ IML ಆದಾಯದ ಬೆಳವಣಿಗೆಗೆ ಇತ್ತೀಚಿನ ಅಬಕಾರಿ ಸುಂಕದ ಪರಿಷ್ಕರಣೆ ಪ್ರಮುಖ ಕಾರಣವಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಅಕ್ರಮ ಮದ್ಯ ವ್ಯಾಪಾರವನ್ನು ನಿಯಂತ್ರಿಸುವುದು ಹಾಗೂ ಕಾನೂನುಬದ್ಧ ಮಾರಾಟದ ಮಾರ್ಗಗಳನ್ನು ವಿಸ್ತರಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಅಬಕಾರಿ ನೀತಿಯಡಿ ಬಿಯರ್‌ನ ಬೆಲೆಯಲ್ಲಿ ಇಳಿಕೆಯಾಗಿದ್ದು, ತೆರಿಗೆ ವಿಧಿಸುವ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಇದ್ದ ಪ್ರಮಾಣ ಆಧಾರಿತ ತೆರಿಗೆ ವ್ಯವಸ್ಥೆಯ ಬದಲಿಗೆ, ಪಾನೀಯದಲ್ಲಿರುವ ವಾಸ್ತವಿಕ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆ ಜಾರಿಗೆ ಬಂದಿದೆ.
ಇದರ ಜೊತೆಗೆ, ನೈರುತ್ಯ ಮುಂಗಾರು ಅವಧಿಯಲ್ಲೂ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲು ಹಾಗೂ ಮಳೆ ಕೊರತೆ ಕಂಡುಬಂದಿದ್ದು, ಇದೂ ಬಿಯರ್ ಮಾರಾಟ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ವರದಿಯಾಗಿದೆ.


Click it and Unblock the Notifications
