ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಅದ್ಭುತ ಸಾಧನೆ
2nd PUC Results 2025: ರಾಜ್ಯದಲ್ಲಿ ಮಾರ್ಚ್ 1ರಿಂದ 20ರ ವರೆಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ಏಪ್ರಿಲ್ 8ಕ್ಕೆ ಫಲಿತಾಂಶ ಬಿಡುಗಡೆಯಾಗಿದ್ದು, ಬಡಕುಟುಂಬದ ಹಲವಾರು ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಹಾಗೆಯೇ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಪುತ್ರಿ ಸಹ ದ್ವಿತೀಯ ಪಿಯುಸಿಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.
ಈಗಾಗಲೇ ಬಳ್ಳಾರಿ ಜಿಲ್ಲೆಯ ಲಾರಿ ಡ್ರೈವರ್ ಪುತ್ರಿ ಸಂಜನಾ ಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 597 ಅಂಕ ಪಡೆದಿದ್ದಾರೆ. ಇನ್ನು ಬಳ್ಳಾರಿಯ ನಿರ್ಮಲಾಗೆ 596 ಅಂಕಗಳು ಬಂದಿವೆ ಎಂದು ತಿಳಿದುಬಂದಿದೆ. ಹಾಗೆಯೇ ನಟ ಪುನೀತ್ ರಾಜ್‌ಕುಮಾರ್ ಅಬರಿಗೆ ಪರ್ಸನಲ್ ಬಾಡಿಗಾರ್ಡ್ ಆಗಿದ್ದ ಛಲಪತಿ ಅವರ ಪುತ್ರಿ ಅಮೂಲ್ಯ ಕೂಡ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದಾರೆ.

ಛಲಪತಿ ಹಾಗೂ ಲಕ್ಷ್ಮೀ ದಂಪತಿ ಪುತ್ರಿ ಅಮೂಲ್ಯ ಎಂಬುವವರು ದ್ವಿತೀಯ ಪಿಯುಸಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾತೆ. ವಾಣಿಜ್ಯ ವಿಭಾಗದಲ್ಲಿ ಓದಿದ ಅಮೂಲ್ಯ ಒಟ್ಟಾರೆ 600ಕ್ಕೆ 566 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಶೇಕಡ 94.33 ಪರ್ಸಂಟೇಜ್ ಪಡೆದು ಗಮನ ಸೆಳೆದಿದ್ದಾರೆ. ಈ ಬಗ್ಗೆ ತಂದೆ ಛಲಪತಿ ಕೂಡ ಹೆಮ್ಮೆಪಟ್ಟಿದ್ದಾರೆ.
ಯಾವ ಭಾಷೆಯಲ್ಲಿ ಎಷ್ಟು ಅಂಕ?
* ಕನ್ನಡ - 98
* ಇಂಗ್ಲೀಷ್ - 90
* ಅರ್ಥಶಾಸ್ತ್ರ - 97
* ಬಿಸಿನೆಸ್ ಸ್ಟಡೀಸ್ - 90
* ಅಕೌಂಟೆನ್ಸಿ - 96
* ಸಂಖ್ಯಾಶಾಸ್ತ್ರ - 95
ಪುನೀತ್ ರಾಜ್ ಕುಮಾರ್ ಇದ್ದಾಗ ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋದರೂ, ಅವರೊಂದಿಗೆ ಛಲಪತಿ ಇದ್ದೇ ಇರುತ್ತಿದ್ದರು. ಹೀಗೆ ಪುನೀತ್ ರಾಜ್‌ಕುಮಾರ್ ಅವರ ಭದ್ರತೆಯಲ್ಲಿ ಯಾವುದೇ ಕುಂದು ಆಗದಂತೆ ಅವರು ಕೆಲಸ ಮಾಡುತ್ತಿದ್ದರು. ನಿನ್ನಿಂದಲೇ ಸಿನಿಮಾ ಚಿತ್ರಿಕರಣ ನಡೆಯುತ್ತಿದ್ದ ಸಂದರ್ಭ, ನ್ಯೂಯಾರ್ಕ್ ಶೂಟಿಂಗ್ ಶೆಡ್ಯೂಲ್ ಮುಗಿಸಿದ ಬಳಿಕ ಪುನೀತ್ ರಾಜ್‌ಕುಮಾರ್‌ಗೆ ಬಾಡಿಗಾರ್ಡ್ ಆಗಿ ಛಲಪತಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತಿಳಿದುಬಂದಿದೆ.
ಪುನೀತ್ ರಾಜ್‌ಕುಮಾರ್ ಅವರಿಗೆ ತುಂಬಾ ವರ್ಷಗಳಿಂದ ಬಾಡಿಗಾರ್ಡ್ ಆಗಿದ್ದ ಛಲಪತಿ ಕೊನೆಗೂ ತಮ್ಮ ಕೆಲಸವನ್ನ ತೊರೆದಿದ್ದರು. ಅಪ್ಪು ನಿಧನರಾದ 7 ತಿಂಗಳ ಬಳಿಕ ಭಾರದ ಮನಸ್ಸಿನಿಂದಲೇ ತಮ್ಮ ಕೆಲಸವನ್ನು ತೊರೆದಿದ್ದರು. ಅಲ್ಲದೆ, ಬೆಂಗಳೂರನ್ನೇ ಬಿಟ್ಟು ಹೊರಟಿದ್ದರು.
ಇನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶವನ್ನು ಏಪ್ರಿಲ್ 8ರಂದು ಪ್ರಕಟಿಸಿತ್ತು. ರಾಜ್ಯದಲ್ಲಿ ಒಟ್ಟಾರೆ ಶೇಕಡಾವಾರು 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷದ ಶೇಕಡಾ 81.15ಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇಕಡ 7.7ರಷ್ಟು ಕುಸಿತವಾಗಿದೆ.
ಈ ವರ್ಷ ಪರೀಕ್ಷೆಗೆ ಹಾಜರಾದ 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನ ಗಳಿಸಿದ್ದು, ಮತ್ತೇ ಹುಡುಗಿಯರೇ ಮೂರು ವಿಭಾಗಗಳಲ್ಲಿಯೂ ಹುಡುಗರಿಗಿಂತ ಮೇಲುಗೈ ಸಾಧಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.











Click it and Unblock the Notifications