ರೈತರಿಗೆ ಭೂಸ್ವಾಧೀನಕ್ಕಾಗಿ 8.38 ಕೋಟಿ ಬಿಡುಗಡೆ: ಮಾಹಿತಿ ಕೊಟ್ಟ ಹೆಚ್.ಕೆ. ಪಾಟೀಲ್
ಬೆಳಗಾವಿ, ಡಿಸೆಂಬರ್ 11: ವಿವಿಧ ಜಿಲ್ಲೆಗಳ ರೈತರ ಕೃಷಿ ಭೂಮಿಗೆ ನೀರುಣಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ನೀಡಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ರೈತರಿಗೆ ಭೂಸ್ವಾಧೀನದ ಹಣ ಪಾವತಿಸಲು ಅಗತ್ಯವಿರುವ 8.38 ಕೋಟಿ ರೂ. ಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ವಿಧಾನಸಭೆಯಲ್ಲಿ ಶಾಸಕ ಕೃಷ್ಣ ನಾಯಕ್ ಅವರ ಗಮನಸೆಳೆಯುವ ಸೂಚನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು 2.65 ಲಕ್ಷ ಎಕರೆ ಕೃಷಿ ಭೂಮಿಗೆ ನೀರು ಒದಗಿಸುವ ಸಲುವಾಗಿ ರೂಪಿಸಲಾಗಿತ್ತು. ಹೂವಿನ ಹಡಗಲಿ ತಾಲ್ಲೂಕು ವ್ಯಾಪ್ತಿಯಲ್ಲಿ 35,791 ಎಕರೆ ಭೂಮಿಗೆ ನೀರು ಒದಗಿಸಲಾಗುತ್ತಿದೆ.

ಗದಗ ಜಿಲ್ಲೆಯ ಹಲವು ಭಾಗಗಳಿಗೂ ನೀರು ಈಗಾಗಲೆ ಬಂದಿದೆ. ಡಂಬಳ ಕೆರೆಯನ್ನೂ ಕೂಡ ಇದೇ ಯೋಜನೆಯಡಿ ತುಂಬಲಾಗುತ್ತಿದೆ. ಹೂವಿನ ಹಡಗಲಿ ತಾಲ್ಲೂಕಿನಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಸಮಸ್ಯೆಗಳನ್ನು ಪರಿಹರಿಸಿ, ಹೆಚ್ಚಿನ ಸೌಲಭ್ಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಯೋಜನೆಗಾಗಿ ಹೂವಿನಹಡಗಲಿ ತಾಲ್ಲೂಕಿನಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಭೂಸ್ವಾಧೀನದ ಪರಿಹಾರಕ್ಕಾಗಿ 8.38 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದು ವಿಳಂಬವಾಗಿದ್ದು, ಇದೀಗ ಶೀಘ್ರ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು.
ಈ ಯೋಜನೆಯಲ್ಲಿ ಹಲವು ಕಡೆಗಳಲ್ಲಿ ಪೈಪ್‍ಲೈನ್ ಹಾಳಾಗಿ ಸೋರಿಕೆಯಿಂದ ರೈತರ ಜಮೀನುಗಳಲ್ಲಿ ನೀರು ನಿಲ್ಲುತ್ತಿರುವುದು, ಹಾಗೂ ಮೋಟಾರುಗಳು ಕೂಡ ಹಳೆಯದಾಗಿದ್ದು ಪದೇ ಪದೇ ರಿಪೇರಿಗೆ ಬರುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಹೀಗಾಗಿ ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಅನುದಾನದ ಅಗತ್ಯ ಬರುತ್ತದೆ. ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ್, ಶಾಸಕ ಜಿ.ಸಿ. ಪಾಟೀಲ್, ಉನ್ನತಾಧಿಕಾರಿಗಳು ಸೇರಿದಂತೆ ನಾವು ಕೂಡ ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಯೋಜನೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಹೆಚ್ಚಿನ ಅನುದಾನ ಪಡೆಯಲು ಶ್ರಮಿಸಲಾಗುವುದು ಎಂದು ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.












Click it and Unblock the Notifications