ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋರಾಟಗಾರರೇ, ಬಾಹುಬಲಿ ಪ್ರಕರಣ ಮುಗೀತಲ್ಲ? ಈಗ ಇತ್ತ ಗಮನ ಹರಿಸಿ...

ಎಂಟು ವರ್ಷಗಳ ಹಿಂದೆ ತಮಿಳು ನಟ, ನಿರ್ದೇಶಕ ಸತ್ಯರಾಜ್ ಆಡಿದ್ದ ಮಾತುಗಳನ್ನು ಈಗ ಮೆಲುಕು ಹಾಕಿ ಆಕ್ರೋಶ ವ್ಯಕ್ತಪಡಿಸುವ ಅಗತ್ಯವಿತ್ತೇ ?

|
Google Oneindia Kannada News

ಕಳೆದೊಂದು ತಿಂಗಳಿನಿಂದ 'ಬಾಹುಬಲಿ-2' ವಿರುದ್ಧ ಬಡಿದಾಡುತ್ತಿರುವ ಕನ್ನಡ ಹೋರಾಟಗಾರರ ಕೋಪಾಕ್ರೋಶಕ್ಕೆ ಬಾಹುಬಲಿಯ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕ್ಷಮೆ ಕೋರಿದ್ದಾರೆ. ಇದರಿಂದಾಗಿ, ಸದ್ಯಕ್ಕೆ ಬಾಹುಬಲಿ ವಿವಾದ ಸುಖಾಂತ್ಯಗೊಂಡಿದೆ.

ಕನ್ನಡಿಗರ ಸ್ವಾಭಿಮಾನ, ಔದಾರ್ಯಗಳಿಗೆ ಧಕ್ಕೆಯುಂಟಾದಾಗ ಕನ್ನಡಿಗರು ಹೀಗೆ ಸಿಡಿದೇಳುವುದು ಅನಿವಾರ್ಯವೂ ಹೌದು. ಹೋರಾಟಗಾರರ ವಾದವನ್ನು ಒಪ್ಪುವಂಥ ಮಾತೇ. ಹೋರಾಟಗಾರರ ಪ್ರತಿಯೊಂದು ಹೆಜ್ಜೆಗೂ ನಮ್ಮ ಬೆಂಬಲವಿದೆ.[ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!]

ಈಗ ಕನ್ನಡಿಗರ ಕೋಪಾವೇಶಕ್ಕೆ ಹೊಸ ಉತ್ಸಾಹ ಬಂದಿದೆ. ನಮ್ಮ ಕೂಗಿಗೆ ಅದೆಷ್ಟು ಶಕ್ತಿಯಿದೆ ಎಂಬುದೂ ಸಾಬೀತಾಗಿದೆ. ಆದರೆ, ಇದೇ ವೇಳೆ, ನಮ್ಮಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಕನ್ನಡ ಸಂಘಟನೆಗಳು ಹೋರಾಡಬೇಕಿದೆ.

After Bahubali row, pro Kannada organisations have much more to do

ಕನ್ನಡದ ಸ್ವಾಭಿಮಾನ ಕೇವಲ ಒಂದು ಚಿತ್ರ ನಟನ ವಿರುದ್ಧವಷ್ಟೇ ಹೊಮ್ಮಿದರೆ ಸಾಲದು, ಇದು ಸಮಗ್ರ ಕನ್ನಡಿಗರನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳ ವಿರುದ್ಧವೂ ಮೊಳಗಬೇಕು.[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ಕ್ಷಮೆ ಕೇಳಿದ ಕಟ್ಟಪ್ಪ.!]

ಕನ್ನಡ ನಾಡು, ನುಡಿಗೆ ಸಂಬಂಧಪಟ್ಟ ಸಮಸ್ಯೆಗಳ ಸರಮಾಲೆಯೇ ಇದೆ ನಮ್ಮಲ್ಲಿ. ರಾಜಧಾನಿಯಲ್ಲಿ ಕನ್ನಡಿಗರು ಅನುಭವಿಸಿತ್ತಿರುವ ಸಮಸ್ಯೆಗಳು ಒಂದು ರೀತಿಯದ್ದಾದರೆ, ಗಡಿ ಪ್ರದೇಶಗಳಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆ, ಕನ್ನಡದ ಮೇಲೆ ಆಗುತ್ತಿರುವ ಪರಭಾಷೆಗಳ ಸವಾರಿ - ಇವೇ ಮುಂತಾದ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ.[ವಾಟಾಳ್ ಸಂದರ್ಶನ, ನಮ್ಮ ವಿರೋಧ ಸತ್ಯರಾಜ್ ಗೆ ಮಾತ್ರ]

