Waqf Board Scam: ವಾಲ್ಮೀಕಿ, ಮೂಡಾ ಆಯ್ತು... ಈಗ ವಕ್ಫ್ ಬೋರ್ಡ್ ಹಗರಣ!
ಬೆಂಗಳೂರು, ಜುಲೈ. 14: ರಾಜ್ಯದ ಸಚಿವರು, ರಾಜಕೀಯ ನಾಯಕರನ್ನು ವಿಚಾರಣೆಗೆ ಒಳಪಡುವಂತೆ ಮಾಡಿರುವ, ರಾಜ್ಯವನ್ನೇ ಬೆಚ್ಚಿಬೀಳಿಸಿದ ವಾಲ್ಮೀಕಿ ಕಾರ್ಪೊರೇಷನ್ ಹಗರಣದ ಬೆನ್ನಲ್ಲೇ ಮೂಡಾ ಹಗರಣ ಬೆಳಕಿಗೆ ಬಂದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈಗ ರಾಜ್ಯ ಸರ್ಕಾರಕ್ಕೆ ಮತ್ತೊಂದು ಹಗರಣ ತಲೆ ನೋವಾಗಿ ಪರಿಣಮಿಸಿದೆ.
ಕರ್ನಾಟಕ ವಕ್ಫ್ ಮಂಡಳಿಯಲ್ಲಿ (ಕರ್ನಾಟಕ ರಾಜ್ಯ ಔಕಾಫ್ ಮಂಡಳಿ) ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಆರೋಪ ಕೇಳಿ ಬಂದಿದೆ. ವಕ್ಫ್ ಬೋರ್ಡ್ ಮಾಜಿ ಸಿಇಒ ಜುಲ್ಫಿಕರುಲ್ಲಾ ವಿರುದ್ಧ 4 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗವಾಣೆ ಮಾಡಿದ್ದಾರೆ ಎಂದು ವಕ್ಫ್ ಮಂಡಳಿ ದೂರು ನೀಡಿದೆ.

ವಕ್ಫ್ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ತಮ್ಮ ಮಾಜಿ ಅಧಿಕಾರಿ ಬೊಕ್ಕಸಕ್ಕೆ ಒಟ್ಟು 8.03 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಗುಲ್ಬರ್ಗ ದರ್ಗಾಕ್ಕೆ ಸೇರಿದ ವಕ್ಫ್ ಆಸ್ತಿಯನ್ನು ರಾಜ್ಯ ಸರ್ಕಾರ ಅತಿಕ್ರಮಣ ಮಾಡಿದ್ದು, ಅದಕ್ಕೆ ಪ್ರತಿಯಾಗಿ 2.29 ಕೋಟಿ ರೂ ನೀಡಿದ್ದಾರೆ. ಇದಲ್ಲದೆ, ವಕ್ಫ್ ಮಂಡಳಿಯು ಧಾರ್ಮಿಕ ದತ್ತಿ ಇಲಾಖೆಯಿಂದ (ಮುಜರಾಯಿ ಇಲಾಖೆ) 1.79 ಕೋಟಿ ರೂಪಾಯಿ ಪಡೆದಿದೆ ಎಂದಿದ್ದಾರೆ.
"ಈ ಮೂಲಕ ಬೆನ್ಸನ್ ಟೌನ್ ಶಾಖೆಯಲ್ಲಿರುವ ಇಂಡಿಯನ್ ಬ್ಯಾಂಕ್ ಖಾತೆಗೆ 4,00,45,465 ರೂ. ಜಮಾ ಆಗಿದ್ದು, 2016ರ ನ.26ರಂದು ಚಿಂತಾಮಣಿ ಶಾಖೆಯಲ್ಲಿರುವ (ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ವಕ್ಫ್ ಬೋರ್ಡ್ ನ ಸಿಇಒ ವಿಜಯಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. )" ಎಂದು ದೂರುದಾರರು ಆರೋಪಿಸಿದ್ದಾರೆ.

ಈ ಹಣ ವರ್ಗಾವಣೆಯನ್ನು ಜುಲ್ಫಿಕರಲ್ಲಾ ಅವರು ವಕ್ಫ್ ಮಂಡಳಿಯ ಗಮನಕ್ಕೆ ತಂದಿಲ್ಲ. ಇದರಿಂದ ಮಂಡಳಿಗೆ 8.04 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಬ್ಬಾಸ್ ಹೇಳಿದ್ದಾರೆ. ಈ ಮೊತ್ತವನ್ನು ಸೂಕ್ತವಾಗಿ ಹೂಡಿಕೆ ಮಾಡಿದ್ದರೆ ಕಳೆದ ಎಂಟು ವರ್ಷಗಳಲ್ಲಿ 4,00,45,465 ರೂ.ಗಳ ಮೊತ್ತದ ಮೇಲೆ ಚಕ್ರಬಡ್ಡಿ ಜಮೆಯಾಗುತ್ತಿತ್ತು ಎಂದು ಊಹಿಸಿ ಬಂದಿರುವುದಾಗಿ ಹೇಳಲಾಗಿದೆ.
ಮಾರ್ಚ್ 31, 2022 ರಂದು ಜುಲ್ಫಿಕರಲ್ಲಾ ಅವರು ಹಣ ದುರುಪಯೋಗದ ಬಗ್ಗೆ ನೀಡಿದ ಉತ್ತರವು ಅತೃಪ್ತಿಕರವಾಗಿದೆ ಎಂದು ಪರಿಗಣಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಎರಡು ವರ್ಷಗಳ ನಂತರ, ಜೂನ್ 12, 2024 ರಂದು ಈ ವಿಷಯದ ಬಗ್ಗೆ ದೂರು ಸಲ್ಲಿಸಲಾಗುವುದು ಎಂದು ಮಂಡಳಿಯು ನಿರ್ಧರಿಸಿತು. ಅದರ ಪ್ರಕಾರ ಜುಲೈ 6, 2024 ರಂದು ಪ್ರಕರಣವನ್ನು ದಾಖಲಿಸಲಾಗಿದೆ.
ಇನ್ನು, ರಾಜ್ಯದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಿಂದ ಹಣ ದುರುಪಯೋಗ ಪಡಿಸಿಕೊಂಡಿರುವ ಹಗರಣ ಸದ್ದು ಮಾಡುತ್ತಿರುವಾಗಲೇ ವಕ್ಫ್ ಬೋರ್ಡ್ ಹಗರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications