ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ; ಕ್ಷೇತ್ರ ಹಂಚಿಕೆ ಕುರಿತು ಹೆಚ್ ಡಿ ದೇವೇಗೌಡರು ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 10: 2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿಯನ್ನ ಅಧಿಕೃತಗೊಳಿಸಿದ್ದು, ದಸರಾ ನಂತರ ಬಿಜೆಪಿ ಜತೆ ಸೀಟು ಹಂಚಿಕೆ ಮಾತುಕತೆ ನಡೆಯಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೈತ್ರಿ ಕುರಿತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು. ಸಂಸತ್ ಅಧಿವೇಶನದ ನಂತರ ನನ್ನ ಆರೋಗ್ಯ ಸ್ಥಿತಿ ಸುಧಾರಿಸಿದರೆ, ನಾನು ಅಥವಾ ಕುಮಾರಸ್ವಾಮಿ ಮತ್ತೊಮ್ಮೆ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡುತ್ತೇವೆ ಎಂದು ದೇವೇಗೌಡ್ರು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಮಾತುಕತೆಯಲ್ಲಿಹಿಂದಿನ ನಾಲ್ಕು ಚುನಾವಣೆಯ ಮತ ಗಳಿಕೆ ಒಟ್ಟುಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ. ದಸರಾ ಬಳಿಕ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ಹಿಂದಿನ ಚುನಾವಣೆಯ ಮತಗಳಿಕೆ ಒಟ್ಟು ಗೂಡಿಸಿ ಒಂದು ನಿರ್ಧಾರಕ್ಕೆ ಬರಲಾಗಿದೆ.
ಆದರೆ ಯಾವ ಕ್ಷೇತ್ರ ಅನ್ನೋ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಮಂಡ್ಯ ಸೇರಿದಂತೆ ಯಾವುದೇ ತೀರ್ಮಾನ ಆಗಿಲ್ಲ. ಸದ್ಯ ಹಾಸನ ಜೆಡಿಎಸ್, ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿನೇ ಇದೆ. ಕಾಂಗ್ರೆಸ್ 28 ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಆ ಕಾರಣಕ್ಕೆ ಬಿಜೆಪಿ,ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ಜಾತಿ ಆಧಾರದ ಮೇಲೆ ಮತಗಳು ಹೇಗೆ ವಿಭಜನೆ ಆಗುತ್ತದೆ ಎನ್ನುವ ಬಗ್ಗೆ ನಾನು ಇವತ್ತು ವಾದ ಮಾಡಲ್ಲ. ಮತದಾರರ ತೀರ್ಮಾನ ಹೇಗಿರಲಿದೆ ಎಂಬುದನ್ನು ನೋಡಬೇಕಷ್ಟೆ, ಮೈತ್ರಿ ಮಾಡಿಕೊಳ್ಳುವ ಮೊದಲು 19 ಶಾಸಕರು, ಎಂಟು ಎಂಎಲ್‌ಸಿಗಳು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದೇವೆ. ನಮ್ಮ ನಾಯಕರ ಜತೆ ಮಾತನಾಡಿದ ನಂತರ ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸ್ಪಷ್ಟಪಡಿಸಿದರು.
ಶಿವಮೊಗ್ಗ ಗಲಭೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಶಿವಮೊಗ್ಗ ಘಟನೆ ಬಗ್ಗೆ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಾರೆ. ಮಾಧ್ಯಮದಲ್ಲಿ ಬಂದಿರುವುದನ್ನು ಕೇಳಿದ್ದೇನೆಯೇ ಹೊರತು ವಾಸ್ತವಾಂಶ ತಿಳಿದಿಲ್ಲ. ಶಿವಮೊಗ್ಗ ಸೆನ್ಸಿಟಿವ್ ಏರಿಯಾ. ಶಿವಮೊಗ್ಗದಲ್ಲಿ ಹಿಂದಿನ ಹಲವಾರು ಘಟನೆಗಳನ್ನು ಗಮನಿಸಿದಾಗ ಇಂತಹ ವಿಷಯಗಳಲ್ಲಿ ಸರಕಾರ ಮುಂಜಾಗ್ರತೆ ವಹಿಸಬೇಕಿತ್ತು ಎಂದು ಹೆಚ್ ಡಿ ದೇವೇಗೌಡ್ರು ಹೇಳಿದರು.











Click it and Unblock the Notifications