ತೀರಾ ಹಳೆಯ ಸಮಸ್ಯೆಗಳೇನಿವೆಯೋ ಅವೆಲ್ಲವುಗಳ ಜತೆಗೇ ಈಗ ಹೊಸ ಸಮಸ್ಯೆಗಳೂ ಬಂದು ಸೇರಿಕೊಂಡಿವೆ. ಒಂದೆಡೆ, ಸಿಬಿಐಎಸ್ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಹೇರುವ ಕುತಂತ್ರ ನಡೆಯುತ್ತಿದ್ದರೆ, ಮತ್ತೊಂದೆಡೆ, ರೈಲ್ವೇ ಇಲಾಖೆಯ ಟಿಕೆಟ್ ಗಳಲ್ಲಿ ಕನ್ನಡ ಮಂಗಮಾಯವಾಗಿದೆ ಎಂದ ಕೂಗೂ ಕೇಳಿಬರುತ್ತಿವೆ.

ಹಿಂದಿ ಹೇರಿಕೆ
ಮಾರ್ಚ್ 31ರಂದು ರಾಷ್ಟ್ರಪತಿ ಹೊರಡಿಸಿದ ಆದೇಶದಲ್ಲಿ, ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಲು ಎಲ್ಲ ಗಂಭೀರ ಪ್ರಯತ್ನವನ್ನೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾಡಬೇಕು ಎಂದು ತಿಳಿಸಲಾಗಿದೆ. "ಮೊದಲ ಹೆಜ್ಜೆಯಾಗಿ ಎಲ್ಲ ಸಿಬಿಎಸ್ಇ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಹಿಂದಿ ಕಡ್ಡಾಯ ಮಾಡಬೇಕು" ಎನ್ನಲಾಗಿದೆ. ಭಾರತದಲ್ಲಿ 18,546 ಹಾಗೂ ಇತರ 25 ದೇಶಗಳಲ್ಲಿ 210 ಸಿಬಿಎಸ್ಇ ಶಾಲೆಗಳಿವೆ.[ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಕಟ್ಟಪ್ಪ]

ಇದರಿಂದ ಈಗಾಗಲೇ ಹಿಂದಿಯೇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರಕಾರವು ಸ್ಥಳೀಯ ಭಾಷೆಗಳನ್ನು ದಮನ ಮಾಡಲು ಯತ್ನಿಸುತ್ತಿದೆ. ಹಿಂದಿ ಭಾಷೆಯನ್ನು ವಿನಾಕಾರಣ ಹೇರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಕನ್ನಡಕ್ಕಿಲ್ಲ ಮಾನ್ಯತೆ
ಇನ್ನು, ರೈಲ್ವೇ ಇಲಾಖೆಯಲ್ಲಿ ಹಾಗೂ ಬ್ಯಾಂಕುಗಳಲ್ಲಿ ಕನ್ನಡಕ್ಕೆ ಮಾನ್ಯತೆಯೇ ಇಲ್ಲ ಎಂಬಂತಾಗಿದೆ. ಕನ್ನಡದಲ್ಲಿ ರೈಲ್ವೇ ರಿಸರ್ವೇಷನ್ ಟಿಕೆಟ್ ಇಲ್ಲ. ಎಷ್ಟೋ ಖಾಸಗಿ ಬ್ಯಾಂಕ್ ಬಿಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲೇ ಕನ್ನಡದಲ್ಲಿ ಸೇವೆಗಳಿಲ್ಲ. ಚಲನ್, ಚೆಕ್ ಎಲ್ಲವನ್ನೂ ಇಂಗ್ಲೀಷ್ ಅಥವಾ ಹಿಂದಿಯಲ್ಲೇ ತುಂಬ ಬೇಕು. ಇತ್ತೀಚೆಗೆ, ಕಾರ್ಪೋರೇಷನ್ ಬ್ಯಾಂಕ್ ನಲ್ಲಿರುವ ಅರ್ಜಿ, ಚಲನ್ ಎಲ್ಲವೂ ಇಂಗ್ಲೀಷ್, ಹಿಂದಿ ಮಯ ಆಗಿವೆ.

