ಆ 1 ರಿಂದ ರಾಜ್ಯದಲ್ಲಿ ಹಾಲು, ದಿನಸಿ, ಮದ್ಯ, ಇತರ ಸೇವೆಗಳ ಬೆಲೆ ಏರಿಕೆ- ಸಂಪೂರ್ಣ ಮಾಹಿತಿ, ವಿವರ ತಿಳಿಯಿರಿ
ಬೆಂಗಳೂರು, ಜುಲೈ 31: ಹಾಲು ಸೇರಿದಂತೆ ದಿನಸಿ ವಸ್ತುಗಳ ಬೆಲೆಗಳು ಆಗಸ್ಟ್ 1 ರಿಂದ ಹೆಚ್ಚಾಗಲಿವೆ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ಗ್ಯಾರಂಟಿಯಾಗಿದೆ. ಹಾಲು, ದಿನಸಿ ಪ್ರದಾರ್ಥಗಳು, ಮದ್ಯ ಹಾಗೂ ಇನ್ನಿತರ ಸೇವೆಗಳ ಬೆಲೆಗಳು ವ್ಯಾಪಕವಾಗಿ ಏರಲಿವೆ. ರಾಜ್ಯದಲ್ಲಿ ಯಾವ ವಸ್ತುಗಳ ಬೆಲೆಗಳು ಏರಿಕೆಯಾಗಲಿವೆ ಎಂಬುದರ ಕುರಿತು ಮಾಹಿತಿ, ಅಂಕಿಅಂಶ, ವಿವರ ಪಡೆಯಿರಿ.
ಹಾಲು: ರಾಜ್ಯದಲ್ಲಿ ನಂದಿನಿ ಹಾಲು ಆಗಸ್ಟ್ 1 ರಿಂದ ಪ್ರತಿ ಲೀಟರ್‌ಗೆ 3 ರೂ.ಗಳಷ್ಟು ದುಬಾರಿಯಾಗಲಿದೆ. ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಬ್ರಾಂಡ್‌ನಲ್ಲಿ ಲಭ್ಯವಿರುವ ಹಾಲು ದರವನ್ನು ಪ್ರತಿ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಿಸುವ ಪ್ರಸ್ತಾವನೆಯನ್ನು ಜುಲೈ 27 ರಂದು ಕರ್ನಾಟಕ ಸಚಿವ ಸಂಪುಟವು ಅನುಮೋದಿಸಿತು.

ಟೋನ್ಡ್ ಹಾಲಿನ ಪ್ಯಾಕ್ ಈಗ ಪ್ರತಿ ಲೀಟರ್‌ಗೆ 39 ರೂಪಾಯಿಯಿಂದ 42 ರೂಪಾಯಿಗೆ ಮಾರಾಟವಾಗಲಿದೆ. ಕೆಎಂಎಫ್ ಅಧಿಕಾರಿಗಳು ಪ್ರತಿ ಲೀಟರ್‌ಗೆ 5 ರೂ.ಗಳ ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ, ಈ ಬೇಡಿಕೆಯನ್ನು ಲೀಟರ್‌ಗೆ ಕೇವಲ 3 ರೂಪಾಯಿಗೆ ಸೀಮಿತಗೊಳಿಸಲಾಯಿತು.
ಹೋಟೆಲ್‌ಗಳು: ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿಯ ಬೆಲೆ ಶೇಕಡಾ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ತರಕಾರಿ ಮತ್ತು ಇತರೆ ದಿನಸಿ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘ ಹೇಳಿದೆ.

ಬೆಲೆ ಏರಿಕೆಯಿಂದಾಗಿ ವ್ಯಾಪಾರ ನಡೆಸುವುದು ಕಷ್ಟವಾಗಿದೆ ಎಂದು ಬೆಂಗಳೂರಿನ ಹೋಟೆಲ್ ಮಾಲೀಕರು ಹೇಳಿದ್ದಾರೆ.
ನಾವು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಮೇಲೆ 10 ಪ್ರತಿಶತದಷ್ಟು ಬೆಲೆಯನ್ನು ಹೆಚ್ಚಿಸುತ್ತೇವೆ ಎಂದು ಹೋಟೆಲ್ ಮಾಲೀಕರ ಸಂಘ ಹೇಳಿಕೊಂಡಿದೆ.
ತರಕಾರಿಗಳು: ಕಳೆದ ಕೆಲವು ವಾರಗಳಲ್ಲಿ ಟೊಮೆಟೊ ಬೆಲೆ ಏರಿಕೆಯು ಜನರನ್ನು ಬೆಚ್ಚಿಬೀಳಿಸಿದೆ. ಸೋಮವಾರ ಬೆಂಗಳೂರಿನಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 160 ರೂಪಾಯಿಗಳಿಂದ 180 ರೂಪಾಯಿಗಳಷ್ಟು ಆಗಿದೆ.

ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಇದರ ಬೆಲೆ 120 ರೂಪಾಯಿ ಆಗಿದೆ. ಟೊಮ್ಯಾಟೊ ಹೊರತುಪಡಿಸಿ, ಇತರ ತರಕಾರಿಗಳ ಬೆಲೆಗಳಲ್ಲಿಯೂ ತೀವ್ರ ಏರಿಕೆ ಕಂಡುಬಂದಿದೆ. ಹಸಿರು ಬಟಾಣಿ, ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರೆಟ್ ಮತ್ತು ಬೀನ್ಸ್‌ಗಳು ಕಳೆದ ಕೆಲವು ವಾರಗಳಲ್ಲಿ ಸುಮಾರು 100 ಪ್ರತಿಶತದಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ತರಕಾರಿಗಳು ಮತ್ತು ಇತರ ಅಡುಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮದ್ಯ: 2023-23ರ ಕರ್ನಾಟಕ ಬಜೆಟ್‌ನಲ್ಲಿ ಅಬಕಾರಿ ಸುಂಕದಲ್ಲಿ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 1 ರಿಂದ ಬಿಯರ್ ಸೇರಿದಂತೆ ಮದ್ಯದ ಬೆಲೆಗಳು ಹೆಚ್ಚಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತದಲ್ಲಿ ನಿರ್ಮಿತವಾಗಿರುವ ವಿದೇಶಿ ಮದ್ಯದ (ಐಎಂಎಫ್‌ಎಲ್) ಮೇಲಿನ ಸುಂಕವನ್ನು ಎಲ್ಲಾ ಸ್ಲ್ಯಾಬ್‌ಗಳಲ್ಲಿ ಶೇಕಡಾ 20 ರಷ್ಟು ಏರಿಕೆ ಮಾಡಿದ್ದಾರೆ. ಬಿಯರ್ ಮೇಲಿನ ಸುಂಕವನ್ನು ಶೇಕಡಾ ಹತ್ತರಷ್ಟು ಏರಿಕೆ ಮಾಡಿದ್ದಾರೆ.
ಆಸ್ತಿಯ ಮಾರ್ಗದರ್ಶನ ಮೌಲ್ಯ: ಕರ್ನಾಟಕ ಸರ್ಕಾರವು 2023-24ರ ಬಜೆಟ್‌ನಲ್ಲಿ ಸ್ಥಿರಾಸ್ತಿಗಳ ಮಾರ್ಗದರ್ಶಿ ಮೌಲ್ಯದಲ್ಲಿ ಶೇಕಡಾ 14 ರಷ್ಟು ಹೆಚ್ಚಳ ಮಾಡಿದೆ. ಇದು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಮಾರ್ಗದರ್ಶನ ಮೌಲ್ಯವು ಆಸ್ತಿಯನ್ನು ನೋಂದಾಯಿಸುವ ಕನಿಷ್ಠ ಮೌಲ್ಯವಾಗಿದೆ.

ಕೆಎಸ್‌ಆರ್‌ಟಿಸಿ ಗುತ್ತಿಗೆ ದರಗಳಲ್ಲಿ ಹೆಚ್ಚಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕೆಎಸ್‌ಆರ್‌ಟಿಸಿ ವಿಧಿಸುವ ಗುತ್ತಿಗೆ ದರಗಳು ಈಗ ದುಬಾರಿಯಾಗಲಿವೆ. ಸರ್ಕಾರವು ಸಾಂದರ್ಭಿಕ ಗುತ್ತಿಗೆ ಬಸ್‌ಗಳ ದರವನ್ನು ಆಗಸ್ಟ್ 1 ರಿಂದ ಜಾರಿಗೆ ತಂದಿದೆ. ಈ ಹೆಚ್ಚಳವು ಪ್ರತಿ ಕಿ.ಮೀಗೆ ₹2 ರಿಂದ 5 ರ ನಡುವೆ ಇರುತ್ತದೆ.
ಇತರೆ ವಸ್ತುಗಳೂ ದುಬಾರಿ: ಆಗಸ್ಟ್ 1 ರಿಂದ ಇತರ ವಸ್ತುಗಳು ದುಬಾರಿಯಾಗಲಿವೆ. ಇವುಗಳಲ್ಲಿ ಗಣಿಗಾರಿಕೆಯ ಮೇಲೆ ಪಾವತಿಸಬೇಕಾದ ರಾಯಲ್ಟಿ ಸೇರಿದೆ. ಇದರ ಪರಿಣಾಮವಾಗಿ ಜಲ್ಲಿ ಮತ್ತು ಮರಳಿನಂತಹ ಕಟ್ಟಡ ಸಾಮಗ್ರಿಗಳು ದುಬಾರಿಯಾಗುತ್ತವೆ. ಇದು ನಿರ್ಮಾಣ ವೆಚ್ಚವನ್ನು ಹೆಚ್ಚಿಸಲಿದೆ.
ಶಾಲಾ/ಕಾಲೇಜು ವಾಹನಗಳು, ಕ್ಯಾಬ್‌ಗಳು ಮತ್ತು ಟ್ರಕ್‌ಗಳ ಮೇಲೆ ಪಾವತಿಸಬೇಕಾದ ಇತರ ಮೋಟಾರು ವಾಹನ ತೆರಿಗೆಯು ಆಗಸ್ಟ್ 1 ರಂದು ದುಬಾರಿಯಾಗಲಿದೆ. ಮೇ 2023 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಘೋಷಿಸಲಾದ ಐದು ಭರವಸೆಗಳನ್ನು ಜಾರಿಗೆ ತರುವ ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದ ಬೆಲೆ ಏರಿಕೆಯು ಅಗತ್ಯವಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.












Click it and Unblock the Notifications