ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರಿಗೆ ಹೆಚ್ಚುವರಿ ಖಾತೆ?
ಬೆಂಗಳೂರು, ಜೂನ್ 11: ಸಣ್ಣ ನೀರಾವರಿ ಖಾತೆ ಪಡೆದುಕೊಂಡಿರುವ ಮೇಲುಕೋಟೆ ಶಾಸಕ, ಸಚಿವ ಸಿ.ಎಸ್. ಪುಟ್ಟರಾಜು ಅವರಿಗೆ ಮತ್ತೊಂದು ಖಾತೆ ಸಿಗಲಿದೆಯಾ? ಹೌದು ಎನ್ನುತ್ತಿವೆ ಮೂಲಗಳು.
ಶನಿವಾರ ರಾತ್ರಿ ಮೈಸೂರಿಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಖಾತೆ ಹಂಚಿಕೆಯಿಂದ ಅಸಮಧಾನಗೊಂಡಿದ್ದ ಪುಟ್ಟರಾಜು ಅವರೊಂದಿಗೆ ಗೌಪ್ಯ ಸಭೆ ನಡೆಸಿದ್ದರು.
ಈ ಭೇಟಿ ವೇಳೆ ಸಚಿವರನ್ನು ಎಚ್.ಡಿ. ಕುಮಾರಸ್ವಾಮಿ ಸಂತೈಸಿದ್ದು, ಹೆಚ್ಚುವರಿ ಖಾತೆ ಜೊತೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಹಾಗೂ ಎಚ್.ಡಿ. ದೇವೇಗೌಡರ ಬೀಗರಾದ ಡಿ.ಸಿ. ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಿದ್ದಕ್ಕೆ ಪುಟ್ಟರಾಜು ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಜೊತೆಗೆ ಬಹಿರಂಗವಾಗಿಯೂ ತಮ್ಮ ಅಸಮಧಾನವನ್ನು ಹೊರಹಾಕಿದ್ದರು.
ಆದರೆ ಸಣ್ಣ ನೀರಾವರಿ ಖಾತೆ ಸಿಕ್ಕಿರುವುದು ನನಗೆ ಖುಷಿ ಕೊಟ್ಟಿದೆ ಎಂದು ಸಿ.ಎಸ್. ಪುಟ್ಟರಾಜು ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
"ಸಣ್ಣ ನೀರಾವರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದು ನನಗೆ ತುಂಬಾ ಸಂತಸ ತಂದಿದೆ. ನನಗೆ ಬೆಂಬಲ ನೀಡಿದ ಮೇಲುಕೋಟೆ ಕ್ಷೇತ್ರದ ಜನತೆ, ಮಂಡ್ಯ ಜನತೆ, ಪಕ್ಷದ ಕಾರ್ಯಕರ್ತರಿಗೆ, ಶ್ರೀ ಎಚ್.ಡಿ. ದೇವೇಗೌಡರಿಗೆ ಹಾಗೂ ಶ್ರೀ ಎಚ್.ಡಿ. ಕುಮಾರಸ್ವಾಮಿಯವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ," ಎಂದು ಅವರು ಹೇಳಿದ್ದಾರೆ.












Click it and Unblock the Notifications