ಅಷ್ಟೇ ಏಕೆ, ಕೆಲವಾರು ಏಟಿಎಂಗಳಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಹೆಸರಿಗೆ ಮಾತ್ರ ಕನ್ನಡ ಆಪ್ಷನ್ ಇರುತ್ತದಷ್ಟೇ. ಆ ಬಟನ್ ಅಮುಕಿದರೆ, ಅಲ್ಲಿ ಇಂಗ್ಲೀಷ್ ಸೂಚನೆಗಳು ಕಾಣಬರುತ್ತವೆ.

ಇಲ್ಲೆಲ್ಲಾ ನಮ್ಮದಲ್ಲದ ಹಿಂದಿ, ಇಂಗ್ಲೀಷ್ ಭಾಷೆ ಬಿಟ್ಟು ಕನ್ನಡದಲ್ಲೇ ಸೇವೆ ನೀಡಿ ಎಂದು ಕೇಳುತ್ತಾ ಬಂದಿದ್ದರೂ ಇಂದಿಗೂ ನೀಡಿಲ್ಲ. ಈ ಕುರಿತು ಯಾರೂ ಹೋರಾಟವನ್ನೂ ಮಾಡುತ್ತಿಲ್ಲ.

2013ರ ಸುಮಾರಿನಲ್ಲಿ ಇದೇ ವಿಷಯವಾಗಿ ಮುಖ್ಯಮಂತ್ರಿಯವರ ಕಚೇರಿಯಿಂದಲೂ ನೈರುತ್ಯ ರೈಲ್ವೇ ಅಧಿಕಾರಿಗಳಿಗೆ ಪತ್ರ ಬರೆದು ಕನ್ನಡದಲ್ಲಿ ಟಿಕೆಟ್ ಮುದ್ರಿಸಲು ಸೂಚಿಸಲಾಗಿತ್ತು. ಆದರೆ ಕುಂಟು ನೆಪ ಹೇಳಿ ರೈಲ್ವೇ ಇಲಾಖೆ ನುಣಿಚಿಕೊಂಡಿತ್ತು. ಹೀಗೆ ಇವತ್ತಿಗೂ ರೈಲ್ವೇ ಟಿಕೆಟ್ ನಲ್ಲಿ ಕನ್ನಡ ಭಾಷೆ ಕಾಣಿಸುತ್ತಿಲ್ಲ.

ಚಿತ್ರರಂಗದಲ್ಲೂ ಹಲವಾರು ಸಮಸ್ಯೆಗಳಿವೆ
ಇನ್ನು, ಚಿತ್ರರಂಗದ ವಿಚಾರಕ್ಕೇ ಬರುವುದಾದರೆ, ರಾಜ್ಯ ಸರ್ಕಾರವು, ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳ ಟಿಕೆಟ್ ದರವನ್ನು ಗರಿಷ್ಠ 200 ರು.ಗಳಿಗೆ ನಿಗದಿಪಡಿಸಿ ಹೊರಡಿಸಿದ ಆದೇಶ ಇನ್ನೂ ಅನುಷ್ಠಾನಗೊಂಡಿಲ್ಲ.

ರಾಜ್ಯ ಸರ್ಕಾರದ ಈ ಹೆಜ್ಜೆಗೆ ಪ್ರತಿ ತಂತ್ರ ಹೆಣೆಯುತ್ತಿರುವ ಕೆಲ ಮಲ್ಟಿಪ್ಲೆಕ್ಸ್ ಗಳು ಕನ್ನಡ ಚಿತ್ರಗಳಿಗೆ ಎ.ಸಿ. ಹೋಕೋದಿಲ್ಲ ಅಂತ ತಕರಾರು ತಗೆದಿವೆ.

ಇಲ್ಲಿ ಬಂದು ವ್ಯಾಪಾರ ಹೂಡಿ, ಇಲ್ಲಿಂದ ಬಂದ ಹಣದಿಂದಲೇ ಲಾಭ ಎಣಿಸುತ್ತಿರುವ ಈ ಮಲ್ಟಿಪ್ಲೆಕ್ಸ್ ಗಳ ಮಾಲೀಕರು ಈ ನೆಲದ ಜನರಿಗೆ, ಕಲೆ ಮಾಡುತ್ತಿರುವ ಅಪಮಾನ ಖಂಡಿತವಾಗಿಯೂ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂಥದ್ದೇ. ಇದರ ವಿರುದ್ಧ ಒಂದೆರಡು ದಿನ ಹೋರಾಡಿ ಸುಮ್ಮನಾದ ನಾವು ಈ ಬಗ್ಗೆ ಮತ್ತಷ್ಟು ಯೋಚಿಸಬೇಕಿದೆ.

ಇನ್ನು, ಪರಭಾಷಾ ಚಿತ್ರಗಳು ಆಯಾ ರಾಜ್ಯಗಳಲ್ಲಿ ಬಿಡುಗಡೆಯಾಗಿ 4 ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು ಎಂಬ ನಿಲುವು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ? ಇವತ್ತು ಕನ್ನಡ ಚಿತ್ರರಂಗದ ಚಟುವಟಿಕೆಗಳ ಕೇಂದ್ರ ಭಾಗವಾದ ಬೆಂಗಳೂರಿನ ಗಾಂಧೀ ನಗರದಲ್ಲೇ ಕನ್ನಡ ಚಿತ್ರಗಳಿಗೆ ಥಿಯೇಟರ್ ಗಳು ಸಿಗುತ್ತಿಲ್ಲ.

ಇನ್ನು, ಭಾಷೆ ವಿಚಾರಕ್ಕೆ ಬಂದರೆ, ಉತ್ತರದಲ್ಲಿ ಮರಾಠಿಗರ ಪ್ರಾಬಲ್ಯ, ಪೂರ್ವದ ಗಡಿಭಾಗಗಳಲ್ಲಿ ತೆಲುಗು, ದಕ್ಷಿಣ ಕಡೆಗೆ ಬಂದರೆ ಮಲಯಾಳಂ, ತಮಿಳಿನ ಪ್ರಾಬಲ್ಯ ದಿನೇ ದಿನೇ ಹೆಚ್ಚಾಗುತ್ತಿದೆ.

ಇನ್ನು, ನೀರಿನ ವಿಚಾರಕ್ಕೆ ಬಂದರೆ, ಕಾನೂನಿನ ಹೆಸರಿನಲ್ಲಿ ಕನ್ನಡಿಗರ ಸುಲಿಗೆಯಾಗುತ್ತಿದೆ.

ಹೀಗೆ, ಪಟ್ಟಿ ಮಾಡುತ್ತಾ ಹೋದರೆ, ಅನೇಕ ವಿಚಾರಗಳು ಸಿಗುತ್ತವೆ. ನಮಗೆ ಈ ಸಮಸ್ಯೆಗಳು ಬಗೆಹರಿಯಬೇಕು. ಇವು ಎಷ್ಟು ಬೇಗ ಬಗೆಹರಿಯುತ್ತವೋ ಅಷ್ಟು ಬೇಗ ಕನ್ನಡಿಗರಿಗೆ, ಕನ್ನಡ ನಾಡಿಗೆ ಒಳ್ಳೆಯದು. ಹಾಗಾಗಿ, ಕನ್ನಡ ಪರ ಸಂಘಟನೆಗಳು ಈಗ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಕರ್ನಾಟಕದಲ್ಲೇ ಕನ್ನಡಿಗರ ಸ್ವಾಭಿಮಾನ ಕೆಣಕುವ ವ್ಯವಸ್ಥೆಗಳು, ರೀತಿ ನೀತಿಗಳು ಬೇರೂರಿದ್ದು ಅವುಗಳ ಉಚ್ಛಾಟನೆ ಮಾಡಬೇಕಿದೆ.

English summary
Finally Kattappa Controversy ended up with happy ending on April 21, 2017. But, What next? There are still so many problems in Karnataka, various rules and attitudes of banks or other institutions are insulting Kannada. Now, the Pro-Kannada activists should stand up to eradicate them too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X